ಉಗ್ರಂ ಮಂಜು ಕನ್ನಡದ ಖ್ಯಾತ ಖಳನಟ ಮತ್ತು ಪೋಷಕ ನಟ. ಇವರ ಮೊದಲ ಹೆಸರು ಮಂಜುನಾಥ್ ಗೌಡ. 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಶ್ರೀಮುರಳಿ ನಟಿಸಿದ್ದ 'ಉಗ್ರಂ' ಸಿನಿಮಾದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡರು. ಆ ಬಳಿಕ ಚಿತ್ರರಂಗದಲ್ಲಿ 'ಉಗ್ರಂ ಮಂಜು' ಅಂತಲೇ ಜನಪ್ರಿಯತೆ ಗಳಿಸಿದರು. ಅಂದ್ಹಾಗೆ ಇವರು ಮೂಲತಃ ಕೋಲಾರದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರಿಗೆ 35 ವರ್ಷ ಎನ್ನಲಾಗಿದೆ.
ಯೋಧನಾಗುವ ಕನಸು
ಹೈಸ್ಕೂಲ್‌ನಲ್ಲಿ ರಾಜ್ಯಮಟ್ಟದ ಕಬ್ಬಡಿ ಹಾಗೂ ಖೋ ಖೋ ಪ್ಲೇಯರ್ ಆಗಿದ್ದ ಉಗ್ರಂ ಮಂಜು, ಬಾಲ್ಯದಲ್ಲಿಯೇ ಯೋಧನಾಗುವ ಕನಸು ಕಂಡಿದ್ದರು. ಆರ್ಮಿ ಆಫೀಸರ್ ಆಗಿ ದೇಶ ಸೇವೆ ಮಾಡಬೇಕು ಎಂದುಕೊಂಡಿದ್ದರು. ಇದಕ್ಕಾಗಿ ಎನ್‌ಸಿಸಿ ಸೇರಿದ್ದ ಇವರು, ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿದ್ದರು. ಯೋಧನಾಗುವ ಸಲುವಾಗಿ ಬೆಂಗಳೂರಿನ ಜಯನಗರದ ನ್ಯಾಷನಲ್ ಕಾಲೇಜು ಸೇರಿದ್ರು. ಜೊತೆಗೆ ಆ ಕಾಲೇಜಿನಲ್ಲಿ ಮೂರು ಅಥ್ಲೆಟಿಕ್ಸ್ ಚಾಂಪಿಯನ್ ಕೂಡ ಆಗಿದ್ದರು. ಉಗ್ರಂ ಮಂಜು ಅವರು ಕಳರಿಯಪಟ್ಟು ಕೂಡ ಕಲಿತಿದ್ದಾರೆ.
ನ್ಯಾಷನಲ್ ಕಾಲೇಜಿನಿಂದ ನಡೆದ ಎನ್‌ಸಿಸಿಯ ವಿಶೇಷ ಕ್ಯಾಂಪ್‌ನಲ್ಲಿ ಯೋಧರ ಮನೆ ಸಮೀಕ್ಷೆ ನಡೆಸುವ ಅವಕಾಶ ಇವರಿಗೆ ಲಭಿಸಿತ್ತು. ಮಡಿಕೇರಿಯ ವೀರಯೋಧರನ್ನು ಮಂಜು ಅವರು ಭೇಟಿ ಮಾಡಿದ್ದರು. ಎನ್‌ಸಿಸಿಯಲ್ಲಿ ಶಿಸ್ತುಬಧ್ಧ ಜೀವನಕ್ರಮ ಅನುಸರಿಸಿದ್ದ ಮಂಜು, ಉತ್ತಮ ಅಭ್ಯಥಿಯಾಗಿ ಗುರುತಿಸಿಕೊಂಡಿದ್ದರು. ಬಿಎಸ್‌ಎಫ್‌ಗೆ ಸೇರಬಹುದಾದ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿದ್ದರು. ದೇಹದಾರ್ಢ್ಯ ಅರ್ಹತೆಯಲ್ಲೂ ಪಾಸ್ ಆಗಿದ್ದರು. ದೇಶಸೇವೆಯಲ್ಲಿ ಪ್ರಾಣಕ್ಕೆ ಹಾನಿಯಾದರೆ ತಾವೇ ಹೊಣೆ ಎಂದು ಪ್ರಮಾಣೀಕರಿಸುವ ಅರ್ಜಿಗೆ ಮಂಜು ತಂದೆ ಸಹಿ ಹಾಕಬೇಕಿತ್ತು. ಆದರೆ, ಇದಕ್ಕೆ ಸಹಿ ಹಾಕಲು ಮಂಜು ತಂದೆ ಒಪ್ಪದ ಕಾರಣ ಆ ಕನಸು ನನಸಾಗಲಿಲ್ಲ.
ರಂಗಭೂಮಿ
ದೇಶಸೇವೆ ಮಾಡುವ ಕನಸು ನನಸಾಗದ ಕಾರಣ ಉಗ್ರಂ ಮಂಜು ಅವರು, ಓದಿನಲ್ಲಿ ಆಸಕ್ತಿ ಕಳೆದುಕೊಂಡರು. ಎರಡನೇ ವರ್ಷದ ಪದವಿ ಮಾಡುತ್ತಿದ್ದಾಗ ರಂಗಭೂಮಿಯತ್ತ ಒಲವು ಬೆಳೆಸಿಕೊಂಡರು. ಆನಂತರ ನಾಟಕಗಳಲ್ಲಿ ಹಾಗೂ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸಿನಿಮಾ
ತಮ್ಮ ಖಡಕ್ ನೋಟ ಮತ್ತು ಮಾತಿನಿಂದಲೇ ಗಮನ ಸೆಳೆಯುವ ಇವರು, ಸಂತು ಸ್ಟ್ರೇಟ್ ಫಾರ್ವರ್ಡ್, ಕಿರಿಕ್ ಪಾರ್ಟಿ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ!, ಭರಾಟೆ, ದೂರದರ್ಶನ, ಬುದ್ಧಿವಂತ 2, ರಾನಿ, ಮ್ಯಾಕ್ಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಿಗ್‌ಬಾಸ್: ಉಗ್ರಂ ಮಂಜು ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 15ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. 6 ಫೈನಲಿಸ್ಟ್‌ಗಳ ಪೈಕಿ ಒಬ್ಬರಾಗಿ ಫಿನಾಲೆ ತಲುಪಿದ್ದ ಮಂಜು, 5ನೇ ಸ್ಥಾನಕ್ಕೆ ತೃಪ್ತಿ ಪಡೆದು ಎಲಿಮಿನೇಟ್ ಆಗಿದ್ದಾರೆ.