ಉಮಾಶ್ರಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಕಂಡ ಅಪರೂಪದ ನಟಿ. ರಾಜಕೀಯದಲ್ಲೂ ಹೆಸರುವಾಸಿಯಾಗಿರುವ ಇವರು ಕರ್ನಾಟಕದ ಶಾಸನಸಭೆಯ ಸದಸ್ಯರಾಗಿದ್ದರು.ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ. ಸುಮಾರು 325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅವುಗಳಲ್ಲಿ `ಸ್ವಾಭಿಮಾನ', `ಅಂಜದಗಂಡು', `ಪುಟ್ನಂಜ', `ಕೋತಿಗಳು ಸಾರ್ ಕೋತಿಗಳು',`ಯಾರಿಗೇ ಸಾಲುತ್ತೆ ಸಂಬಳ', `ಕುರಿಗಳು ಸಾರ್ ಕುರಿಗಳು' ಮೆಚ್ಚುಗೆ ಪಡೆದಿವೆ.
ಹವ್ಯಾಸಿ, ಪೌರಾಣಿಕ ಮತ್ತು ವೃತ್ತಿಪರ ನಾಟಕದಲ್ಲಿ ಸುಮಾರು 31 ವರ್ಷ ಅನುಭವವನ್ನು ಹೊಂದಿರುವ ಇವರು ಜರ್ಮನಿಯ ನಿರ್ದೇಶಕ ಫ್ರಿಟ್ಜ್ ಬೆನ್ನೆವಿಟ್ಜ್, ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ಸಿ.ಜಿ. ಕೃಷ್ಣಸ್ವಾಮಿ, ಆರ್. ನಾಗೇಶ್, ನಾಗಭರಣ ಮುಂತಾದ ಮಹಾನ್ ನಿರ್ದೇಶಕ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ.ರಾಜ್ಯದ ಹಲವು ಶ್ರೇಷ್ಠ ಥಿಯೇಟರ್ ಗುಂಪುಗಳ ಭಾಗವಾಗಿರುವ ಉಮಾಶ್ರೀ ಬೆಂಗಳೂರಿನ ರಂಗಸಂಪದ ಥಿಯೇಟರ್ ಗುಂಪಿನ ಸದಸ್ಯೆ.
1980 ರ ದಶಕದ ಉತ್ತರಾರ್ಧದಲ್ಲಿ ಕಾಶಿನಾಥ್ `ಅನುಭವ' ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದ ಪಾತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದರು.ಎನ್.ಎಸ್. ರಾವ್ ಮತ್ತು ಇವರ ಜೋಡಿ ಹಲವು ಚಿತ್ರಗಳ ಮೂಲಕ ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ರಂಜಿಸಿತು. ನಂತರ ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ ಮತ್ತು ಕರಿಬಸವಯ್ಯರೊಂದಿಗೆ ಹಲವು ಪಾತ್ರಗಳ ಮೂಲಕ ಜನಪ್ರಿಯರಾದರು,
ಪುಟ್ಟ್ನಂಜ ಚಿತ್ರದ ಉಮಾಶ್ರೀ ಸಿನಿಜೀವನದ ಅತ್ತ್ಯುತಮ ಚಿತ್ರ. ಈ ಚಿತ್ರದಲ್ಲಿ 80 ವರ್ಷ ವಯಸ್ಸಿನ ಅಜ್ಜಿ ಪಾತ್ರದಲ್ಲಿ ನಟಿಸಿದ ಅವರು ಎಲ್ಲರೂ ಮೆಚ್ಚುಗೆ ಪಡೆದರು.ಮಣಿ ಚಿತ್ರದಲ್ಲಿನ ಮಾಂಸ-ವ್ಯಾಪಾರದಿಂದ ತನ್ನ ಮಗಳನ್ನು ಉಳಿಸಲು ಕಷ್ಟಪಟ್ಟು ಪ್ರಯತ್ನಿಸುತ್ತಿರುವ ವಯಸ್ಸಾದ ವೇಶ್ಯೆಯ ಪಾತ್ರದಲ್ಲಿ ಅಪೂರ್ವ ಅಭಿನಯ ನೀಡಿದರು. 2005 ರಲ್ಲಿ ಅತ್ಯುತ್ತಮ ಪೋಷಕ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.ಉಮಾಶ್ರೀ ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ.
2008 ರಲ್ಲಿ ಉಮಾಶ್ರೀ ಗಿರೀಶ್ ಕಾಸರವಳ್ಳಿ ನಿರ್ದೇಶನದ `ಗುಲಾಬಿ ಟಾಕೀಸ್' ಚಿತ್ರದಲ್ಲಿ ಅಭಿನಯಿಸಿದರು, ಈ ಚಿತ್ರ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು.
ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಕರ್ನಾಟಕ ರಾಜ್ಯ ಸರ್ಕಾರದ ಶಾಸನ ಸಭೆಯ ಸದಸ್ಯರಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗ ಇಲಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2013 ರಲ್ಲಿ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ವೈಯಕ್ತಿಕ ಜೀವನ
ಉಮಾಶ್ರೀ ಅವರ ಪತಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಇವರನ್ನು ತೊರೆದು ಬೇರೊಬ್ಬರನ್ನು ವಿವಾಹವಾದರು. ತನ್ನ ಇಬ್ಬರು ಮಕ್ಕಳನ್ನು ಏಕಾಂಗಿಯಾಗಿ ಉಮಾಶ್ರೀ ಬೆಳೆಸಿದರು. ತನ್ನ ಕುಟುಂಬವನ್ನು ಬೆಂಬಲಿಸಲು ನಟನೆಗೆ ಇಳಿದರು. ಇವರ ಹಿರಿಯ ಮಗಳು ಗಾಯತ್ರಿ ಅವರು ವೈದ್ಯರಾಗಿದ್ದಾರೆ ಮತ್ತು ಅವರ ಪುತ್ರ ವಿಜಯಕುಮಾರ್ ಒಬ್ಬ ವಕೀಲರಾಗಿದ್ದಾರೆ, ಆಸ್ಟ್ರೇಲಿಯಾದಿಂದ ಮಾಸ್ಟರ್ಸ್ ಆಫ್ ಲಾ ನಲ್ಲಿ ಪದವಿ ಪಡೆದಿದ್ದಾರೆ. ಇವರು ಗ್ರಾಮೀಣ ಮತ್ತು ದಮನಕ್ಕೊಳಗಾದ ಮಹಿಳೆಯರ ಉನ್ನತಿಗಾಗಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.