»   »  ಬ್ಲಾಗುಗಳಿಗೂ ಸೆನ್ಸಾರ್ ಬೇಕೆಂದು ನಾಗತಿಹಳ್ಳಿ

ಬ್ಲಾಗುಗಳಿಗೂ ಸೆನ್ಸಾರ್ ಬೇಕೆಂದು ನಾಗತಿಹಳ್ಳಿ

Subscribe to Filmibeat Kannada

ಕಿಡಿಗೇಡಿ ಬ್ಲಾಗ್ ಬರವಣಿಗೆಗಳು ಕನ್ನಡ ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಪಾದಿಸಿದ್ದಾರೆ. ಕನ್ನಡ ಚಿತ್ರ ಕರ್ಮಿಗಳನ್ನು ಬ್ಲಾಗುಗಳಲ್ಲಿ ಬೈಯ್ಯುವುದು, ತೇಜೋವಧೆ ಮಾಡುವುದು, ಅಪಹಾಸ್ಯ ಮಾಡುವುದು, ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ನಿಂದಿಸುವುವ ಪರಿ ಅವ್ಯಾಹತವಾಗಿ ನಡೆಯುತ್ತಿದ್ದು ಈ ಚಾಳಿಗೆ ಅಂಕುಶಹಾಕುವವರಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಚಿತ್ರಲೋಕ ಡಾಟ್ ಕಾಮ್ ಹತ್ತನೇ ವರ್ಷಕ್ಕೆ ಪಾದಾರ್ಪಣ ಮಾಡಿದ ಸಂದರ್ಭ ಬುಧವಾರ ಸಂಜೆ ಬೆಂಗಳೂರಿನ ಸೆಂಚುರಿ ಕ್ಲಬ್ಬಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಬೇಜವಾಬ್ದಾರಿ ಬ್ಲಾಗ್ ಸಾಹಿತ್ಯದ ವಿರುದ್ಧ ನಾಗತಿಹಳ್ಳಿ ತಿರುಗಿ ಬಿದ್ದರು. ಕನ್ನಡ ಚಿತ್ರಗಳ ಮಾರುಕಟ್ಟೆ ಮೊದಲೇ ಸಣ್ಣದು, ಅದನ್ನು ಎತ್ತಿ ಆಡಿಸುವುದನ್ನು ಬಿಟ್ಟು ಎತ್ತಿ ಬಿಸಾಕುವ ಕೆಲಸವನ್ನು ಕೆಲವು ಬ್ಲಾಗುಗಳು ಮಾಡುತ್ತಿವೆ ಎಂದು ವ್ಯಥೆಪಟ್ಟರು.

ಕನ್ನಡ ಚಿತ್ರಗಳನ್ನು ಜಗತ್ತಿನ ಮೂಲೆಮೂಲೆಗೆ ಕೊಂಡೊಯ್ಯುವ ಕಾಯಕವನ್ನು ಅಂತರ್ಜಾಲ ಮಾಡುತ್ತಿದೆ ನಿಜ. ಆದರೆ, ಅದೇ ಅಂತರ್ಜಾಲ ಅಂದರೆ ಬ್ಲಾಗೀದಾರರ ಒಂದು ವರ್ಗ ಕನ್ನಡ ಚಿತ್ರಗಳಿಗೋಸ್ಕರ ದುಡಿಯುವ ಮಂದಿಯ ಮುಖಕ್ಕೆ ತಣ್ಣೀರೆರೆಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಚಿತ್ರಗಳ ಗುಣಮಟ್ಟವನ್ನು ಒರೆಗೆ ಹಚ್ಚುವುದಕ್ಕೆ ಸೆನ್ಸಾರ್ ಮಂಡಳಿ ಎಂಬ ಮಾಪಕ ಸಂಸ್ಥೆ ಇದೆ. ಆದರೆ, ವೈಯಕ್ತಿಕ ತೆವಲಿಗೋಸ್ಕರ ಬೇಕಾಬಿಟ್ಟಿ ನಿಂದಿಸುವ ಬ್ಲಾಗುಗಳ ನಿಯಂತ್ರಣಕ್ಕೆ ಅಂತಹ ಯಾವುದೇ ವ್ಯವಸ್ಥೆ ಇಲ್ಲದಾಗಿದೆ ಎಂದು ಅವರು ನೊಂದು ನುಡಿದರು. ಬ್ಲಾಗುಗಳ ವಿರುದ್ಧ ಹರಿಹಾಯ್ದರೂ ಕೂಡ ನಿಂದನೆಯಲ್ಲಿ ತೊಡಗಿರುವ ಯಾವುದೇ ಬ್ಲಾಗುಗಳ ನಿರ್ದಿಷ್ಟ ಹೆಸರುಗಳನ್ನು ಚಂದ್ರು ಪ್ರಸ್ತಾಪಿಸಲಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada