twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಬೇಕೆನ್ನೋ ಫೂಲ್‍ಗಳು ಅರ್ಥ ಮಾಡ್ಕೋಬೇಕು ಶಿವಣ್ಣ!

    By Rajendra
    |

    ಅಂತೂ ಕನ್ನಡ ಚಿತ್ರರಂಗ ಡಬ್ಬಿಂಗ್ ಎದುರಿಸೋ ಉದ್ದೇಶದಿಂದ ತನ್ನ ಮತ್ತೊಂದು ಅಸ್ತ್ರವನ್ನು ಬಿಟ್ಟಿರೋ ಹಾಗಿದೆ. ನಮ್ಮ ನೆಚ್ಚಿನ ಡಾ. ರಾಜ್‍ರ ದೊಡ್ಡಮಗನೂ ಸ್ವತಃ ನಟನೂ ಆಗಿರುವ ಶ್ರೀ ಶಿವರಾಜ್‍ಕುಮಾರ್ ಅವರು ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯಾನಾ 'ಹೀಗೆ' ಹೇಳಿದ್ದಾರೆ ಅಂತಾ ನಾಡಿನ ಖ್ಯಾತ ಚಲನಚಿತ್ರ ತಿಂಗಳ ಪತ್ರಿಕೆ ರೂಪತಾರಾ ಪ್ರಕಟಿಸಿದೆ.

    ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದಂತಿರುವ ಈ ಸಂದರ್ಶನದಲ್ಲಿ ಡಬ್ಬಿಂಗ್ ಬಗ್ಗೆ "ಕನ್ನಡಕ್ಕೆ ಡಬ್ಬಿಂಗ್ ತರಬೇಕೆಂದು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಶಿವಣ್ಣ ಯಾಕೆ ಮಾತಾಡುತ್ತಿಲ್ಲ?" ಎಂದು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಮತ್ತೂ ಮುಂದುವರೆಯುತ್ತಾ ಶಿವಣ್ಣ "ಡಬ್ಬಿಂಗ್ ಬೇಕು ಅಂತಾ ಒತ್ತಾಯ ಮಾಡ್ತಿರೋ ಫೂಲ್‍ಗಳು ಒಂದು ವಿಷಯ ಅರ್ಥ ಮಾಡ್ಕೋಬೇಕು...

    ನಮ್ಮ ಭಾಷೆ ಚಿತ್ರಗಳು ಬೇರೆ ಕಡೆ ಬಿಡುಗಡೆ ಮಾಡಲ್ಲ. ಹಾಗಿರುವಾಗ ಅವರ ಚಿತ್ರಗಳನ್ನು ನಾವು ಮೆರೆಸಬೇಕಾ. ಸ್ಯಾಟಲೈಟ್ ರೈಟ್‍ನಿಂದ ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಕೆಲಸ ಮಾಡಬೇಡಿ. ದುಡ್ಡು ಸಂಪಾದಿಸಬೇಕು ಅಂದ್ರೆ ನಿಯತ್ತಾಗಿರಬೇಕು. ಆಗ ದುಡಿದ ದುಡ್ಡು ಸಹಾ ಅರಗುತ್ತೆ. ಇದನ್ನು ನಾನು ಕನ್ನಡಿಗರ ಪರವಾಗಿ ಹೇಳ್ತಿದ್ದೇನೆ" ಎಂದಿದ್ದಾರೆ.

    ಎರಡೂ ಉತ್ತರಗಳಲ್ಲಿರೋ ಅನುಕೂಲ ಸಿಂಧುತ್ವ ಗಮನಿಸಿದಿರಾ? ಇರಲಿ ಬನ್ನಿ ಈಗ ಶಿವಣ್ಣನವರನ್ನು ಮಾತಾಡಿಸೋಣ.

    ಹಿರಿಯರು ಅಂದಿದ್ರೂ ಅಂತಾ...

    ಹಿರಿಯರು ಡಬ್ಬಿಂಗ್ ಬೇಡಾ ಅಂದಿದಾರೆ ಅದಕ್ಕೆ ಬೇಡಾ ಅಂದುಬುಟ್ರೆ ಹೆಂಗೆ ಶಿವಣ್ಣಾ? ಹಿರಿಯರು ಬೇಡಾ ಅಂದಿದ್ದ ಸಂದರ್ಭ ಎಂಥದ್ದು? ಯಾಕೆ ಬೇಡಾ ಅಂದಿದ್ರು? ಇವತ್ತಿನ ಪರಿಸ್ಥಿತಿ ಹಂಗೇ ಇದೆಯಾ? ಇಷ್ಟಕ್ಕೂ ಆವತ್ತು ಹಿರಿಯರು ಬೇಡಾ ಅಂದಿದ್ದು ಸರೀನಾ ಅಂತಾ ಈಗಿನವರು ವಿಚಾರ ಮಾಡಬೇಕಲ್ವಾ? ಹಿಂದೆ ನಮ್ಮ ತಾತನ ಕಾಲದಲ್ಲಿ ಪ್ಯಾಂಟ್ ಹಾಕ್ಕೋಂಡ್ರೇ ಮೊಕಕ್ ಉಗೀತಿದ್ರು, ಪ್ಯಾಂಟ್ ಹಾಕ್ಕೋಬಾರ್ದು ಪಂಚೇ ಉಟ್ಕಳ್ಳಿ ಅಂತಿದ್ರು... ಈಗಲೂ ಹಂಗೇ ಮಾಡಬೇಕಾ? ಕಾಲಕ್ಕೆ ತಕ್ಕಂತೆ ಕುಣಿಯಬೇಕು ಅಂತಾ ಅಣ್ಣಾವ್ರೇ ಹೇಳಿಲ್ವಾ?

    ಇದೇನು ಬೆದರಿಕೇನಾ ಶಿವಣ್ಣಾ?

    ಇಷ್ಟಕ್ಕೂ ಈಗ ಜಬರ‍್‍ದಸ್ತಿ ಮಾಡ್ತಾ ಇರೋದು ಯಾರು? ಕಾನೂನು ಬಾಹಿರವಲ್ಲದ ಒಂದು ಕೆಲಸಾನಾ, ಕಾನೂನು ಬಾಹಿರವಾಗಿ ಬ್ಯಾನ್ ಮಾಡ್ತೀನಿ ಅನ್ನೋಕೆ ಚಲನಚಿತ್ರರಂಗವೇನು ಯಾರದೋ ಪಾಳೇಗಾರಿಕೇನಾ? ಡಬ್ಬಿಂಗ್ ಅವಶ್ಯಕತೆ ಇದೆಯೋ ಇಲ್ವೋ ಅಂತಾ ಹೇಳೋಕೆ ನಾನೂ ನೀವೂ ತಾನೇ ಏನು ಅಧಿಕಾರ ಹೊಂದಿದೀವಿ? ಈಗ ಪ್ರೇಕ್ಷಕರಾದ ನಾವು ಡಬ್ಬಿಂಗ್ ಬೇಕು ಅಂತಿದೀವಿ. ನಮ್ಮ ಬೇಡಿಕೆ ಪೂರೈಸಲು ಆಗುವವರು ಪೂರೈಸುತ್ತಾರೆ. ಯಾರಿಗೆ ಬೇಕೋ ಅವರು ಅಂಥಾ ಸಿನಿಮಾ ನೋಡ್ಕೋತಾರೆ. ಅಂಥಾ ಸಿನಿಮಾಗಳು ವ್ಯಾವಹಾರಿಕವಾಗಿ ಲಾಭ ಅನ್ಸುದ್ರೆ ಉಳೀತಾವೆ, ಇಲ್ದಿದ್ರೆ ಇಲ್ಲಾ. ಈಗ ಚಿತ್ರರಂಗದೋರು ತೆಗಿತಾ ಇರೋ ರಿಮೇಕುಗಳನ್ನು ನಾವು ತಡ್ಯಕ್ಕೆ ಬೀದಿಗಿಳೀತೀವಿ, ಯಾವ ಲೆವೆಲ್ಲಿಗಾದ್ರೂ ಇಳೀತೀವಿ ಅನ್ನೋಕಾಗುತ್ತಾ? ಹುಡುಗ್ರು ಹಿಟ್ ಆಗೋದಾದ್ರೆ ಸಂತೋಷ... ಎಲ್ಲೀ ತನಕ ಜನರಿಗೆ ಸಿನಿಮಾ ನೋಡೋ, ಗೆಲ್ಲಿಸೋ, ಸೋಲಿಸೋ ಸ್ವಾತಂತ್ರವಿದೆಯೋ ಅಲ್ಲೀ ತನಕ ಎಲ್ಲಾ ಸರೀನೆ. ಅದು ಬಿಟ್ಟು, ಇದುನ್ನಾ ತಡೀತೀವಿ, ಇದುನ್ನಾ ಬ್ಯಾನ್ ಮಾಡ್ತೀವಿ ಅಂತಾ ಅನ್ನೋಕೆ ತಮ್ಮದೇನು ಜನರಿಂದ ರಾಜ್ಯ ಆಳಕ್ಕೆ ಅಂತಾ ಆರಿಸಲ್ಪಟ್ಟ ಸರ್ಕಾರಾನಾ? ಅಷ್ಟಕ್ಕೂ ಈ ದೇಶದಲ್ಲಿ ಸಂವಿಧಾನ, ಕಾನೂನು ಅಂತಾ ಇರೋದು ತಮ್ಮ ಗಮನದಲ್ಲಿಲ್ವಾ? ಕಾನೂನು ಏನೇ ಇದ್ಕೊಳ್ಲಿ, ನಾವು ಬೀದಿಗೆ ಇಳಿದು ಹೋರಾಟ ಮಾಡ್ತೀವಿ ಅಂದ್ರೇನರ್ಥ? ಅಂದಹಾಗೆ ಯಾವ ಲೆವೆಲ್ಲಿಗೆ ಬೇಕಾದ್ರೂ ಇಳೀತೀವಿ ಅಂತೀರಲ್ಲಾ? ಇದೇನು ಬೆದರಿಕೇನಾ ಶಿವಣ್ಣಾ? ಇಂಥಾ ಬೆದರಿಕೆಯಿಂದಾ ಕನ್ನಡಿಗರಿಗೆ ತಮ್ಮ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳೋ ಹಕ್ಕನ್ನು ನಿರಾಕರಿಸೋದು ತಪ್ಪಲ್ವಾ?

    ಕನ್ನಡತನಾ ಅಂದ್ರೆ...

    ಇನ್ನು ನಮ್ಮಂಥಾ ಬರೀ ಕನ್ನಡ ಮಾತ್ರಾ ಗೊತ್ತಿರೋ ಕನ್ನಡಿಗರಿಗೆ ಇವರುಗಳ ಕನ್ನಡತನಾನೇ ಅರ್ಥವಾಗದು. ಕನ್ನಡದಲ್ಲಿ ಎಲ್ಲಾ ಭಾಷೆಯ ಚಿತ್ರ ನೋಡೋದು ಕನ್ನಡತನವೋ? ಕನ್ನಡಿಗರೆಲ್ಲಾ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಅವವೇ ಭಾಷೇಲಿ ನೋಡೋದು ಕನ್ನಡತನವೋ? ಬೇರೆ ಭಾಷೆ ಚಿತ್ರಗಳು ನಮ್ಮಲ್ಲಿ ಬಿಡುಗಡೆ ಆಗ್ತಿವೆ ಅದುಕ್ಕೆ ಡಬ್ಬಿಂಗ್ ಬೇಡಾ... ಕನ್ನಡದವುನ್ನ ಬೇರೆ ಕಡೆ ಬಿಡುಗಡೆ ಮಾಡಲ್ಲ, ಅದುಕ್ಕೆ ನಮ್ ಸಿನಿಮಾ ಡಬ್ ಆಗ್ಲೀ ಅನ್ನೋದು ಬೂಟಾಟಿಕೆ ಅನ್ಸಲ್ವಾ? ಕರ್ನಾಟಕದ ಆಚೆ ಇರೋ ಕನ್ನಡಿಗರು ಕನ್ನಡದಲ್ಲಿ ಸಿನಿಮಾ ನೋಡದೇ ಅವರಿರೋ ರಾಜ್ಯಗಳ ಭಾಷೇಲಿ ಡಬ್ ಆದ ರೂಪದಲ್ಲಿ ನಮ್ಮ ಸಿನಿಮಾ ನೋಡಲೀ ಅನ್ನೋದಾದರೆ, ಇದೇ ನ್ಯಾಯಾ ಪರಭಾಷಾ ಚಿತ್ರಗಳಿಗೂ ಅನ್ವಯವಾಗಲ್ವಾ? ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಬೇಕು ಅನ್ನುವಂತೆ 'ನಮ್ಮಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆಯಾಗ್ತಿರುವಾಗ ಡಬ್ಬಿಂಗ್ ಯಾಕೆ?" ಅನ್ನೋ ನೀವು, ಕನ್ನಡಿಗರೆಲ್ಲಾ ಪರಭಾಷೆಗಳನ್ನು ಕಲಿತುಕೊಂಡು ಆಯಾಭಾಷೆಯಲ್ಲಿ ಆಯಾ ಸಿನಿಮಾ ನೋಡಿ ಅನ್ನೋದಾಗಲೀ, ಭಾಷೆ ಬರದಿದ್ರೂ ಆ ಭಾಷೇಲೇ ನೋಡಿ ಅನ್ನೋದಾಗ್ಲೀ ನಿಮ್ಮ ಸ್ವಾರ್ಥದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮಾಡ್ತಿರೋ ಮೋಸ ಅಲ್ವಾ ಶಿವಣ್ಣಾ? ಇದುನ್ನಾ ಕನ್ನಡತನಾ ಅನ್ನಕ್ ಆದೀತಾ? ಆಯ್ತು.. ಕನ್ನಡಚಿತ್ರರಂಗದ ದೊಣೇನಾಯಕರೇ ಈಗ ಕೊರಿಯನ್, ಜಪಾನೀಸ್ ಸಿನಿಮಾಗಳು ಇಲ್ಲಿ ಬಿಡುಗಡೆ ಆಗ್ತಿಲ್ಲಾ... ಇವುನ್ನಾ ಡಬ್ ಮಾಡ್ಬೋದಾ?

    ನಿಯತ್ತಿನ ಸಂಪಾದನೇ ಅಂದ್ರೆ...

    ಯಾವುದೇ ವಿಷಯದ ಬಗ್ಗೆ ನಿಮಗಿಂತಾ ಬೇರೆಯಾದ ಅಭಿಪ್ರಾಯ ಹೊಂದಿರೋದು ಮೂರ್ಖತನಾ ಅನ್ನೋದು ಎಷ್ಟು ಸರೀ ಶಿವಣ್ಣಾ? ಇನ್ನು ಡಬ್ಬಿಂಗ್‍ನಿಂದಾ ಸಂಪಾದಿಸೋ ದುಡ್ಡು ನಿಯತ್ತಿನದಲ್ಲಾ ಅಂತೀರಲ್ಲಾ? ಇದೇ ಮಾತುನ್ನಾ ಫ್ರೇಮ್ ಟೊ ಫ್ರೇಮ್ ರಿಮೇಕ್ ಮಾಡೋ ಬಗ್ಗೆ ಯಾಕೆ ಹೇಳಲ್ಲಾ? ಇತ್ತೀಚಿಗೆ ನಿಮ್ಮದೇ ಕುಟುಂಬದ "ಜಾಕಿ" ಬೇರೆ ಭಾಷೆಗೆ ಡಬ್ ಆದಾಗ ಹೆಮ್ಮೆ ಪಟ್ಕೊತೀರಲ್ಲಾ? ಅದ್ಯಾವ ಸೀಮೆ ನ್ಯಾಯಾ? ಹಾಗೆ ಬೇರೆ ಭಾಷೆಗೆ ಡಬ್ ಮಾಡಿ ಸಂಪಾದಿಸೋ ದುಡ್ಡು ನಿಯತ್ತಿಂದಲ್ಲಾ ಅನ್ನಕ್ ಆಗುತ್ತಾ? ಕಾನೂನು ಬಾಹಿರವಲ್ಲದ ಮಾರ್ಗದಲ್ಲಿ ಸಂಪಾದಿಸೋ ಎಲ್ಲಾನೂ ನಿಯತ್ತಿನ ಸಂಪಾದನೇನೇ ಅಲ್ವಾ ಶಿವಣ್ಣಾ?

    ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

    ಅಣ್ಣಾವ್ರು, ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಅಂತಿದ್ರೂ... ತಾವು ಫೂಲ್‍ಗಳು ಅಂದ್ರೀ ಅಂತಿದೆ ರೂಪತಾರಾ? ನಂಬಕ್ಕಾಗ್ತಿಲ್ಲಾ... ಹಿರಿಯರು ಡಬ್ಬಿಂಗ್ ಬೇಡಾ ಅಂದ್ರು ಅದ್ಕೆ ಬೇಡಾ ಅಂತಾ ಆ ಪಾಟಿ ಗೌರವಾ ಕೊಡ್ತಿರೋ ನೀವು, ನಿಮ್ಮದಲ್ಲದ ಅಭಿಪ್ರಾಯ ಇಟ್ಕೊಂಡೋರ ಬಗ್ಗೆ ಹಿಂಗೆಲ್ಲಾ ಅನ್ನೋದನ್ನು ಹಿರಿಯರು ಮೆಚ್ಚುತ್ತಿದ್ರು ಅಂತೀರಾ ಶಿವಣ್ಣಾ? (ಕೃಪೆ: ಏನ್ ಗುರು ಕಾಫಿ ಆಯ್ತಾ?)

    English summary
    Hat Trick Hero Shivarajkumar speaks on dubbing films in Kannada. He straight away opposes dubbing films. Enguru Kannada blog criticizes his statement on dubbing films. Read the complete story.
    Saturday, August 6, 2011, 6:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X