»   » ಪೋಲಿ ಕನ್ನಡ ಸಿನಿಮಾ -1

ಪೋಲಿ ಕನ್ನಡ ಸಿನಿಮಾ -1

Posted By: Staff
Subscribe to Filmibeat Kannada

ಒಂದು ಕಡೆ ಕನ್ನಡ ಚಿತ್ರಗಳನ್ನ ನೋಡೋರೇ ಇಲ್ಲ ಅಂತ ಕೊರಗುತ್ತಿರುವ ನಿರ್ಮಾಪಕರು. ಇನ್ನೊಂದು ಕಡೆ ಕಾಮಕೇಳಿ ಚಿತ್ರಗಳನ್ನು ಯಾವ್ಯಾವ ಹೆಸರುಗಳಲ್ಲೋ ಮಾಡುತ್ತಾ, ಗಲ್ಲಾ ತುಂಬಿಸಿಕೊಳ್ಳುತ್ತಿರುವ 'ಜಾಣ" ನಿರ್ಮಾಪಕರು. ಕರ್ನಾಟಕದಲ್ಲಿ ಕನ್ನಡ ಸೆಕ್ಸ್‌ ಸಿನಿಮಾ ಲೋಕ ಭರ್ತಿ ಬಿಸಿನೆಸ್‌ ನಡೆಸುತ್ತಿರುವುದಂತೂ ಖರೆ.

ಐದು ವರ್ಷಗಳ ಹಿಂದೆ

ಮಲೆಯಾಳಿ ಸೆಕ್ಸ್‌ ಸಿನಿಮಾಗಳು ಬೆಂಗಳೂರಿಗೆ ಸಾಲುಸಾಲಾಗಿ ಲಗ್ಗೆ ಇಡತೊಗಿದ್ದು ಐದು ವರ್ಷಗಳ ಹಿಂದೆ. ಅಲ್ಲಿನ ಸೆಕ್ಸ್‌ ತಾರೆ ಶಕೀಲಾ ಆಗಿನ್ನೂ ಮನೆಮಾತಾಗುತ್ತಿದ್ದಳು. ಬೆಂಗಳೂರಿನ ಲೋಕೇಶ, ವೆಂಕಟೇಶ್ವರ, ಗೋವರ್ಧನ್‌, ವೀರೇಶ್ವರ, ರೇಣುಕಾ, ಸಿದ್ಧೇಶ್ವರ ಮೊದಲಾದ ಭಗವಂತನ ಹೆಸರಿನ ಥಿಯೇಟರು/ಟೆಂಟುಗಳಲ್ಲಿ ಶಕೀಲಾ ಮಾಂಸ ದರ್ಶನ ನಡೆಯುತ್ತಿತ್ತು. ಚಿತ್ರದಲ್ಲಿ ಶಕೀಲಾ ಮುಖ್ಯ ನಾಯಕಿ ಅಷ್ಟೆ. ಆಕೆಗೂ ಮೀರಿದ ಮಾಂಸ ದರ್ಶನ ಮಾಡಿಸಲೆಂದೇ ಕೆಲವು ಸಹನಟೀಮಣಿಯರಿದ್ದರು. ಹಾಗೆ ಬರುತ್ತಿದ್ದ ಮಲೆಯಾಳಿ ಚಿತ್ರಗಳು ನೀತಿ ಕಥೆಗಳ ಮುಖವಾಡ ಹೊತ್ತಿರುತ್ತಿದ್ದವು. ಸೆಕ್ಸಿನ ಶಿಕ್ಷಣ, ಏಡ್ಸ್‌ ಜಾಗೃತಿ, ಮನೋವೈಕಲ್ಯದಿಂದ ಹೊರ ಬರುವ ಪಾಠ, ಲೈಂಗಿಕ ತಿಳಿವಳಿಕೆ- ಹೀಗೆ ಎಂತೆಂಥದೋ ಒನ್‌ಲೈನರ್‌ ಇಟ್ಟುಕೊಂಡು ಸೆನ್ಸಾರ್‌ ಮುಂದೆ ಬರುತ್ತಿದ್ದ ಈ ಚಿತ್ರಗಳ ಒರಿಜಿನಲ್‌ ರೀಲುಗಳು ಬೇರೆ ಕಡೆಯೇ ಇರುತ್ತಿದ್ದವು. ಒಮ್ಮೆ ಸೆನ್ಸಾರ್‌ ಸರ್ಟಿಫಿಕೇಟ್‌ ಗಿಟ್ಟಿಸಿದರೆ ಮುಗಿಯಿತು, ಆಮೇಲೆ ಶಯನೋತ್ಸವ ಚಿತ್ರಗಳ ಶತದಿನೋತ್ಸವ!

ಶತದಿನೋತ್ಸವ ಯಾಕೆಂದರೆ, ಈ ಚಿತ್ರಗಳಿಗೆ ಸಾವು ಅನ್ನುವುದೇ ಇಲ್ಲ. ಬೆಂಗಳೂರಿನ ಯಾವುದೋ ಕಿತ್ತುಹೋದ ಟೆಂಟಿನಲ್ಲೋ, ಮತ್ತಾವುದೋ ಜಿಲ್ಲಾಕೇಂದ್ರದ ವಿಡಿಯೋ ಸೆಂಟರ್‌ನಲ್ಲೋ ಚಿತ್ರದ ಭರ್ಜರಿ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಇಂಥಾ ಚಿನ್ನದ ಮೊಟ್ಟೆ ಇಡುವ ಮಲೆಯಾಳಿ ಕೋಳಿ ತಂತ್ರವನ್ನು ಕೆಲವು ಕನ್ನಡ ಕುವರರೂ ಅಳವಡಿಸಿಕೊಂಡರು. ಪರಿಣಾಮ ನೋಡಿ- ರತಿ ವಿಜ್ಞಾನ- ಒಂದಲ್ಲ ; ಎರಡು, ಸತ್ಯ ಸಂದೇಶ (ಭಾಗ-1, ಭಾಗ-2), ಹಲೋ ಡಾಕ್ಟರ್‌, ನನ್ನಾಸೆಯ ನಂದಿನಿ, ಅಪ್ಸರ, ಡ್ರಗ್ಸ್‌ ಮತ್ತು ಏಡ್ಸ್‌, 7 ರಾತ್ರಿಗಳು, ಪ್ರೇಮೋತ್ಸವ, ಪ್ರೇಮಾಯಣ, ಆಸೆಗಳು ನೂರಾರು, ಪ್ರಮೋದಿನಿ, ವಿರಹ ನೂರು ತರಹ, ಮಧುಚಂದ್ರ, ಜೀವನ ಜೋಕಾಲಿ, ಪ್ರೇಮದ ವಯಸ್ಸು, ಪ್ರೇಮದ ಉಯ್ಯಾಲೆ, ಆಸೆಗಳು ನೂರಾರು, ಸಂಗಮೋತ್ಸವ, ಪಕ್ಕದ ಮನೆ ಹೆಂಡತಿ- ಇಂಥಾ ಹೆಸರಿನ ಚಿತ್ರಗಳು ಸಾಲುಸಾಲಾಗಿ ಬಂದವು; ಈಗಲೂ ಬರುತ್ತಿವೆ.

ಲೋಕೇಶ ಚಿತ್ರಮಂದಿರ ಕೆಲವು ತಿಂಗಳ ಹಿಂದೆ ಒಂದು ಆಫರ್‌ ಇಟ್ಟಿತ್ತು- ಒಂದು ಟಿಕೆಟ್‌ ಕೊಂಡರೆ ಇನ್ನೊಂದು ಚಿತ್ರಕ್ಕೆ ಟಿಕೇಟ್‌ ಫ್ರೀ ! ಈ ತಂತ್ರ ಎಷ್ಟು ಕ್ಲಿಕ್ಕಾಯಿತೆಂದರೆ ಬೆಂಗಳೂರಿನ ಹೊರವಲಯದಲ್ಲಿರುವ ಪಡ್ಡೆಗಳೂ ಸಿಟಿಯಾಳಗಿನ ಈ ಚಿತ್ರಮಂದಿರಕ್ಕೆ ಮುಗಿಬಿದ್ದವು. ಇನ್ನು ಕೆಲವು ಚಿತ್ರಮಂದಿರಗಳು ಪ್ರದರ್ಶನ ಮುಗಿದ ನಂತರ ಆಯ್ದ ಪ್ರೇಕ್ಷಕರಿಗೆ ಒತ್ತಾಯದ ಮೇರೆಗೆ ಕೆಲವು ಹಸಿಬಿಸಿ ದೃಶ್ಯಗಳನ್ನು ತೋರಿಸುವ ಚಾಳಿ ಇಟ್ಟುಕೊಂಡಿವೆ.

2001ನೇ ಇಸವಿ ನವೆಂಬರ್‌ 31ರಂದು ಕರ್ನಾಟಕ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲ್‌ ಇಂತಹ ಚಿತ್ರಗಳ ವ್ಯಾಪಕತೆಯ ವಿರುದ್ಧ ದನಿಯೆತ್ತಿದ್ದರು. ಒಂದಷ್ಟು ಸಿನಿಮಾ ಮಂದಿಯೂ ಈ ದನಿಗೆ ಕುಂತಲ್ಲಿಂದಲೇ ಬೆಂಬಲ ವ್ಯಕ್ತಪಡಿಸಿದರು. ಇಂಥಾ ಸಿನಿಮಾ ನಿರ್ಮಾಪಕರ ಫೋನ್‌ ನಂಬರ್‌ ಪತ್ತೆ ಹಚ್ಚಿ , ಬೇಡ್ರಪ್ಪಾ ಅದು ಕೆಟ್ಟದ್ದು ಅಂತ ಪಾಟೀಲರು ಬುದ್ಧಿ ಹೇಳಿದ ಶಾಸ್ತ್ರ ಮಾಡಿದರು. ಆದರೆ ಇದು ನವೆಂಬರ್‌ ತಿಂಗಳ ರಾಜ್ಯೋತ್ಸವದ ಬುರ್ನಾಸು ದನಿಯಾಯಿತೇ ವಿನಃ ದೊಡ್ಡ ಸಂಚಲನೆಯ ಸದ್ದಾಗಲಿಲ್ಲ. ಇವರ ದನಿಯ ನಂತರವೂ ಅಕ್ರಂ ಥರದ ನಿರ್ಮಾಪಕರು ತಮ್ಮ ಹಳೆ ಚಾಳಿ ಬಿಡಲೇ ಇಲ್ಲ. ಈ ಅಕ್ರಂ ಕೀಳು ಚಿತ್ರಗಳ ದಂಧೆಗೆ ತನ್ನ ಹೆಂಡತಿಯನ್ನೇ ಸಕ್ರಿಯವಾಗಿ ಬಳಸಿಕೊಂಡ ಎನ್ನುವ ಮಾತಿದೆ.

ಮೆಜೆಸ್ಟಿಕ್‌ನಿಂದ ಹೊರವಲಯಕ್ಕೆ !

ಮೆಜೆಸ್ಟಿಕ್‌ ಏರಿಯಾದಲ್ಲಿ ಮೂರ್ನಾಲ್ಕು ವರ್ಷಗಳಿಂದ ಸೆಕ್ಸ್‌ ಸಿನಿಮಾ ತೋರಿಸುವಂಥಾ ಒಂದೇ ಒಂದು ಚಿತ್ರಮಂದಿರ ಉಳಿದಿಲ್ಲ. ಸಂಗಮ್‌ ಚಿತ್ರಮಂದಿರ ಇದ್ದ ಜಾಗದಲ್ಲಿ ಕಾಂಪ್ಲೆಕ್ಸಾಗುತ್ತಿದೆ. ಕೆಂಪೇಗೌಡ ಚಿತ್ರಮಂದಿರ ಪಳೆಯುಳಿಕೆಯಂತಾಗಿದ್ದು, ಅದನ್ನು ಪಾರ್ಕಿಂಗ್‌ ಜಾಗ ಮಾಡುವ ಮಾತುಗಳು ಕೇಳುತ್ತಿವೆ. ಹಿಮಾಲಯ ಥಿಯೇಟರ್‌ ಇದ್ದ ಕಡೆ ಬಟ್ಟೆ ಅಂಗಡಿ ಬಂದಿದೆ. ಶಕೀಲಾ ಹಾಗೂ ಸ್ನೇಹಿತೆಯರ ಚಿತ್ರ ತೋರಿಸುತ್ತಿದ್ದ ಮೂವೀಲ್ಯಾಂಡ್‌ ಕೂಡ ಸಭ್ಯ ಸಿನಿಮಾಗಳ ತೋರಲು ಶುರುವಿಟ್ಟುಕೊಂಡಿದೆ. ಈ ಕಾರಣಕ್ಕೆ ಇಂಥಾ ಸಿನಿಮಾ ನೋಡುವ ಚಾಳಿಗೆ ಬಿದ್ದ ಮಂದಿ ಈಗ ಸಿಟಿಯ ಹೊರವಲಯದ ಚಿತ್ರಮಂದಿರಗಳ ಮೊರೆಹೋಗುತ್ತಿದ್ದಾರೆ.

ಯಶವಂತಪುರದಲ್ಲಿ ಆರ್‌ಪಿಎಂಸಿ ಯಾರ್ಡ್‌ ಹತ್ತಿರವಿದ್ದ ಗೋವರ್ಧನ್‌ ಚಿತ್ರಮಂದಿರದಲ್ಲಿ ಸೆಕ್ಸ್‌ ಸಿನಿಮಾ ಭರಾಟೆಯೇ ಸಾಕಷ್ಟು ಅವ್ಯವಹಾರಗಳಿಗೆ, ಕರೆವೆಣ್ಣು ದಂಧೆಗೆ ಕುಮ್ಮಕ್ಕು ಕೊಟ್ಟಿತ್ತು ಎಂಬ ಕಾರಣಕ್ಕೆ ಅಲ್ಲಿಂದ ಒಂದು ಕಿಲೋ ಮೀಟರು ದೂರದ ಗೋಪಾಲ್‌ ಥಿಯೇಟರಿಗೆ ಮಾಂಸ ದರ್ಶನ ಶಿಫ್ಟಾಯಿತು !

ಬರೀ ಕನ್ನಡ ಚಿತ್ರಗಳನ್ನಷ್ಟೇ ತೋರುತ್ತಿದ್ದ ಈ ಚಿತ್ರಮಂದಿರ ಸೆಕ್ಸ್‌ ಸಿನಿಮಾ ವಿಷಯದಲ್ಲೂ ಇದನ್ನೇ ಪಾಲಿಸಿಕೊಂಡು ಬರಲು ಶುರುವಿಟ್ಟಿತು. ಡಬ್ಬದಲ್ಲಿ ಕೂತಿದ್ದ ಅಧ್ವಾನದ ಕನ್ನಡ ಚಿತ್ರಗಳೆಲ್ಲ ಒಂದೊಂದಾಗಿ ಬೆಳಕು ಕಾಣಲು ಶುರುವಿಟ್ಟುಕೊಂಡವು. ಇಂಟರ್ವಲ್‌ಗಿಂತ ಕಾಲು ಗಂಟೆ ಮುಂಚೆ ಈ ಚಿತ್ರಮಂದಿರದ ಒಳಕ್ಕೆ ಹೋಗಿ, ಇಂಟರ್ವಲ್‌ ಬಿಟ್ಟಿದ್ದೇ ತಡ ಗೇಟು ತೆಗೆದುಕೊಂಡು ಹೊರಬರುವ ದೊಡ್ಡ ಪ್ರೇಕ್ಷಕರ ದಂಡೇ ಇದೆ. ಈ 15 ನಿಮಿಷಗಳಷ್ಟೇ ರಸ ನಿಮಿಷಗಳು ಅಂತ ಹಾಗೆ ಹೊರಬರುವವರು ಬಣ್ಣಿಸುತ್ತಾರೆ.

Read more about: kannada, karnataka, cinema
English summary
XXX Kannada Movies : Part 1 of two
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada