»   » ಜಯಮಾಲಾ ಸುಳ್ಳಿಯಾ? : ಕೇರಳ ಪೊಲೀಸರಿಂದ ವಿಚಾರಣೆ

ಜಯಮಾಲಾ ಸುಳ್ಳಿಯಾ? : ಕೇರಳ ಪೊಲೀಸರಿಂದ ವಿಚಾರಣೆ

By: * ದಟ್ಸ್‌ಕನ್ನಡ ಸಿನಿಡೆಸ್ಕ್‌
Subscribe to Filmibeat Kannada
Jayamala
ಮಾಜಿ ಮೋಹಕ ನಟಿ ಜಯಮಾಲಾಗೆ ಅಯ್ಯಪ್ಪನಿಂದ ಸದ್ಯಕ್ಕೆ ಮುಕ್ತಿಯಿಲ್ಲ! ಅಯ್ಯಪ್ಪನ ಪಾದಸ್ಪರ್ಶ ಪ್ರಕರಣದ ವಿಚಾರಣೆಗಾಗಿ ಬುಧವಾರ(ಜು.5) ಬೆಂಗಳೂರಿಗೆ ಕೇರಳದಿಂದ ಪೊಲೀಸ್‌ ತಂಡ ಆಗಮಿಸಿದೆ.

ಕೇರಳ ಪೊಲೀಸರ ತಂಡ ನಗರ ಪೊಲೀಸ್‌ ಆಯುಕ್ತ ಎನ್‌.ಅಚ್ಯುತರಾವ್‌ ಅವರನ್ನು ಭೇಟಿ ಮಾಡಿ, ಪ್ರಕರಣದ ತನಿಖೆಗೆ ಸಹಕಾರ ಕೋರಿದೆ.

ಈ ಸಂಬಂಧ ನಟಿ ಜಯಮಾಲಾ ಅವರನ್ನು ಪೊಲೀಸರ ತಂಡ ಭೇಟಿ ಮಾಡಲಿದೆ. ಪಾದಸ್ಪರ್ಶ ಘಟನೆಯ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಲಿದೆ. ಜೊತೆಗೆ 20ವರ್ಷ ಹಿಂದಿನ ಘಟನೆ ಬಗ್ಗೆ ಭವಿಷ್ಯ ನುಡಿದು, ವಿವಾದಕ್ಕೆ ಕಾರಣರಾದ ಜ್ಯೋತಿಷಿ ಉನ್ನಿಕೃಷ್ಣನ್‌ ಅವರನ್ನು ಸಹಾ ಕೇರಳ ಪೊಲೀಸರ ತಂಡ ವಿಚಾರಣೆಗೆ ಒಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಮ್ಮತಿ :

ಅಯ್ಯಪ್ಪ ಸ್ವಾಮಿ ಪಾದಸ್ಪರ್ಶ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ಈ ಸಂಬಂಧ ತನಿಖೆಗೆೆ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂಬ ಅರ್ಜಿಯನ್ನು ಕೇರಳ ಹೈಕೋರ್ಟ್‌ ಮಂಗಳವಾರ(ಜು.4)ಅಂಗೀಕರಿಸಿದೆ.

ಜ್ಯೋತಿಷಿ ಜಯಕುಮಾರ್‌ ಈ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ, ಕೇರಳ ಸರ್ಕಾರ ಮತ್ತು ಟ್ರಾವಂಕೂರ್‌ ದೇವಸ್ವಂ ಮಂಡಳಿಗೆ ನೋಟಿಸ್‌ ನೀಡಿದೆ. ನಾಲ್ಕು ವಾರಗಳಲ್ಲಿ ವಿವರಣೆ ನೀಡುವಂತೆ ಸೂಚನೆ ನೀಡಿದೆ.

ಜಯಮಾಲಾ ಸುಳ್ಳಿಯೇ? :

'ತಾಯಿಸಾಹೇಬ", 'ತುತ್ತೂರಿ" ಚಿತ್ರಗಳ ನಿರ್ಮಾಣದ ಮೂಲಕ ತಮ್ಮ ಸದಭಿರುಚಿ ಬಿಂಬಿಸಿರುವ, ಜಯಮಾಲಾ ತಮ್ಮ ಸುದೀರ್ಘ ಅವಧಿಯ ಕಲಾಬದುಕಿನಲ್ಲಿ ಸುಳ್ಳುಹೇಳಿದವರಲ್ಲ. ಅಂತಹ ಯಾವ ಪ್ರಕರಣವೂ ಬೆಳಕಿಗೆ ಬಂದಿಲ್ಲ. ಆದರೆ ಅಯ್ಯಪ್ಪನ ಘಟನೆ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಅವರ ವ್ಯತಿರಿಕ್ತ ಹೇಳಿಕೆಗಳು ಸಂಶಯಕ್ಕೆ ನೀರೆರೆದಿವೆ.

'ಜನರ ತಳ್ಳಾಟದಲ್ಲಿ ನಾನು ಕೆಳಕ್ಕೆ ಬಿದ್ದೆ. ಆವಾಗ ಅಯ್ಯಪ್ಪನ ಪಾದ ಸ್ಪರ್ಶಿಸಿದೆ" ಎಂದಿದ್ದ ಜಯಮಾಲಾ, ಪತ್ರಿಕೆಯಾಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಬದಲಿಸಿದ್ದಾರೆ. 'ದೇವಸ್ಥಾನದ ಅರ್ಚಕರಿಗೆ ತೊಂದರೆಯಾಗಬಹುದೆಂದು ನಾನು ಘಟನೆ ತಿರುಚಿದೆ. ದೇವಸ್ಥಾನದ ಸಿಬ್ಬಂದಿಯೇ ಅಯ್ಯಪ್ಪನ ದರ್ಶನಕ್ಕೆ ಅಂದು ಅವಕಾಶ ಕಲ್ಪಿಸಿದ್ದರು. ಆಗ ಅಯ್ಯಪ್ಪನ ಪಾದ ಸ್ಪರ್ಶಿಸಿದೆ" ಎಂದಿದ್ದಾರೆ. ಸುಳ್ಳು ಯಾವುದೋ ಸತ್ಯ ಯಾವುದೋ ಅಯ್ಯಪ್ಪನೇ ಬಲ್ಲ!

ಇನ್ನೊಂದು ವಿವಾದ :

1987ರಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವರನ್ನು ನಾನೂ ದರ್ಶನ ಮಾಡಿದ್ದೇನೆ. ನನ್ನನ್ನು ಯಾರೂ ಅಲ್ಲಿ ತಡೆಯಲಿಲ್ಲ ಎಂದು ಹಿರಿಯ ನಟಿ ಗಿರಿಜಾಲೋಕೇಶ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಯಮಾಲಾ ಪಾದಸ್ಪರ್ಶ ಮಾಡಿದ್ದು ಅನುಮಾನ. ಹೇಗೆ ಎಡವಿಬಿದ್ದರೂ ಪಾದ ಮುಟ್ಟೋದು ಅಸಾಧ್ಯ ಅನ್ನೋ ಸಂಶಯವನ್ನು ಸಹಾ ಅವರು ವ್ಯಕ್ತಪಡಿಸಿದ್ದಾರೆ.

ಕೊಸರು : ತಮ್ಮ ಹೇಳಿಕೆ ಮೂಲಕ ಗಿರಿಜಾ ಲೋಕೇಶ್‌ ಹೊಸ ವಿವಾದಕ್ಕೆ ತುಪ್ಪ ಸುರಿದಿದ್ದಾರೆ! ಯಾಕೋ ಇನ್ನೂ ಬೆಂಕಿ ಹತ್ತಿಕೊಂಡಿಲ್ಲ!

ಅಯ್ಯಪ್ಪನಿಗೆ ಜಯಮಾಲಾರಿಂದ ಅಪಚಾರ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada