ರಜನಿಕಾಂತ್ ಎಂಧಿರನ್‌ಗೆ ಮತ್ತೊಂದು ಪೀಕಲಾಟ!
ರಜನಿಕಾಂತ್ 'ಎಂಧಿರನ್' ಚಿತ್ರಕ್ಕೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ. ತೀರಾ ಇತ್ತೀಚೆಗಷ್ಟೆ ತಮಿಳಿನ ಸಾಹಿತಿಯೊಬ್ಬರು ನನ್ನ ಕತೆಯೊಂದನ್ನು ಕದ್ದು 'ಎಂಧಿರನ್' ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈಗ ತೆಲುಗು ಸಾಹಿತಿಯೊಬ್ಬರು 'ಎಂಧಿರನ್' ಚಿತ್ರ ತಾವು ಬರೆದ ಕಥೆಯೊಂದರ ಕದ್ದ ಮಾಲು ಎಂದು ಆರೋಪಿಸಿದ್ದಾರೆ.
ತೆಲುಗಿನ ಖ್ಯಾತ ಕಾದಂಬರಿಕಾರ ಮೈನಂಪಾಟಿ ಭಾಸ್ಕರ್ ಎಂಬುವವರು 1984ರಲ್ಲಿ ಪ್ರಕಟವಾದ'ಬುದ್ಧಿ ಜೀವಿ' ಎಂಬ ಕಾದಂಬರಿ ಆಧಾರವಾಗಿ 'ಎಂಧಿರನ್' ಚಿತ್ರವನ್ನು ತೆರೆಗೆ ತರಲಾಗಿದೆ. ಕಾದಂಬರಿಯಲ್ಲಿನ ಜೋಕ್ಸನ್ನು ಹಾಗೆಯೇ ಯಥಾವತ್ತಾಗಿ ಭಟ್ಟಿ ಇಳಿಸಿದ್ದಾರೆ ಎಂದು ಮೈನಂಪಾಟಿ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಸನ್ ಪಿಕ್ಚರ್ಸ್ ಮಾಲೀಕ ಹಾಗೂ ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್,ಚಿತ್ರದ ನಿರ್ದೇಶಕ ಶಂಕರ್ ಹಾಗೂ ನಟ ರಜನಿಕಾಂತ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ತಮ್ಮ ಕಾದಂಬರಿಯನ್ನು ಬಳಸಿಕೊಂಡಿದ್ದಕ್ಕ್ಕೆ ರು.50 ಲಕ್ಷ ನಷ್ಟ ತುಂಬಿಕೊಡುವಂತೆ ಮೈನಂಪಾಟಿ ಆಗ್ರಹಿಸಿದ್ದಾರೆ.
ಅತ್ತ ತಮಿಳಿನ ಲೇಖಕ ಆರೂರು ತಮಿಳುನಾಥನ್ ಎಂಬುವವರು ತಮ್ಮ 'ಜುಗಿಬಾ' ಎಂಬ ಕತೆಯನ್ನು ಕದ್ದಿರುವುದಾಗಿ ಆರೋಪಿಸಿದ್ದು 'ಎಂಧಿರನ್' ಚಿತ್ರತಂಡಕ್ಕೆ ನೋಟೀಸ್ ಕಳುಹಿಸಿದ್ದಾರೆ. ಇವರು ರು.1ಕೋಟಿ ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ 'ಎಂಧಿರನ್' ಚಿತ್ರಕ್ಕೆ ವಿಚಿತ್ರ ಪೀಕಲಾಟ ಎದುರಾಗಿದೆ. ಪ್ರಚಾರ ಹಾಗೂ ದುಡ್ಡು ಮಾಡುವ ಉದ್ದೇಶದಿಂದ ಎಂಧಿರನ್ ಚಿತ್ರದ ಮೇಲೆ ಹೀಗೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.


Click it and Unblock the Notifications











