»   » ನಾಗತಿ ವಿರುದ್ಧ ತಿರುಗಿಬಿದ್ದ ಐಂದ್ರಿತಾ

ನಾಗತಿ ವಿರುದ್ಧ ತಿರುಗಿಬಿದ್ದ ಐಂದ್ರಿತಾ

Subscribe to Filmibeat Kannada

ನಾಗತಿಹಳ್ಳಿ ಚಂದ್ರಶೇಖರ್ ಅವರ ಕಪಾಳಮೋಕ್ಷ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. 'ನೂರು ಜನ್ಮಕು' ಚಿತ್ರೀಕರಣಕ್ಕೆ ತಡವಾಗಿ ಬಂದಿದ್ದಾರೆ ಎಂಬ ಕಾರಣಕ್ಕೆ ನಾಗತಿಹಳ್ಳಿ ಅವರು ಐಂದ್ರಿತಾರೇ ಮೇಲೆ ಕಪಾಳ ಮೋಕ್ಷ ಮಾಡಿದ್ದರಂತೆ. ಈ ಘಟನೆ ಡಿಸೆಂಬರ್ 7 ರಂದು ಹಾಂಕಾಂಗ್ ನಲ್ಲಿ ನಡೆದಿದೆ. ಈ ಸಂಬಂಧ ಐಂದ್ರಿತಾ ರೇ ಅವರು ನಿರ್ಮಾಪಕರ ಹಾಗೂ ಕಲಾವಿದರ ಸಂಘಕ್ಕೆ ಗುರುವಾರ ದೂರು ನೀಡಿದ್ದಾರೆ.

ಹಾಂಗ್ ಕಾಂಗ್ ನಿಂದ ಇಂದು ಬೆಂಗಳೂರಿಗೆ ಬಂದಿಳಿದ ಐಂದ್ರಿತಾ ರೇ, ಕೇವಲ ನನ್ನ ಮೇಲಷ್ಟೇ ಅಲ್ಲ ಚಿತ್ರದ ನಾಯಕ ನಟ ಸಂತೋಷ್ ಮೇಲೂ ನಾಗತಿಹಳ್ಳಿ ಕೈ ಮಾಡಿದ್ದಾರೆ. ನಾನು ಚಿತ್ರೀಕರಣಕ್ಕೆ ತಡವಾಗಿ ಬಂದಿಲ್ಲ. ಮೇಕಪ್ ಮಾಡಿಕೊಳ್ಳುತ್ತಿದ್ದ ನನ್ನನ್ನು ಚಿತ್ರೀಕರಣಕ್ಕೆ ಕರೆದರು. ಸಂಭಾವನೆ ವಿಚಾರ ಪ್ರಸ್ತಾಪಿಸಿದ ಅವರು ಎಷ್ಟು ಹಣ ಕೊಡುತ್ತೇವೊ ಅಷ್ಟು ಕೆಲಸ ಮಾಡಬೇಕು ಎಂದರು. ನಂತರ ನನ್ನ ಕೈ ಹಿಡಿದುಕೊಂಡರು. ನಾನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಇದ್ದಕ್ಕಿದ್ದಂತೆ ಕಪಾಳಕ್ಕೆ ಹೊಡೆದರು. ಘಟನೆಯಿಂದ ಇಡೀ ಚಿತ್ರತಂಡ ಶಾಖ್ ಗೆ ಒಳಗಾಯಿತು ಎಂದು ಹೇಳಿದ್ದಾರೆ. ಅವರಿಗೆ ನನ್ನ ಮೇಲೆ ಅಷ್ಟು ಕೋಪ ಏಕೆ ಬಂತೋ, ನಿಗೂಢ ಎಂದು ಐಂದ್ರಿತಾ ಅಳುತ್ತಾ ಹೇಳಿದರು.

ಅವರು ಹೊಡೆದ ರಭಸಕ್ಕೆ ನನ್ನ ಎಡಕಿವಿಯಿಂದ ರಕ್ತ ಬರುತ್ತಿದೆ. ಈಗ ಎಡಕಿವಿ ಸರಿಯಾಗಿ ಕೇಳಿಸುತ್ತಿಲ್ಲ. ಈ ಘಟನೆ ನಡೆದಾಗ ನಮ್ಮ ತಾಯಿಯವರು ಅಲ್ಲೇ ಇದ್ದರು. ಅವರು ಶಾಖ್ ಗೆ ಒಳಗಾಗಿದ್ದು ಬೆಂಗಳೂರಿಗೆ ಬಂದ ಬಳಿಕ ಅವರ ಆರೋಗ್ಯ ಕೆಟ್ಟಿದೆ. ನಾನು ಗೌರವಯುತ ಕುಟುಂಬದಿಂದ ಬಂದಿದ್ದೇನೆ. ನಮ್ಮ ಕುಟುಂಬದಲ್ಲಿ ಹೆಣ್ಣುಮಕ್ಕಳ ಮೇಲೆ ಕೈಮಾಡುವುದು ಎಂದರೆ ಗಂಭೀರವಾಗಿ ಪರಿಗಣಿಸುತ್ತಾರೆ. ಹೀಗೆ ಮಹಿಳೆಯರ ಮೇಲೆ ಕೈ ಮಾಡುವುದು ಎಷ್ಟು ಗಂಭೀರ ಎಂಬುದು ಅವರಿಗೆ ಗೊತ್ತಿಲ್ಲವೆ ಎಂದು ಐಂದ್ರಿತಾ ದಟ್ಸ್ ಕನ್ನಡ ವರದಿಗಾರನ ಫೋನಿನಲ್ಲಿ ಗುರುವಾರ ಸಂಜೆ ಕಣ್ಣೀರಿಟ್ಟರು.

ಅವರು ಹೊಡೆದ ಮೇಲೆ ನಾನು ಕೂಡಲೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಗೆ ವಿಷಯ ತಿಳಿಸಿದೆ. ನಾಗತಿಹಳ್ಳ್ಳಿ ಹೊಡೆದಿರುವ ಘಟನೆಗೆ ಸಾಕ್ಷಿಯಾಗಿ ತಮ್ಮ ಬಳಿ ವಿಡಿಯೋ ಚಿತ್ರೀಕರಣವೂ ಇದೆ ಎಂದು ಐಂದ್ರಿತಾ ಹೇಳಿದ್ದಾರೆ. ಇದಿಷ್ಟೇ ಅಲ್ಲದೆ ನಾಗತಿಹಳ್ಳಿ ಬಗ್ಗೆ ಐಂದ್ರಿತಾ ಇನ್ನು ಕೆಲವು ಗಂಭೀರ ಆಪಾದನೆಗಳನ್ನು ಮಾಡಿದ್ದಾರೆ. ನಾಗತಿಗೆ ತಕ್ಕ ಶಿಕ್ಷೆಯಾಗಬೇಕು ಅವರನ್ನು ಹಾಗೆ ಸುಮ್ಮನೆ ಬಿಡಬಾರದು ಎಂದೂ ಅವರು ಒತ್ತಾಯಿಸಿದ್ದಾರೆ.

ನಾಗತಿಹಳ್ಳಿ ರಾತ್ರಿ 10,11 ಗಂಟೆಯಲ್ಲೆಲಾ ಫೋನ್ ಮಾಡುತ್ತಿದ್ದರು. ಸಾಕಷ್ಟು ಸಲ ಮೈ, ಕೈ ಮುಟ್ಟಲು ಪ್ರಯತ್ನಿಸುತ್ತಿದ್ದರು. ನೀನು ನನ್ನ ಕಣ್ಣ ಮುಂದೆಯೇ ಇರಬೇಕು ಎಂದು ಹೇಳುತ್ತಿದ್ದರು. ಅವರೊಬ್ಬ womansier, ಅವರನ್ನು ಎಲ್ಲರೂ ಮೇಷ್ಟ್ರು ಎಂದು ಯಾಕೆ ಕರೆಯುತ್ತಾರೋ ನನಗೆ ಗೊತ್ತಿಲ್ಲ. ಮೇಷ್ಟ್ರು ಅನ್ನಿಸಿಕೊಳ್ಳಲು ಅವರು ನಾಲಾಯಕ್. ಅವರು ತುಂಬ ಕೆಟ್ಟ ಬೈಗುಳಗಳನ್ನು ಮಾಡುತ್ತಾರೆ ಎಂದು ನಾಗತಿಹಳ್ಳಿ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ. ನಿಮ್ಮ ತಾಯಿಯನ್ನು ಹಾಂಗ್ ಕಾಂಗ್ ಶೂಟಿಂಗಿಗೆ ಕರೆದುಕೊಂಡು ಬರಬೇಡ, ಒಬ್ಬಳೇ ಬಾ ಎಂದೂ ನಾಗತಿ ಹೇಳಿದ್ದರಂತೆ, ಐಂದ್ರಿತಾಗೆ.

ಈ ಘಟನೆ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಅಷ್ಟೇ ಸಾಕು. ಅವರು ಹೊಡೆದ ಬಳಿಕವೂ ನಾನು ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ನನ್ನಿಂದ ನಿರ್ಮಾಪಕರಿಗೆ ತೊಂದರೆ ಆಗಬಾರದು ಅಷ್ಟೆ. ಭಾರಿ ಬಜೆಟ್ ಚಿತ್ರವಾಗಿರುವ 'ನೂರು ಜನುಮಕು' ಡಿಸೆಂಬರ್ 6ರಿಂದ ಹಾಂಕಾಂಗ್ ನಲ್ಲಿ ಚಿತ್ರೀಕರಣ ಆರಂಭಿಸಿತ್ತು. ಡಿಸೆಂಬರ್ 7ರಂದು ಈ ಘಟನೆ ನಡೆದಿದೆ. ಐಂದ್ರಿತಾ ಜೊತೆಗೆ ಅವರ ತಾಯಿಯೂ ಹಾಂಕಾಂಗ್ ಗೆ ಹೋಗಿದ್ದರು. ಇಷ್ಟೆಲ್ಲಾ ಆದರೂ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತ್ರ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada