»   » ನಟಿ ಐಂದ್ರಿತಾ ರೇಗೆ ಸೆಟ್ಸ್ ನಲ್ಲಿ ಕಪಾಳಮೋಕ್ಷ!

ನಟಿ ಐಂದ್ರಿತಾ ರೇಗೆ ಸೆಟ್ಸ್ ನಲ್ಲಿ ಕಪಾಳಮೋಕ್ಷ!

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ 'ನೂರು ಜನ್ಮಕು' ಚಿತ್ರೀಕರಣ ವೇಳೆ ಅಹಿತಕರ ಘಟನೆಯೊಂದು ನಡೆದಿದೆ. ಚಿತ್ರೀಕರಣಕ್ಕೆ ತಡವಾಗಿ ಬಂದರು ಎಂಬ ಕಾರಣಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಐಂದ್ರಿತಾ ರೇ ಕೆನ್ನೆಗೆ ಎರಡು ಬಿಗಿದಿರುವ ಸುದ್ದಿ ದೂರದ ಹಾಂಕಾಂಗ್ ನಿಂದ ಬಂದಿದೆ. ಘಟನೆಯ ವಿವರಗಳು ಹೀಗಿವೆ...

'ನೂರು ಜನ್ಮಕು' ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಸದ್ಯಕ್ಕೆ ಹಾಂಕಾಂಗ್ ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹಾಂಕಾಂಗ್ ಎಂದರೆ ಕೇಳಬೇಕೆ. ಚಿತ್ರೀಕರಣದ ವೆಚ್ಚ ದುಬಾರಿ, ಸ್ವಲ್ಪ ವಿಳಂಬವಾದರೂ ಹಣ ನೀರಿನಂತೆ ಖರ್ಚಾಗುತ್ತದೆ. ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಬೇಕು ಎಂಬ ತಾರಾತುರಿ ನಿರ್ದೇಶಕ, ನಿರ್ಮಾಪಕರಿಗೆ ಇದ್ದೇ ಇರುತ್ತದೆ. ವಿಷಯ ಹೀಗಿದ್ದರೂ ಐಂದ್ರಿತಾ ರೇ ತಡವಾಗಿ ಬಂದು ಕಪಾಳಮೋಕ್ಷ ಮಾಡಿಸಿಕೊಂಡಿದ್ದಾರೆ.

ತಡವಾಗಿ ಬಂದಿದ್ದಕ್ಕೆ ನಾಗತಿಹಳ್ಳಿ ಮೇಷ್ಟ್ರು ಐಂದ್ರಿತಾರನ್ನು ಕಾರಣ ಕೇಳಿದ್ದಾರೆ. ಆಕಾರಣ, ಈಕಾರಣ... ಹೀಗೆ ಮಾತಿಗೆ ಮಾತು ಬೆಳೆದು ನಾಗತಿಹಳ್ಳಿ ಅವರನ್ನು ಐಂದ್ರಿತಾ ರೇ ಏನೋ ಅನ್ನಬಾರದ್ದನ್ನು ಅಂದಿದ್ದಾರೆ. ಸಿಟ್ಟಿಗೆದ್ದ ನಾಗತಿಹಳ್ಳಿ ಕೆನ್ನೆಗೆ ಎರಡು ಬಿಗಿದ್ದಾರೆ. ಈ ಘಟನೆಯ ವಿದೇಶಿ ಕಲಾವಿದರು ಹಾಗೂ ಕಿರಿಯ ಕಲಾವಿದರ ಸಮ್ಮುಖದಲ್ಲೇ ನಡೆಯಿತು ಎನ್ನುತ್ತವೆ ಮೂಲಗಳು.

ನಾಗತಿಹಳ್ಳಿ ಮೇಷ್ಟ್ರು ಸಾಫ್ಟ್ ಗುಣವುಳ್ಳವರು ಎಂಬ ಅಭಿಪ್ರಾಯ ಚಿತ್ರೋದ್ಯಮದಲ್ಲಿದೆ. ಹಾಗೆಯೇ ಐಂದ್ರಿತಾ ರೇ ಸಹ ಇದುವರೆಗೂ ಎಲ್ಲೂ ಕೆಟ್ಟದಾಗಿ ನಡೆದುಕೊಂಡ ಉದಾಹಣೆಗಳಿಲ್ಲ. ಇಬ್ಬರು ಸಾಫ್ಟ್ ಗುಣವುಳ್ಳವರ ನಡುವೆ ಹೀಗಾಗಿರುವುದು ದುರದೃಷ್ಟಕರ. ಏನೋ ಕೆಟ್ಟ ಘಳಿಗೆ ನಡೆದದ್ದು ನಡೆದು ಹೋಯಿತು ಎಂದು ಚಿತ್ರತಂಡ ಮಧ್ಯ ಪ್ರವೇಶಿಸಿ ನಾಗತಿಹಳ್ಳಿ ಹಾಗೂ ಐಂದ್ರಿತಾರನ್ನು ಸಮಾಧಾನ ಪಡಿಸಿ ಸಮಸ್ಯೆಯನ್ನು ತಿಳಿಗೊಳಿಸಿದ್ದಾರೆ.

'ನೂರು ಜನ್ಮಕು' ಈಗಾಗಲೇ 40, 50 ದಿನಗಳ ಚಿತ್ರೀಕರಣ ಮುಗಿಸಿಕೊಂಡಿತ್ತು. ಕೇವಲ ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಇಂತಹ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಿರುವುದು ದುರದೃಷ್ಟಕರ ಎಂಬ ಮಾತುಗಳು ಚಿತ್ರತಂಡದಿಂದ ಕೇಳಿಬಂದಿವೆ. ಸದ್ಯಕ್ಕೆ 'ನೂರು ಜನ್ಮಕು' ಚಿತ್ರೀಕರಣ ಮುಗಿಸಿಕೊಂಡ ಚಿತ್ರ ತಂಡ ಬೆಂಗಳೂರಿಗೆ ವಾಪಸಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಪ್ರೇಮ್ ಅಭಿನಯದಲ್ಲಿ ಈ ಚಿತ್ರ ಮಾಡಬೇಕೆಂದುಕೊಂಡಿದ್ದರು ನಾಗತಿಹಳ್ಳಿ. ಕಾರಣಾಂತರಗಳಿಂದ ಪ್ರೇಮ್ ಜಾಗಕ್ಕೆ ಸಂತೋಷ್ ಆಯ್ಕೆಯಾಗಿದ್ದರು. 'ಕಲ್ಲರಳಿ ಹೂವಾಗಿ' ಚಿತ್ರದ ಮೂಲಕ ಸಂತೋಷ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆನಂತರ 'ಭಯ ಡಾಟ್ ಕಾಮ್', 'ರಾವಣ' ಮತ್ತು 'ರಾಕಿ' ಚಿತ್ರಗಳಲ್ಲಿ ಎರಡನೆ ನಾಯಕನಾಗಿಯೋ, ನಾಯಕರಲ್ಲೊಬ್ಬನಾಗಿಯೋ ಕಾಣಿಸಿಕೊಂಡಿದ್ದಾರೆ. 'ನೂರು ಜನ್ಮಕು' ಸೋಲೊ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ.

ಮನೋಮೂರ್ತಿ ಅವರ ಸಂಗೀತ ನಿರ್ದೇಶನ ನೂರು ಜನ್ಮಕು ಚಿತ್ರಕ್ಕಿದೆ. ಛಾಯಾಗ್ರಹ ಸಂತೋಶ್ ರೈ ಪತಾಜೆ. ಸಾಮಾನ್ಯವಾಗಿ ಅಮೆರಿಕಾ ಅಥವಾ ಐರೋಪ್ಯ ರಾಷ್ಟ್ರಗಳಲ್ಲಿ ಚಿತ್ರೀಕರಣ ನಡೆಸಿರುವ ಮೇಷ್ಟ್ರು, ಇದೇ ಮೊದಲ ಬಾರಿಗೆ ಥೈಲ್ಯಾಂಡ್, ಚಿಕಾಗೊ, ಬ್ಯಾಂಕಾಕ್ ಮತ್ತು ಹಾಂಕಾಂಗ್ ನತ್ತ ಹಾರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada