»   » ಐಂದ್ರಿತಾರನ್ನು ಕನ್ನಡಿಗರು ಕ್ಷಮಿಸುವುದಿಲ್ಲ: ನಾಗತಿ

ಐಂದ್ರಿತಾರನ್ನು ಕನ್ನಡಿಗರು ಕ್ಷಮಿಸುವುದಿಲ್ಲ: ನಾಗತಿ

Posted By:
Subscribe to Filmibeat Kannada

ಚಿತ್ರನಟಿ ಐಂದ್ರಿತಾ ರೇ ಕಪಾಳಕ್ಕೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ಐಂದ್ರಿತಾ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ನಡೆದಿರುವ ಘಟನೆಯನ್ನು ನಟನೆಯ ಮೂಲಕ ರಸವತ್ತಾಗಿ ವಿವರಿಸಿದ್ದಾರೆ ಎಂದು ನಾಗತಿಹಳ್ಳಿ ಹೇಳಿದ್ದಾರೆ. 'ನೂರು ಜನ್ಮಕು' ಚಿತ್ರೀಕರಣದ ವೇಳೆ ಹಾಂಕಾಂಗ್ ನಲ್ಲಿ ನಾಗತಿಹಳ್ಳಿ ತಮ್ಮ ಮೇಲೆ ಕೈಮಾಡಿದ್ದಾರೆ ಎಂದು ಐಂದ್ರಿತಾ ಆರೋಪಿಸಿದ್ದರು.

ಶೂಟಿಂಗ್ ವೇಳೆ ಜೂಜುಕಟ್ಟೆ, ಶಾಪಿಂಗ್ ಎಂದು ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಿದ್ದರು. ಚಿತ್ರೀಕರಣದಿಂದಲೂ ಅಷ್ಟೇ ಬೇಗನೆ ವಾಪಸ್ ಹೋಗುತ್ತಿದ್ದರು. ಕಾರಣ ಕೇಳಿದರೆ ಸರಿಯಾದ ಉತ್ತರ ಕೊಡುತ್ತಿರಲಿಲ್ಲ. ಪ್ರತಿದಿನ ಮೂರು ಗಂಟೆ ತಡವಾಗಿ ಚಿತ್ರೀಕರಣಕ್ಕೆ ಬರುತ್ತಿದ್ದರು. ನಿರ್ಮಾಪಕರ ಹಣ ಪೋಲಾಗುತ್ತಿದೆ ಎಂದು ಹೇಳಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಒಂದು ದಿನ ಬೆಳಗ್ಗೆ ಆರು ಗಂಟೆಗೆ ಚಿತ್ರೀಕರಣ ಆರಂಭವಾಗಬೇಕಿತ್ತು. ಗಂಟೆ 9 ಆದರೂ ಐಂದ್ರಿತಾ ಸುಳಿವಿಲ್ಲ. ಕಡೆಗೂ 11ಗಂಟೆಗೆ ಸೆಟ್ಸ್ ಗೆ ಬಂದರು. ಆಕೆಗಾಗಿ ಇಡೀ ಚಿತ್ರತಂಡ ಕಾಯುತ್ತಿತ್ತು. ಇಷ್ಟು ತಡವಾಗಿ ಬಂದರೂ ಕ್ಷಮೆ ಕೇಳುವ ಸೌಜನ್ಯವನ್ನೂ ತೋರಿಸದೆ ದರ್ಪವನ್ನು ಪ್ರದರ್ಶಿಸಿದರು.

ಚಿತ್ರೀಕರಣ ತಡವಾಗಿ ಆರಂಭವಾಗಿರುವುದರಿಂದ ನಷ್ಟವಾಗಿದೆ. ಈ ನಷ್ಟವನ್ನು ನಿಮ್ಮ ತಂದೆಯಿಂದ ವಸೂಲಿ ಮಾಡುತ್ತೇನೆ ಎಂದು ಹೇಳಿದಾಗ ಆಕೆ ನನ್ನನ್ನು ಬಲವಾಗಿ ತಳ್ಳಿದರು. ಈ ಸಂದರ್ಭದಲ್ಲಿ ನಾನು ಆಕೆಯನ್ನು ತಳ್ಳಿದ್ದು ನಿಜ. ಆದರೆ ಕಪಾಳಕ್ಕೆ ಹೊಡೆದಿಲ್ಲ ಎಂದಿದ್ದಾರೆ ನಾಗತಿಹಳ್ಳಿ.

ಹಾಗೇನಾದರು ಕಪಾಳಕ್ಕೆ ಹೊಡೆದಿದ್ದರೆ ಪೊಲೀಸರಿಗೆ ದೂರು ಕೊಟ್ಟು ನನ್ನನ್ನು ಜೈಲಿಗೆ ಕಳುಹಿಸದೆ ಬಿಡುತ್ತಿರಲಿಲ್ಲ. ಆಕೆಯ ಬಳಿ ನಾನು ಅಸಭ್ಯವಾಗಿ ವರ್ತಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನನ್ನ ವಯಸ್ಸೇನು? ಐಂದ್ರಿತಾ ವಯಸ್ಸೇನು? ನನ್ನ ಮಗಳ ವಯಸ್ಸಿನ ಆಕೆಯನ್ನು ಪುಟ್ಟಿ ಎಂದು ಕರೆಯುತ್ತಿದ್ದೆ. ಸುಹಾಸಿನಿ, ತಾರಾ ಮತ್ತ್ತಿತ್ತರ ಹೆಸರಾಂತ ತಾರೆಯರ ಜತೆ ನಾನು ಕೆಲಸ ಮಾಡಿದ್ದೇನೆ. ಅವರು ಯಾರೂ ಹೀಗೆ ವರ್ತಿಸಿಲ್ಲ.

ಸಂಭಾವನೆ ವಿಷಯದಲ್ಲೂ ಐಂದ್ರಿತಾಗೆ ಅನ್ಯಾಯವಾಗಿಲ್ಲ. ನಿಗದಿಯಾಗುರುವ ರು.10 ಲಕ್ಷ ಪೈಕಿ ರು.9 ಲಕ್ಷ ಆಕೆಗೆ ಸಂದಾಯವಾಗಿದೆ. ಚಿತ್ರರಂಗಕ್ಕೆ ನಾನು ಹಲವಾರು ಹೊಸಬರನ್ನು ಪರಿಚಯಿಸಿದ್ದೇನೆ. ಅವರ್ಯಾರು ಹೀಗೆ ವರ್ತಿಸಿಲ್ಲ. ಈಕೆಯನ್ನು ಕನ್ನಡಿಗರು ಯಾವುದೇ ಕಾರಣಕ್ಕು ಕ್ಷಮಿಸುವುದಿಲ್ಲ.

ಮಾಧ್ಯಮಗಳ ಮುಂದೆ ಐಂದ್ರಿತಾ ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕ್ಯಾಮೆರಾ ಮುಂದೆ ಅಭಿನಯಿಸಿದರೆ ಒಳ್ಳೆಯ ಚಿತ್ರವಾಗಿ ಮೂಡಿಬರುತ್ತದೆ. ಇದು ಹೀಗೆ ಮುಂದುವರೆದಲ್ಲಿ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಐಂದ್ರಿತಾ ರೇ ಅವರನ್ನು ನಾಗತಿಹಳ್ಳಿ ಎಚ್ಚರಿಸಿದ್ದಾರೆ.

ಕೆಎಫ್ ಸಿಸಿಯಲ್ಲಿ ಇಂದು ಪಂಚಾಯ್ತಿ
ಐಂದ್ರಿತಾ ರೇ ಕಪಾಳಮೋಕ್ಷ ಪ್ರಕರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದೆ. ಶುಕ್ರವಾರ ಸಂಜೆ ಕೆಎಫ್ ಸಿಸಿ ಅಧ್ಯಕ್ಷೆ ಡಾ.ಜಯಮಾಲಾ ಸಮ್ಮುಖದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳ ಕುರಿತು ಚರ್ಚೆ ನಡೆಯಲಿದೆ. ಕಪಾಳಮೋಕ್ಷ ಪ್ರಕರಣದ ಸತ್ಯಾಸತ್ಯತೆಗಳು ಇಂದು ಸಂಜೆಗೆ ಇತ್ಯರ್ಥವಾಗುವ ಸಾಧ್ಯತೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada