»   »  ಮಂಜ ಏಳದಂತೆ ತಡೆಯಲು ಅಂಬಿ ಅಭಿಮಾನಿಗಳ ಸಂಕಲ್ಪ

ಮಂಜ ಏಳದಂತೆ ತಡೆಯಲು ಅಂಬಿ ಅಭಿಮಾನಿಗಳ ಸಂಕಲ್ಪ

Subscribe to Filmibeat Kannada
Ambarish fans to block Eddelu Manjunatha release
ಹಿರಿಯ ಚಿತ್ರನಟ ಮತ್ತು ಕಾಂಗ್ರೆಸ್ ನಾಯಕ ಅಂಬರೀಷ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಕ್ಷಮೆ ಕೋರದಿದ್ದರೆ ಬಿಜೆಪಿ ನಾಯಕ ಜಗ್ಗೇಶ್ ಅವರ ಹೊಸಚಿತ್ರ 'ಎದ್ದೇಳು ಮಂಜುನಾಥ' ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಎಚ್ಚರಿಕೆ ನೀಡಿದೆ. 'ಎದ್ದೇಳು ಮಂಜುನಾಥ' ಚಿತ್ರ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಚಿತ್ರಮಂದಿರದಲ್ಲಿಯೂ ಚಿತ್ರ ಬಿಡುಗಡೆಯಾಗದಂತೆ ತಡೆಯಲು ಸನ್ನದ್ಧರಾಗಿರುವುದಾಗಿ ಅಂಬಿ ಅಭಿಮಾನಿ ಸಂಘದ ವ್ಯವಸ್ಥಾಪಕ ಅಧ್ಯಕ್ಷ ಬಿ.ಆರ್. ಶ್ರೀನಿವಾಸ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾವ ರೀತಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕೇಳಿದ ಪ್ರಶ್ನೆಗೆ ಶ್ರೀನಿವಾಸ್ ಅವರಲ್ಲಿ ಉತ್ತರವಿಲ್ಲ. 'ಅದು ಸಿಕ್ರೆಟ್! ಚಿತ್ರ ಬಿಡುಗಡೆಯ ದಿನ ಕಾದು ನೋಡಿ' ಎಂದು ಎಂದಿರುವ ಅಂಬಿ ಅಭಿಮಾನಿಗಳ ಬಳಗ ಪ್ರತಿಭಟನೆಯ ರೀತಿಯನ್ನು ಗುಟ್ಟಾಗಿಟ್ಟಿದೆ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಿಡಿಹೊತ್ತಿ ಕಾವು ಪಡೆದುಕೊಂಡಿದ್ದ ಜಗ್ಗೇಶ್ ಮತ್ತು ಅಂಬರೀಷ್ ನಡುವಿನ ವಿವಾದ ತಾನಾಗೇ ತಣ್ಣಗಾಗಿತ್ತು. ಈ ಬಗ್ಗೆ ಅಂಬರೀಷ್ ಕೂಡ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜಗ್ಗೇಶ್ ನಟನೆಯ 'ಎದ್ದೇಳು ಮಂಜುನಾಥ' ಚಿತ್ರ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಂಬಿ ಅಭಿಮಾನಿಗಳು ಮತ್ತೆ ಎಚ್ಚೆತ್ತುಕೊಂಡಿದ್ದಾರೆ. 'ಆಪರೇಷನ್ ಕಮಲ'ದ ಮುಖಾಂತರ ಬಿಜೆಪಿಗೆ ಸೇರಿದ ದುರಂಕಾರಿಯಂತಾಗಿರುವ ಜಗ್ಗೇಶ್ ಅವರು ಅಂಬರೀಷ್ ಕ್ಷಮೆಯನ್ನು ಕೇಳಲೇಬೇಕು ಎಂದು ಅಭಿಮಾನಿಗಳು ಪಟ್ಟುಹಿಡಿದಿದ್ದಾರೆ.

ಮಂಡ್ಯದಲ್ಲಿ ಚುನಾವಣಾ ಪ್ರಚಾರ ಮಾಡುವಾಗ, ಕನ್ನಡಿಗರಿಗೆ ರಾಜಕುಮಾರ್ ಎಂದೆಂದಿಗೂ ದೊಡ್ಡ ನಾಯಕರೇ ಹೊರತು ಅಂಬರೀಷ್ ಅಲ್ಲ ಎಂಬ ಮಾತಾಡಿ ಅಂಬರೀಷ್ ಅಭಿಮಾನಿಗಳನ್ನು ಜಗ್ಗೇಶ್ ಕೆಣಕಿದ್ದರು. ಚಿತ್ರರಂಗದಲ್ಲಿ ಮತ್ತು ರಾಜಕೀಯದಲ್ಲಿ ಜಗ್ಗೇಶ್ ಕಣ್ಣುಬಿಟ್ಟಿದ್ದು ಅಂಬರೀಷ್ ಕೃಪಾಕಟಾಕ್ಷದಿಂದ. ಈಗ ಅವರನ್ನೇ ಅವಮಾನಿಸಿದ್ದಾರೆ ಎಂದು ಅಂಬಿ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.

ಜಗ್ಗೇಶ್ ಚಿತ್ರ ಮಾತ್ರವಲ್ಲ ಜಗ್ಗೇಶ್ ಮಗ ಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಗಿಲ್ಲಿ' ಚಿತ್ರ ಕೂಡ ಬಿಡುಗಡೆಯಾಗದಂತೆ ತಡೆಯುವುದಾಗಿ ಶ್ರೀನಿವಾಸ್ ಹೇಳಿದರು. ಇವರಿಬ್ಬರ ಚಿತ್ರ ಬಿಡುಗಡೆಗೆ ತಡೆಯೊಡ್ಡುವ ಸಂಕಲ್ಪ ತೊಟ್ಟಿರುವ ಅಂಬಿ ಅಭಿಮಾನಿಗಳ ಸಂಘ ಜಗ್ಗೇಶ್ ತಮ್ಮ ನಟಿಸಿದ 'ಚಮ್ಕಾಯಿಸಿ ಚಿಂದಿ ಉಡಾಯಿಸಿ' ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಮಾತ್ರ ಯಾವುದೇ ತಡೆಯೊಡ್ಡಿರಲಿಲ್ಲ.

ಜಗ್ಗೇಶ್ ಮತ್ತು 'ಎದ್ದೇಳು ಮಂಜುನಾಥ' ಚಿತ್ರದ ನಿರ್ಮಾಪಕ ಸನತ್ ಕುಮಾರ್ ಅವರು ಮುಂಜಾಗ್ರತಾ ಕ್ರಮವಾಗಿ ಚಿತ್ರ ಬಿಡುಗಡೆಗೆ ಸಮಯದಲ್ಲಿ ಯಾವುದೇ ತಡೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರನ್ನು ವಿನಂತಿಸಲಿದ್ದಾರೆ ಎಂದು ತಿಳಿದುಬಂದಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada