»   »  ಎದ್ದೇಳು ಮಂಜುನಾಥ ಬಿಡುಗಡೆ ಹಾದಿ ಸುಗಮ

ಎದ್ದೇಳು ಮಂಜುನಾಥ ಬಿಡುಗಡೆ ಹಾದಿ ಸುಗಮ

Subscribe to Filmibeat Kannada

ಜಗ್ಗೇಶ್-ಅಂಬರೀಶ್-ಎದ್ದೇಳು ಮಂಜುನಾಥ-ಅಂಬಿ ಅಭಿಮಾನಿಗಳ ಸಂಘದ ಸುತ್ತ ಹಮ್ಮಿಕೊಂಡಿದ್ದ ವಿವಾದದ ಬಳ್ಳಿ ಇದೀಗ ಸಡಿಲಗೊಂಡಿದೆ. ಜುಲೈ 13 ರ ಸಂಜೆ ನಡೆದ ಸಂಧಾನ ಮಾತುಕತೆಗಳು ಫಲಿಸಿದ ಪರಿಣಾಮ ಎದ್ದೇಳು ಮಂಜುನಾಥ ಬಿಡುಗಡೆಗೆ ಒಡ್ಡಲಾಗಿದ್ದ ಬೆದರಿಕೆಯ ತಡೆಗೋಡೆ ಸರಿದಿದೆ.

ಡಾ. ಜಯಮಾಲಾ ಅವರು ಜುಲೈ 14ರ ಬೆಳಗ್ಗೆ ಟಿವಿ9 ವಾಹಿನಿಗೆ ಹೇಳಿಕೆ ನೀಡಿದ್ದು ಅದರಂತೆ ಚಿತ್ರ ಬಿಡುಗಡೆ ವಿರುದ್ಧ ಅಂಬಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ರದ್ದಾಗಿದೆ. ಅಂಬರೀಶ್ ಅವರು ಜಗ್ಗೇಶ್ ಅವರನ್ನು ಕ್ಷಮಿಸುವುದಲ್ಲದೆ ಯಾವುದೇ ಬಗೆಯ ಪ್ರತಿಭಟನೆ ಜಗ್ಗೇಶ್ ಚಿತ್ರ ಬಿಡುಗಡೆಗೆ ಆಗದು ಎಂದು ಭರವಸೆ ನೀಡಿದ್ದಾರೆ. ಮಠ ಚಿತ್ರ ಖ್ಯಾತಿಯ ಗುರುಪ್ರಸಾದ್ ನಿರ್ದೇಶಿಸಿರುವ ಎದ್ದೇಳು ಮಂಜುನಾಥ ಇದೇ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ತಮ್ಮ ಚಿತ್ರ ಬಿಡುಗಡೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಚಿತ್ರದ ನಿರ್ಮಾಪಕ ವಿ.ಸನತ್ ಕುಮಾರ್ ಅವರು ಸೋಮವಾರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಅಧ್ಯಕ್ಷೆ ಡಾ. ಜಯಮಾಲಾ ಮಧ್ಯೆ ಪ್ರವೇಶಿಸಿ ಕನ್ನಡ ಚಿತ್ರಗಳಿಗೆ ಅನಗತ್ಯ ತೊಂದರೆ ಆಗಬಾರದು,ಎದ್ದೇಳು ಬಿಡುಗಡೆಗೆ ಅಡ್ಡಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಅಂಬಿ ಜತೆ ಜಯಮಾಲಾ ಮಾತನಾಡಿ, ಆನಂತರ ಅಂಬಿ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದನಂತರ ಜ್ವರ ಕಮ್ಮಿಯಾಯಿತು.

ಕಳೆದ ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಜಗ್ಗೇಶ್ ಅವರು ಅಂಬಿ ವಿರುದ್ಧ ಮಂಡ್ಯ ಜಿಲ್ಲೆ ಪ್ರವಾಸದಲ್ಲಿ ಅವಹೇಳನಕಾರಿ ಮಾತನಾಡಿದ್ದರು ಎಂದು ಅಂಬಿ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಜಗ್ಗೇಶ್ ಕ್ಷಮಾಪಣೆ ಕೇಳದ ಹೊರತು ಅವರ ಯಾವುದೇ ಚಿತ್ರ ಬಿಡುಗಡೆ ಆಗುವುದಕ್ಕೆ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada