»   »  ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!

ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!

Subscribe to Filmibeat Kannada
Actor Dashan regrets statement on Jayamala
*ಜಯಂತಿ
ದರ್ಶನ್ ಈಗ ತಣ್ಣಗಾಗಿದ್ದಾರೆ. ಜಯಮಾಲಾ ವಿರುದ್ಧ ಆತುರಾತುರದಲ್ಲಿ ತಾವು ಆಡಿದ ಮಾತುಗಳಿಗೆ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ. ಆ ರೀತಿ ಮಾತನಾಡಬಾರದಿತ್ತು ಅಂತ ಆಪ್ತೇಷ್ಟರಲ್ಲಿ, ಆಪ್ತ ಸುದ್ದಿಮಿತ್ರರಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ.

ದರ್ಶನ್ ಟೆಂಪರ್ ಹೀಗಾದದ್ದು ಏಕೆ ಅನ್ನೋ ದು ಪ್ರಶ್ನೆ. ಅಮೃತ ಮಹೋತ್ಸವ ಮುಗಿದ ನಂತರ ಅನೇಕ ಸಂಗತಿಗಳಿಗೆ ಸಂಬಂಧಿಸಿದಂತೆ ಜಯಮಾಲಾ ತಿಪ್ಪೆ ಸಾರಿಸಬೇಕಾಯಿತು. ಮಹೋತ್ಸವ ಪ್ರಾರಂಭವಾಗುವ ಹಿಂದಿನ ದಿನ ರವಿಚಂದ್ರನ್ ಕೂಡ ಅವರ ಮೇಲೆ ಹಾರಾಡಿ ಬಂದಿದ್ದರು. ಸಮಾರಂಭದಲ್ಲಿ ಅನೇಕ ಗೊಂದಲ ಸೃಷ್ಟಿಯಾಗಿ ಅತೃಪ್ತ ಮನಸ್ಸುಗಳು ಜಾಸ್ತಿಯಾದವು. ಅವರನ್ನೆಲ್ಲ ಸಂತೈಸುವುದು ತಮಾಷೆಯ ಮಾತಲ್ಲ. ಮೇಲಾಗಿ ಜಯಮಾಲಾ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದರೂ, ಅವರೊಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸ್ವಾತಂತ್ರ್ಯ ಅಲ್ಲಿಲ್ಲ. ಸಮಾರಂಭವನ್ನೇ ಬಂಡವಾಳ ಮಾಡಿಕೊಂಡು ಅಲ್ಲಿ ಬೇಳೆ ಬೇಯಿಸಿಕೊಂಡ ಪದಾಧಿಕಾರಿಗಳು ಒಬ್ಬಿಬ್ಬರಲ್ಲ.

ಯಾರು ಏನೇ ಮಾಡಿದರೂ ಅದರ ಹೊಣೆ ಜಯಮಾಲಾ ಅವರೇ ಹೊರಬೇಕಾದದ್ದು ದುರಂತ. ಈ ಕಾರಣಕ್ಕೇ ಅವರು ಅನೇಕ ಮೊಬೈಲ್ ಕರೆಗಳಿಗೆ ಉತ್ತರಿಸದೇ ಹೋದರು. ಈ ಉಸಾಬರಿಯಲ್ಲಿ ದರ್ಶನ್ ಹಾಗೂ ಸ್ನೇಹಿತರಿಗೆ ಬೇಗ ಅಪಾಂಯ್ಟ್‌ಮೆಂಟ್ ಕೊಡಲಿಲ್ಲ. ಅದಕ್ಕೂ ಮಿಗಿಲಾಗಿ ಎಪ್ಪತ್ತೈದು ಕೃತಿಗಳು ಪ್ರಾತಿನಿಧಿಕವಷ್ಟೆ ಎಂಬುದನ್ನು ಅವರು ದರ್ಶನ್‌ಗೆ ಮನವರಿಕೆ ಕೂಡ ಮಾಡಿಕೊಡಲಿಲ್ಲ.

ಅವರು ಮೊದಲೇ ಮನವರಿಕೆ ಮಾಡಿಕೊಟ್ಟಿದ್ದರೆ ನಾನು ಹೀಗೆ ಮಾತನಾಡುವ ಪ್ರಸಂಗವೇ ಬರುತ್ತಿರಲಿಲ್ಲ. ಎಪ್ಪತ್ತೈದು ಪುಸ್ತಕಗಳು ಯಾರ್‍ಯಾರ ಕುರಿತು ಬಂದಿವೆ ಅನ್ನೋದೂ ನನಗೆ ಗೊತ್ತಿಲ್ಲ. ಪುಸ್ತಕ ಬಿಡುಗಡೆಯಾಗುವವರೆಗೆ ಅವರು ಏನೂ ಹೇಳದೇ ಇರುವುದರಿಂದ ನನಗೆ ಕೋಪ ಬಂತು. ಕೋಪದಲ್ಲಿ ನಾನೂ ಖಾರವಾಗಿ ಮಾತಾಡಿದೆ. ಹಾಗೆಲ್ಲಾ ಮಾತಾಡದೇ ಇದ್ದರೆ ಚೆನ್ನಾಗಿತ್ತು ಅಂತ ಈಗ ಅನ್ನಿಸುತ್ತದೆ ಎಂದು ದರ್ಶನ್ ರಾಗ ಬದಲಿಸಿ ಮಾತಾಡತೊಡಗಿದ್ದಾರೆ.

ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ಕೃತಿಗಳು ಬಿಡುಗಡೆಯಾದಾಗ ಸೋ ಕಾಲ್ಡ್ ಸ್ಟಾರ್ಸ್ ಯಾರೂ ಅಲ್ಲಿರಲಿಲ್ಲ. ಹಾಡು, ಕುಣಿತ, ಮನರಂಜನೆ ಅಷ್ಟೇ ಸಿನಿಮಾ ಅಂತ ಅಂದುಕೊಂಡವರು ಸೃಜನಶೀಲತೆಯ ವಿಷಯ ಬಂದಾಗ ವರ್ತಿಸುವುದೇ ಹೀಗೆ. ಹಾಗೆ ಉಪೇಕ್ಷೆಯಿಂದ ಕೃತಿ ಬಿಡುಗಡೆಗೆ ಬರದವರಲ್ಲಿ ದರ್ಶನ್ ಕೂಡ ಒಬ್ಬರು. ದೊಣ್ಣೆ ತರಹ ಕುಂಬಾರನ ಮಡಿಕೆಯನ್ನು ನಿಮಿಷದಲ್ಲಿ ಒಡೆದುಹಾಕಿ, ಈಗ ಪಶ್ಚಾತ್ತಾಪ ಪಟ್ಟರೆ ಏನು ಪ್ರಯೋಜನ? ಒಟ್ಟಿನಲ್ಲಿ ಜಯಮಾಲಾ ಗ್ರಹಚಾರ ಸರಿಯಿಲ್ಲ. ಎಲ್ಲಾ ಆಕೆಯ ಬುಡಕ್ಕೇ ಬಂದು ಕೂತಿದೆ.

ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada