»   » ಕೈಟ್ಸ್ ಗೆ ತೀವ್ರ ವಿರೋಧ; ಬಸಂತಕುಮಾರ್ ಬಂಧನ

ಕೈಟ್ಸ್ ಗೆ ತೀವ್ರ ವಿರೋಧ; ಬಸಂತಕುಮಾರ್ ಬಂಧನ

By: *ಉದಯರವಿ
Subscribe to Filmibeat Kannada

ಋತಿಕ್ ರೋಷನ್ ಹಾಗೂ ಬಾರ್ಬರಾ ಮೋರಿ ಅಭಿನಯದ 'ಕೈಟ್ಸ್' ಬಿಡುಗಡೆ ವಿವಾದ ಬೆಂಗಳೂರಿನಲ್ಲಿ ತಾರಕಕ್ಕೇರಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೀತಿ ನಿಯಮಗಳನ್ನು ಮೀರಿ ಶುಕ್ರವಾರ (ಮೇ.21) ಅತ್ಯಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ 'ಕೈಟ್ಸ್ 'ಬಿಡುಗಡೆಯಾಗಿತ್ತು. ಇದನ್ನು ವಿರೋಧಿ ಇಂದು ಬೆಂಗಳೂರಿನ ಮಂತ್ರಿ ಮಾಲ್ ಬಳಿ ಕನ್ನಡ ಚಲನಚಿತ್ರ ವಿತರಕರು ಹಾಗೂ ನಿರ್ಮಾಪಕರು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಸೇರಿದಂತೆ ನಿರ್ಮಾಪಕರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಾ ರಾ ಗೋವಿಂದು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು. ನಟ ಚೇತನ್ ಹಾಗೂ ರಮೇಶ್ ಅರವಿಂದ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ-ಎಎಂಆರ್ ರಮೇಶ್
ಪ್ರತಿಭಟನೆಯ ಕಾರಣ ಬೆಂಗಳೂರಿನ ಕಾವೇರಿ ಚಿತ್ರಮಂದಿರದಲ್ಲೂ 'ಕೈಟ್ಸ್' ಚಿತ್ರ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ. ಈ ಬಗ್ಗೆ ಮಾತನಾಡಿದ ಬಸಂತಕುಮಾರ್ ಪಾಟೀಲ್, ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುವವರೆಗೂ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಪತ್ರ ಮುಖೇನ ಚಿತ್ರಮಂದಿರದ ಮಾಲೀಕರು ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ರ ನಿರ್ದೇಶಕ ಎಎಂ ಆರ್ ರಮೇಶ್ ಮಾತನಾಡುತ್ತಾ, ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ಕನ್ನಡಕ್ಕೆ ಆದ್ಯತೆ ಕೊಡಬೇಕು ಎಂಬುದು ನಮ್ಮ ಬೇಡಿಕೆ. ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ. ಫಿಲಂ ಚೇಂಬರ್ ನೀತಿ ನಿಯಮಗಳನ್ನು ಗಾಳಿಗೆ ತೂರಿ 'ಕೈಟ್ಸ್' ಬಿಡುಗಡೆಯಾಗಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಕೈಟ್ಸ್ ಟಿಕೆಟ್ ಹಣ ವಾಪಸ್
ಕೈಟ್ಸ್ ಚಿತ್ರ ಪ್ರದರ್ಶನ ರದ್ದಾದ ಕಾರಣ ಮುಂಗಡ ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರಿಗೆ ಹಣ ಹಿಂತಿರುಗಿಸುವ ವ್ಯವಸ್ಥೆಯನ್ನು ಹಲವು ಚಿತ್ರಮಂದಿರಗಳು ಮಾಡಿದವು. ಹೆಚ್ಚಾಗಿ ಯುವ ಸಮೂಹ 'ಕೈಟ್ಸ್' ಚಿತ್ರಕ್ಕೆ ಮುಗಿಬಿದ್ದಿತ್ತು. 'ಕೈಟ್ಸ್' ಪ್ರದರ್ಶನ ರದ್ದಾದ ಕಾರಣ ಪ್ರೇಕ್ಷಕರು ತೀವ್ರ ನಿರಾಸೆಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂತು. ಕೆಲವರು ವಾಣಿಜ್ಯ ಮಂಡಳಿ ಕ್ರಮವನ್ನು ಸ್ವಾಗತಿಸಿದರು.

ಮುಂಬೈ ಕರ್ನಾಟಕದಲ್ಲಿ ಕೈಟ್ಸ್
ಹುಬ್ಬಳ್ಳಿ, ಬೆಳಗಾವಿ, ಬಿಜಾಪುರ ಸೇರಿದಂತೆ ಮುಂಬೈ ಕರ್ನಾಟಕದಲ್ಲಿ 'ಕೈಟ್ಸ್' ಚಿತ್ರ ಇಂದು ಬಿಡುಗಡೆಯಾಗಿದೆ. ಚಿತ್ರ ಪ್ರದರ್ಶನಕ್ಕೆ ಯಾವುದೇ ವಿರೋಧ ವ್ಯಕ್ತವಾಗದೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬೆಳಗಿನ ಆಟದೊಂದಿಗೆ ಆರಂಭವಾದ 'ಕೈಟ್ಸ್' ತುಂಬಿದ ಚಿತ್ರಮಂದಿರಗಳೊಂದಿಗೆ ಪ್ರದರ್ಶನ ಕಾಣುತ್ತಿದೆ. ಮುಂಬೈ ಕರ್ನಾಟಕದಲ್ಲಿ ಕೈಟ್ಸ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada