»   » ಹೈಕೋರ್ಟ್ ಮೆಟ್ಟಿಲೇರಿದ 'ರಾವಣ್' ರಾಮಾಯಣ

ಹೈಕೋರ್ಟ್ ಮೆಟ್ಟಿಲೇರಿದ 'ರಾವಣ್' ರಾಮಾಯಣ

Posted By:
Subscribe to Filmibeat Kannada

'ರಾವಣ್' ಚಿತ್ರದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತೆ ತೊಡೆ ತಟ್ಟಿದೆ. ಛಲ ಬಿಡದ ತ್ರಿವಿಕ್ರಮನಂತೆ ಈ ಬಾರಿ ಹೈಕೋರ್ಟ್ ಮೆಟ್ಟಿಲೇರಿದೆ. ಒಟ್ಟಿನಲ್ಲಿ ರಾವಣನಿಗೆ ಮಣ್ಣುಮುಕ್ಕಿಸುವ ತನಕ ನಿದ್ದೆ ಮಾಡುವುದಿಲ್ಲ ಎಂದು ಮಂಡಳಿ ತೀರ್ಮಾನಿಸಿದಂತಿದೆ.

ರಾಜ್ಯದಲ್ಲಿ 'ರಾವಣ್' ಚಿತ್ರಕ್ಕೆ ಸಂಬಂಧಿಸಿದಂತೆ ಮಂಡಳಿ ಮತ್ತು ರಿಲಯನ್ಸ್ ಬಿಗ್ ಪಿಕ್ಚರ್ಸ್ ನಡುವಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ರಾಜ್ಯದಲ್ಲಿ ರಾವಣ್ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ದೆಹಲಿಯ ಸ್ಪರ್ಧಾ ಆಯೋಗ ನೀಡಿದ್ದ ಮಧ್ಯಂತರ ತೀರ್ಪನ್ನು ಪ್ರಶ್ನಿಸಿ ಕೆಎಫ್ ಸಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿ ಆನಂದಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿದೆ.

ರಾವಣ್ ಬಿಡುಗಡೆಗೆ ಸಂಬಂಧಿಸಿದಂತೆ ಕೇವಿಯಟ್ ಸಲ್ಲಿಸಿದ್ದರೂ ಸ್ಪರ್ಧಾ ಆಯೋಗ ಅದನ್ನು ಪರಿಗಣಿಸದೆ ಬಿಗ್ ಪಿಕ್ಚರ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿತ್ತು. ಇದರಿಂದ 24 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ರಾವಣ್ ಚಿತ್ರ 36 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದು ಮಂಡಳಿ ತನ್ನ ದೂರಿನಲ್ಲಿ ತಿಳಿಸಿದೆ.

ಈ ಹಿಂದೆ ಕೈಟ್ಸ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ 24 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡುವುದಾಗಿ ರಿಲಯನ್ಸ್ ಬಿಗ್ ಪಿಕ್ಚರ್ಸ್ ಮುಚ್ಚಳಿಕೆ ಬರೆದುಕೊಟ್ಟಿತ್ತು. ಇದೀಗ ಮುಚ್ಚಳಿಕೆ ವಿರುದ್ಧವಾಗಿ ಸ್ಪರ್ಧಾ ಆಯೋಗಕ್ಕೆ ರಿಲಯನ್ಸ್ ಬಿಗ್ ಪಿಕ್ಚರ್ಸ್ ದೂರು ಸಲ್ಲಿಸಿದೆ. ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮಂಡಳಿ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada