»   »  'ಕೀಚಕ'ನಿಗೆ ಕೈಕೊಟ್ಟ ನಟಿ ನಯನತರಾ!

'ಕೀಚಕ'ನಿಗೆ ಕೈಕೊಟ್ಟ ನಟಿ ನಯನತರಾ!

Subscribe to Filmibeat Kannada

ದಕ್ಷಿಣದ ಖ್ಯಾತ ತಾರೆ ನಯನತಾರಾ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಠುಸ್ ಪಟಾಕಿಯಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶಿಸುತ್ತಿರುವ 'ಕೀಚಕ' ಚಿತ್ರದಲ್ಲಿ ಆಕೆ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಬಾಂಬ್ ನಂತೆ ಸಿಡಿದಿತ್ತು. ಆದರೆ ಅದು ಠುಸ್ ಪಟಾಕಿ ಎಂಬ ವಿಚಾರ ತಡವಾಗಿ ವರದಿಯಾಗಿದೆ.

ಕೀಚಕ ಚಿತ್ರದ ಮುಹೂರ್ತಕ್ಕೆ ಕಳೆದ ಭಾನುವಾರವೇ ನಯನತಾರಾ ಬೆಂಗಳೂರಿಗೆ ಬರಬೇಕಿತ್ತು. ಕೀಚಕ ಚಿತ್ರದಲ್ಲಿ ಆಕೆಯ ಪಾತ್ರದ ಬಗ್ಗೆ ನಟ ರವಿಚಂದ್ರನ್ ಸಹ ದೂರವಾಣಿ ಮೂಲಕ ತಿಳಿಸಿದ್ದರಂತೆ. ತಮ್ಮ ಪಾತ್ರದ ವಿವರಗಳನ್ನು ಕೇಳಿ ನಯನತಾರಾ ಸಹ ಹಿಗ್ಗಿ ಹೀರೇಕಾಯಿ ಆಗಿದ್ದರು ಎನ್ನುತ್ತಾರೆ ಚಿತ್ರದ ನಿರ್ಮಾಪಕ ಮುನಿರತ್ನ.

ಇಷ್ಟೆಲ್ಲಾ ನಡೆದಿದ್ದರೂ ಕಡೆ ಘಳಿಗೆಯಲ್ಲಿ ನಯನತಾರಾ ಕೈಕೊಟ್ಟಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಚಿತ್ರದಲ್ಲಿ ಈಜುಡುಗೆ ತೊಡಲು ನಟ ರವಿಚಂದ್ರನ್ ಹೇಳಿದ್ದರಂತೆ. ಆದರೆ ನಯನತಾರಾಗೆ ಈಜುಡುಗೆ ತೊಡಲು ಇಷ್ಟವಿಲ್ಲವಂತೆ. ಹಾಗಾಗಿ 'ಕೀಚಕ'ನನ್ನು ಕೈಬಿಟ್ಟಿದ್ದಾರೆ ಎನ್ನುತ್ತವೆ ಮೂಲಗಳು.

ಆದರೆ ತೆಲುಗಿನ 'ಬಿಲ್ಲಾ' ಚಿತ್ರದಲ್ಲಿ ನಯನತಾರಾ ಬಿಕಿನಿ ತೊಟ್ಟು ಕುಣಿದಿದ್ದರಲ್ಲಾ! ಈಗೇನಾಯಿತು ಈಕೆಗೆ ಎಂದು ಕೇಳಿದರೆ, ಇನ್ನು ಮುಂದೆ ತಾವು ಬಿಕಿನಿ, ಈಜುಡುಗೆಗಳನ್ನು ತೊಟ್ಟು ಮೈಮಾಟ ಪ್ರದರ್ಶಿಸುವುದಿಲ್ಲ. ಇನ್ನೇನಿದ್ದರೂ ಸೀರೆ ತೊಟ್ಟೇ ನಟಿಸುತ್ತೇನೆ ಎಂದು ಪ್ರಮಾಣ ಮಾಡಿದ್ದಾರಂತೆ.

ಮತ್ತೊಂದು ಮೂಲದ ಪ್ರಕಾರ ನಯನತಾರಾ ಮುಂದಿನ ವರ್ಷ ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವಾ ಅವರನ್ನು ಮದುವೆಯಾಗುತ್ತಿದ್ದಾರಂತೆ. ಹಾಗಾಗಿ ಬಿಕಿನಿ, ಈಜುಡುಗೆ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಮದುವೆ ಹತ್ತಿರವಾಗುತ್ತಿರುವ ಕಾರಣ ಹೆಚ್ಚಿನ ಚಿತ್ರಗಳಿಗೂ ಸಹಿ ಮಾಡಿಲ್ಲವಂತೆ.

'ಕೀಚಕ'ನಿಗೆ ನಯನತಾರಾ ಕೈಕೊಟ್ಟ ಕಾರಣ ವಿಧಿ ಇಲ್ಲದೆ ಚಿತ್ರದ ನಿರ್ಮಾಪಕ ಮುನಿರತ್ನ ಅವರು ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ. ತಮ್ಮ ಚಿತ್ರದ ಪಾತ್ರಕ್ಕೆ ಅವರು ಒಪ್ಪಲ್ಲ ಅಂದ ಮೇಲೆ ಇನ್ನ್ನೇನು ತಾನೆ ಮಾಡಲು ಸಾಧ್ಯ. ಈ ಪಾತ್ರಕ್ಕೆ ಒಪ್ಪುವಂತಹ ಮತ್ತೊಬ್ಬ ಹೊಸ ನಟಿಯನ್ನು ಹುಡುಕುತ್ತಿದ್ದೇವೆ ಎನ್ನುತ್ತಾರೆ ಮುನಿರತ್ನ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada