For Quick Alerts
  ALLOW NOTIFICATIONS  
  For Daily Alerts

  ರಮ್ಯಾಗೆ ಚಿತ್ರರಂಗದಿಂದ 1 ವರ್ಷ ನಿಷೇಧ!

  By Prasad
  |

  ಕನ್ನಡ ಚಿತ್ರರಂಗದಲ್ಲಿ ತಲೆದೋರಿದ್ದ ಒಣಪ್ರತಿಷ್ಠೆಯ ಕದನಕ್ಕೆ ಕೊನೆಗೂ ತೆರೆಬಿದ್ದಿದೆ. 'ದಂಡಂ ದಶಗುಣಂ' ಚಿತ್ರದ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣದಿಂದ ವಿವಾದದ ಕೇಂದ್ರಬಿಂದುವಾಗಿದ್ದ ಕನ್ನಡ ಚಿತ್ರರಂಗದ ಅಭಿನೇತ್ರಿ 'ಗೌರಮ್ಮ' ರಮ್ಯಾ ಅಕಾ ದಿವ್ಯಾ ಸ್ಪಂದನಾಗೆ ಕನ್ನಡ ಚಿತ್ರರಂಗದಿಂದ 1 ವರ್ಷದ ನಿಷೇಧ ಹೇರಲಾಗಿದೆ.

  ಮಂಗಳವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ ಪಾಟೀಲ ಅವರು, ರಮ್ಯಾ ಚಿತ್ರ ಪ್ರಚಾರಕ್ಕೆ ತೋರಿದ 'ದಿವ್ಯ' ಅಸಡ್ಡೆಯಿಂದಾಗಿ ಅವರ ವಿರುದ್ಧ ಈ ಕಠಿಣ ಕ್ರಮ ಜಗುರಿಸಲಾಗಿದೆ. ಇನ್ನು ಒಂದು ವರ್ಷಗಳ ಕಾಲ ಅವರನ್ನು ಯಾವುದೇ ಚಿತ್ರಕ್ಕೂ ಸಹಿ ಮಾಡಿಸಿಕೊಳ್ಳುವಂತಿಲ್ಲ. ರಮ್ಯಾ ಯಾವುದೇ ಚಿತ್ರದಲ್ಲಿ ನಟಿಸುವಂತಿಲ್ಲ. ಚಿತ್ರರಂಗದ ಎಲ್ಲಾ ಸಂಘಗಳನ್ನು ಸಂಪರ್ಕಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನುಡಿದರು.

  'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಗಣೇಶ್ ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಮ್ಯಾ ಬರದೆ ಉದ್ಧಟತನ ತೋರಿದ್ದರು ಎಂದು ದೂರಿದ್ದರೆ, ತಾನು ಅವರಿಗೆ ಹಣಕಾಸಿನ ಸಹಾಯ ಮಾಡಿದ್ದೇ ತಪ್ಪೆ ಎಂದು ರಮ್ಯಾ ಮಾಧ್ಯಮದೆದಿರು ಗೋಳಿಟ್ಟುಕೊಂಡು ಕಣ್ಣೀರುಗರೆದಿದ್ದರು. ಮಾಧ್ಯಮದೊಂದಿಗೆ ಮಾತನಾಡುವಾಗ ಕೆಲ ಹಿರಿಯ ನಿರ್ದೇಶಕ, ನಿರ್ಮಾಪಕರ ಬಗ್ಗೆಯೂ ಅವಹೇಳನಕಾರಿ ಮಾತುಗಳನ್ನು ರಮ್ಯಾ ಆಡಿದ್ದರು.

  ಈ ಹಗರಣದಿಂದಾಗಿ ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ ಪಾಟೀಲ ಮತ್ತು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ನಡುವಿನ ಕದನವೂ ಜೀವ ಪಡೆದುಕೊಂಡಿತ್ತು. ಪಾಟೀಲರೇನು ಸುಪ್ರೀಂ ಅಲ್ಲ ಎಂದು ಅಂಬರೀಷ್ ಮಾತಿನ ಚಾಟಿ ಬೀಸಿದ್ದರೆ, ನಾನು ಸುಪ್ರೀಂ ಅಲ್ಲ, ಆದರೆ ಮಂಡಳಿಯ ಆದೇಶವೇ ಸುಪ್ರೀಂ ಎಂದು ಮರುಮಾತಿನ ಉತ್ತರ ಪಾಟೀಲರು ನೀಡಿದ್ದರು. ರಮ್ಯಾ ವಿರುದ್ಧ ಹೇರಿರುವ ನಿಷೇಧದ ಈ ನಿರ್ಧಾರದಿಂದಾಗಿ ಇವರಿಬ್ಬರ ನಡುವಿನ ಗುದ್ದಾಟ ಯಾವ ಹಂತ ತಲುಪುವುದೋ?

  ಮಾತ್ ಮಾತಲ್ಲಿ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಕಿಚ್ಚ ಹುಚ್ಚ, ದಂಡಂ ದಶಗುಣಂ ಸೇರಿದಂತೆ ಅನೇಕ ಚಿತ್ರಗಳ ನಿರ್ಮಾಪಕ, ನಿರ್ದೇಶಕ, ನಟರೊಂದಿಗೆ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿಕೊಂಡಿದ್ದ ರಮ್ಯಾ, ಈ ಎಲ್ಲ ಹಗರಣಗಳಿಂದ ಮನನೊಂದು ಕನ್ನಡ ಚಿತ್ರರಂಗಕ್ಕೇ ವಿದಾಯ ಹೇಳುವುದಾಗಿ ಹೇಳಿದ್ದರು. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಆದಾದ ನಂತರವೇ, ಅವರಿಗೆ 1 ವರ್ಷದ ನಿಷೇಧ ಹೇರಲಾಗಿದೆ. ತಕ್ಕಳ್ಳಪ್ಪ! ಅವರೇ ನಟಿಸಲ್ಲ ಅಂತ ಹೇಳಿದ್ಮೇಲೆ ಇವರು ನಿಷೇಧ ಹೇರಿ ಏನು ಪ್ರಯೋಜನ? ಆದರೂ, ಈ ನಿಷೇಧಕ್ಕೆ ರಮ್ಯಾ ಅವರ ಒಂದು ಪದದ ಪ್ರತಿಕ್ರಿಯೆ ಏನು ಗೊತ್ತಾ? "ಜೋಕ್!"

  English summary
  Kannada actress Ramya aka Divya Spandana has been banned by Karnataka Film Chamber of Commerce (KFCC) for 1 year for not coming to the promotions of Kannada movie Dandam Dashagunam. Ramya had some financial problems with producer Ganesh too.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X