For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 2 ಸೋಮವಾರ ಕನ್ನಡ ಚಿತ್ರರಂಗ ಬಂದ್

  By Rajendra
  |

  ರಿಲಯನ್ಸ್ ಬಿಗ್ 92.7ಎಫ್ ಎಂ ವಾಹಿನಿ ವಿರುದ್ಧ ಇಡೀ ಕನ್ನಡ ಚಿತ್ರೋದ್ಯಮ ಸಮರ ಸಾರಿದೆ. ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿ ಕಾರ್ಯಕ್ರವನ್ನು ಪ್ರಸಾರ ಮಾಡಿರುವ ಬಿಗ್ ಎಫ್ ಎಂಗೆ ತಕ್ಕಪಾಠ ಕಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರೋದ್ಯಮ ಬಂದ್ ಗೆ ಕರೆಕೊಟ್ಟಿದೆ.

  ಬಿಗ್ ಎಫ್ ಎಂ ವಾಹಿನಿಯ ಬೇಜವಾಬ್ದಾರಿ ಕಾರ್ಯಕ್ರಮವನ್ನು ವಿರೋಧಿಸಿ ಸೋಮವಾರ (ಆ.2) ಇಡೀ ಕನ್ನಡಚಿತ್ರರಂಗ ಸಾಂಕೇತಿಕ ಬಂದ್ ಆಚರಿಸುತ್ತಿದೆ. ಚಿತ್ರರಂಗದ ಸಂಪೂರ್ಣ ಚಟುವಟಿಕೆಗಳು ಸೋಮವಾರ ಬಂದ್ ಆಗಲಿವೆ ಎಂದು ಕರ್ನಾಟಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಶನಿವಾರ ಮಧ್ಯಾಹ್ನ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  ಬಿಗ್ ಎಫ್ ಎಂ ವಾಹಿನಿ ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವವರನ್ನು ಅವಹೇಳನ ಮಾಡುವ ಕಾರ್ಯಕ್ರಮವನ್ನು ಬಿತ್ತರಿಸಿತ್ತು. ಈ ಕಾರ್ಯಕ್ರಮಕ್ಕೆ ಅಂತ್ಯ ಹಾಡಬೇಕು ಎಂಬ ಉದ್ದೇಶದಿಂದ ಸೋಮವಾರ ಚಿತ್ರರಂಗ ಬಂದ್ ಮಾಡಲು ನಿರ್ಧರಿಸಿರುವುದಾಗಿ ಪಾಟೀಲ್ ಹೇಳಿದರು.

  ಬಸಂತ್ ಕುಮಾರ್ ಪಾಟೀಲ್ ಮಾತನಾಡುತ್ತಾ, ಸಮಗ್ರ ಚಿತ್ರೋದ್ಯಮವನ್ನು ಬಂದ್ ಮಾಡುತ್ತಿದ್ದೇವೆ. ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಬಂದ್ ಗೆ ಕರೆಕೊಟ್ಟಿದ್ದೇವೆ. ಇನ್ನು ಮುಂದೆ ನಾವು ಬಿಗ್ ಸಿನಿಮಾಸ್ ಜೊತೆ ಯಾವುದೇ ವ್ಯವಹಾರ ಮಾಡುವುದಿಲ್ಲ ಎಂದರು.

  ಬಿಗ್ ಎಂಎಫ್ ವಾಹಿನಿಯಲ್ಲಿ ಇನ್ನು ಮುಂದೆ ಯಾವ ಕಲಾವಿದರು ಸಂದರ್ಶನ ಕೊಡುವಂತಿಲ್ಲ. ಯಾವುದೇ ಹೊಸ ಚಿತ್ರಗಳ ಹಾಡುಗಳನ್ನು ಬಿತ್ತರಿಸುವಂತಿಲ್ಲ ಎಂದು ಬಸಂತ್ ಕುಮಾರ್ ಕಟ್ಟಾಜ್ಞೆ ಹೊರಡಿಸಿದರು. ಈ ರೀತಿಯ ಕಾರ್ಯಕ್ರಮಗಳಿಂದ ಜನಸಾಮಾನ್ಯರಲ್ಲಿ ಚಿತ್ರರಂಗದ ಬಗ್ಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದರು.

  ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಮಾತನಾಡುತ್ತಾ, ನಾವು ಎಫ್ ಎಂ ವಾಹಿನಿ ವಿರುದ್ಧ ಎಂಎಸ್ ಎನ್ ಹಾಗೂ ಶಿವಸೇನೆ ರೀತಿಯಲ್ಲಿ ನುಗ್ಗಿ ದಾಂಧಲೆ ಮಾಡುವುದಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ. ಕನ್ನಡಿಗರು ಶಾಂತಿಪ್ರಿಯರು ಎಂಬುದನ್ನು ನಮ್ಮ ಪ್ರತಿಭಟನೆ ಮೂಲಕ ಇಡೀ ದೇಶಕ್ಕೆ ತೋರಿಸುತ್ತೇವೆ ಎಂದರು.

  ಪತ್ರಿಕಾಗೋಷ್ಠಿಯಲ್ಲಿ ಚಿತ್ರನಟಿ ಉಮಾಶ್ರೀ, ಜಯಂತಿ, ದೊಡ್ಡಣ್ಣ, ಸುದೀಪ್, ನಿರ್ದೇಶಕ ಪ್ರೇಮ್, ನಾಗೇಂದ್ರ ಪ್ರಸಾದ್, ರವಿ ಶ್ರೀವತ್ಸ, ನಾಗಶೇಖರ್, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ವಾಹಿನಿ ವಿರುದ್ಧ ದೂರನ್ನು ದಾಖಲಿಸಲಾಗಿದೆ.

  ಏನಿದು ಕಾರ್ಯಕ್ರಮ? ಏನಿದು ವಿವಾದ?

  ಬಿಗ್ ಎಫ್ ಎಂ ರೇಡಿಯೋದಲ್ಲಿ ಒಂದು ವಿಭಿನ್ನ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಆ ಕಾರ್ಯಕ್ರದಲ್ಲಿ "ಸ್ಯಾಂಡಲ್ ವುಡ್ ನಲ್ಲಿ ಛತ್ರಿ ಯಾರು?" ಎಂದು ಕೇಳುಗರನ್ನು ಪ್ರಶ್ನಿಸಲಾಗಿತ್ತು. ನಟ, ನಟಿ ಸೇರಿದಂತೆ ಛಾಯಾಗ್ರಾಹಕ, ನಿರ್ದೇಶಕ, ಹಾಸ್ಯ ನಟ, ಸಂಗೀತ ನಿರ್ದೇಶಕ ಹೀಗೆ ಎಲ್ಲರ ಬಗ್ಗೆಯೂ ಈ ಪ್ರಶ್ನೆ ಕೇಳಲಾಗಿತ್ತು.

  ಬಿಗ್ ಎಫ್ ಎಂ ರೇಡಿಯೋ ಜಾಕಿಯ ಉದ್ದಟತನಕ್ಕೆ ಕನ್ನಡ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸಿದೆ. ವಾಹಿನಿಯ ಶ್ರೋತೃಗಳು ಚಿತ್ರರಂಗದ ಛತ್ರಿ ಯಾರು ಎಂಬುದನ್ನು ಮನಬಿಚ್ಚಿ ಮಾತನಾಡಿದ್ದರು. ಈ ಕಾರ್ಯಕ್ರಮ ಕನ್ನಡ ಚಿತ್ರೋದ್ಯಮಕ್ಕೆ ಇರುಸು ಮುರುಸು ಉಂಟು ಮಾಡಿತ್ತು. ನಟ, ನಟಿ ಸೇರಿದಂತೆ ಕನ್ನಡ ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿತ್ತು.

  ರಾಜ್ಯದಲ್ಲಿ ಮುಂಗಾರು ಮಳೆ ಜೋರಾಗಿರುವ ಕಾರಣ ಅತಿ ದೊಡ್ಡ ಛತ್ರಿ ಯಾರು ಎಂಬ ಪ್ರಶ್ನೆಯನ್ನು ಈ ವಾಹಿನಿ ಕೇಳುಗರ ಮುಂದಿಟ್ಟಿತ್ತು. "ಈ ದಿನದ ಅತಿ ದೊಡ್ಡ ಛತ್ರಿ" ಎಂಬ ಪ್ರಶಸ್ತಿಯನ್ನು ಈ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುತ್ತಿತ್ತು. ಕೋಮಲ್, ಜಗ್ಗೇಶ್, ಶರಣ್, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಶ್ ಸೇರಿದಂತೆ ಹಲವಾರು ನಟರನ್ನು ಅತಿ ದೊಡ್ಡ ಛತ್ರಿ ಎಂದು ಪ್ರಕಟಿಸಲಾಗಿತ್ತು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X