ಅಮೂಲ್ಯಾ ನೋಡಲು 'ಹಂಪಿ'ಯಲ್ಲಿ ಕಾಯಲಾಗುತ್ತಿದೆ
ಬಂದ ಸುದ್ದಿಯ ಪ್ರಕಾರ, 'ಹಂಪಿ' ಎಂಬ ಚಿತ್ರಕ್ಕಾಗಿ ನಿರ್ದೇಶಕ ಋಷಿ ಅಮೂಲ್ಯಾರನ್ನು ಸಂಪರ್ಕಿಸಿದ್ದಾರೆ. ಮಾತುಕತೆಯೂ ನಡೆದಿದೆ. ಆದರೆ ಆ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಅಮೂಲ್ಯಾ ಮನೆಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಆದರೆ, ಅಮೂಲ್ಯಾ ಅಭಿಮಾನಿಗಳಿಗೆ ಹಬ್ಬದೂಟ.
ನಿರ್ದೇಶಕ ರತ್ನಜ ಜತೆಗಿನ ಫೋಟೋ ವಿವಾದದಿಂದ ಬೇಸತ್ತು ಹೋಗಿದ್ದ ಅಮೂಲ್ಯಾಗೆ, ನಂತರ ತಮಿಳು ನಟನೊಬ್ಬನ ಜತೆಗಿನ 'ಲವ್ ಮ್ಯಾರೇಜ್' ಸುದ್ದಿ ಆಘಾತ ತಂದಿತ್ತು. ಅದೇ ವೇಳೆ ಬಿಡುಗಡೆಯಾದ ಅವರ ಸಹೋದರನ ನಿರ್ಮಾಣದ 'ಮನಸಾಲಜಿ' ಚಿತ್ರ ನೆಲಕಚ್ಚಿತ್ತು.
ಈ ಎಲ್ಲ ಕಾರಣದಿಂದ ಹಾಲಿಡೇ ಹೀರೋಯಿನ್ ಅಮೂಲ್ಯಾ, "ಚಿತ್ರರಂಗದ ಸಹವಾಸವೇ ಬೇಡ, ಇನ್ನು ಮುಂದೆ ನಟಿಸುವುದಿಲ್ಲ" ಎಂದು ಘೋಷಿಸಿದ್ದರು. ಅಮೂಲ್ಯಾ ಅಭಿಮಾನಿಗಳು ಕಂಗಾಲಾಗಿ ಆಕಾಶ ನೋಡಿದ್ದರು. ಇದೀಗ ನಟಿಸುತ್ತಾರೆಂಬ ಸುದ್ದಿ ಹಬ್ಬಿದೆ.
ಇದೀಗ ಅಮೂಲ್ಯಾ ಮನಸ್ಸನ್ನು ಬದಲಾಯಿಸಿಲು ಹೊರಟಿದ್ದಾರೆ ನಿರ್ದೇಶಕ ಋಷಿ. 'ಹಂಪಿ' ಎಂಬ ಚಿತ್ರದ ಹೆಸರಿನ ಜೊತೆ 'ಗತವೈಭವ ಮರುಕಳಿಸಲಿ' ಎಂಬ ಟ್ಯಾಗ್‌ಲೈನ್ ಬೇರೆ ಇಟ್ಟಿದ್ದಾರೆ ನಿರ್ದೇಶಕರು. ಇದೇನೂ ಸರ್ಕಾರದ ಕಿರುಚಿತ್ರವಲ್ಲ, ಪಕ್ಕಾ ಪ್ರೇಮಕಥೆ ಎನ್ನಲಾಗಿದೆ.
ಅಂದಹಾಗೆ, ನಿರ್ದೇಶಕ ಋಷಿ ಎಂದರೆ ಇತ್ತೀಚಿಗೆ 'ಕೊಟ್ಳಲ್ಲಪ್ಪೋ ಕೈ' ಚಿತ್ರವನ್ನು ನಿರ್ದೇಶಿಸಿದ್ದಾರಲ್ಲಾ, ಅವರೇ. 'ನಯನಾ ಕೃಷ್ಣ' ಎಂಬ ನಾಯಕಿ ಚಿತ್ರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ನಂತರ ಸಂಧಾನದಿಂದ ಒಂದು ಹಂತಕ್ಕೆ ಬಂದಿರುವ ಈ ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ಲ.
ಅಷ್ಟರಲ್ಲೇ ಇನ್ನೊಂದು ಚಿತ್ರವಾದ 'ಹಂಪಿ' ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ ನಿರ್ದೇಶಕ ಋಷಿ. ಈ ಚಿತ್ರಕ್ಕೂ 'ಕೊಟ್ಳಲ್ಲಪ್ಪೋ ಕೈ' ಚಿತ್ರದ ನಾಯಕ ಧನುಷ್ ಅವರೇ ನಾಯಕ ಎನ್ನಲಾಗಿದೆ. ನಾಯಕಿ ಪಾತ್ರಕ್ಕೆ ಅಮೂಲ್ಯಾರೇ ಬೇಕು ಎಂದು ಪಟ್ಟುಹಿಡಿದಿದ್ದಾರೆ ಋಷಿ.
ಅಮೂಲ್ಯಾ ಒಪ್ಪಿದರೆ ಬರುವ ಜೂನ್-ಜುಲೈ ಹೊತ್ತಿಗೆ 'ಹಂಪಿ' ಸೆಟ್ಟೇರಲಿದೆ. ಅಮೂಲ್ಯಾ ಏನಾದರೂ ಒಪ್ಪದಿದ್ದರೆ 'ಕೊಟ್ಳಲ್ಲಪ್ಪೋ ಕೈ' ಎಂದು ಕಂಡಕಂಡವರ ಎದುರಿಗೆ ನಿರ್ದೇಶಕ ಋಷಿ ಹೇಳಿಕೊಂಡು ಓಡಾಡುತ್ತಾರೋ ಏನೋ! (ಒನ್ ಇಂಡಿಯಾ ಕನ್ನಡ)


Click it and Unblock the Notifications












