ಗಂಡು ಮಗು ನಿರೀಕ್ಷೆಯಲ್ಲಿ ಶಕಲಕ ಬೇಬಿ ಶಕೀರಾ
ಕೊಲಂಬಿಯಾದ ಖ್ಯಾತ ಪಾಪ್ ಗಾಯಕಿ ಶಕೀರಾ ಈಗ ಗರ್ಭಿಣಿ ಎಂಬುದು ಹಳೆ ಸಂಗತಿ. ಹೊಸ ವಿಷಯ ಏನೆಂದರೆ ತನಗೆ ಹುಟ್ಟಲಿರುವ ಮಗು ಗಂಡು ಎಂದು ಆಕೆ ಸ್ಪಷ್ಟಪಡಿಸಿದ್ದಾರೆ. ಆಕೆಯ ಬಾಯ್ ಫ್ರೆಂಡ್ ಗೆರಾರ್ಡ್ ಪಿಕ್ಯು ಈ ಮಗುವಿನ ತಂದೆ.
ಜರ್ಮನ್ ಟಿವಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಶಕೀರಾ, "ಹೌದು ನಾನು ಗಂಡು ಮಗು ನಿರೀಕ್ಷೆಯಲ್ಲಿದ್ದೇನೆ. ಕೊಲಂಬಿಯಾದಲ್ಲಿ ಶಾಲೆಯೊಂದನ್ನು ನಿರ್ಮಿಸುತ್ತಿದ್ದೇನೆ. ಮುಂದೆ ನನ್ನ ಮಗ ಕೂಡ ಇದೇ ರೀತಿಯ ಧರ್ಮಾರ್ಥ ಕಾರ್ಯಕಗಳಲ್ಲಿ ತೊಡಗಿಕೊಳ್ಳುತ್ತಾನೆ" ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸ್ಪಾನಿಷ್‌ನ ಖ್ಯಾತ ಸಾಕರ್ ಆಟಗಾರ ಗೆರಾರ್ಡ್ ಜೊತೆಗೆ ಶಕೀರಾ ಸಂಬಂಧ ಇಟ್ಟುಕೊಂಡಿದ್ದಾರೆ. ಗೆರಾರ್ಡ್ ಅವರಿಂದ ನನಗೆ ಸಿಕ್ಕ ಅತ್ಯುತ್ತಮ ಕೊಡುಗೆ ಎಂದರೆ 'ಗರ್ಭಿಣಿ' ಯಾಗಿದ್ದು ಎಂದು ನಿಸ್ಸಂಕೋಚದಿಂದ ಶಕೀರಾ ಹೇಳಿಕೊಂಡಿದ್ದಾರೆ.
2011ರ ನವೆಂಬರ್ ತಿಂಗಳಲ್ಲಿ ಶಕೀರಾ ಭಾರತಕ್ಕೆ ಭೇಟಿ ನೀಡಿದ್ದರು. ಉದಯಪುರಕ್ಕೆ ಬಂದಿಳಿದ ಆಕೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಮಹಾಪೂರವೇ ಹರಿದುಬಂದಿತ್ತು. ಭಾರತದಲ್ಲೂ ಆಕೆಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆಂಬುದಕ್ಕೆ ಇದು ಸಾಕ್ಷಿಯಾಗಿತ್ತು. (ಏಜೆನ್ಸೀಸ್)


Click it and Unblock the Notifications












