Just In
Don't Miss!
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Sports
ನೇಥನ್ ಲಿಯಾನ್ಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ಅಜಿಂಕ್ಯ ರಹಾನೆ
- News
ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನನ್ನ ಸಿನಿಮಾ ಆಸ್ಕರ್ ಗೆ ಹೋಗಬಹುದು - ನವೀನ್ ಕೃಷ್ಣ
ಪ್ರತಿಭೆ, ಸ್ಟೈಲ್, ಮ್ಯಾನರಿಸಂ ಎಲ್ಲವೂ ಇದ್ದರೂ ನಟ ನವೀನ್ ಕೃಷ್ಣ 'ಸ್ಟಾರ್ ಸ್ಟೇಟಸ್' ಪಡೆದುಕೊಳ್ಳುವುದಕ್ಕೆ ಈಗಲೂ ಹರಸಾಹಸ ಪಡುತ್ತಿದ್ದಾರೆ. 'ಶ್ರೀರಸ್ತು ಶುಭಮಸ್ತು', 'ಧಿಮಾಕು', 'ನೆನಪಿರಲಿ', 'ಅಮೃತವಾಣಿ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ನವೀನ್ ಕೃಷ್ಣ ಗೆಲುವಿನ ನಗೆ ಬೀರಿದ್ದು ತೀರಾ ಕಮ್ಮಿ.
ಎರಡು ವರ್ಷಗಳ ಹಿಂದೆ ತೆರೆಕಂಡ 'ಪೇಪರ್ ದೋಣಿ' ಸಿನಿಮಾ ಆದ್ಮೇಲೆ 'ಹಗ್ಗದ ಕೊನೆ'ಯಂತಹ ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸಿರುವ ನವೀನ್, ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ಶುಕ್ರವಾರ (ಡಿಸೆಂಬರ್ 19) ರಂದು ಬಿಡುಗಡೆಯಾಗುತ್ತಿರುವ 'ಹಗ್ಗದ ಕೊನೆ' ಚಿತ್ರದ ಮೂಲಕ ತಮಗೆ ವಿಭಿನ್ನ ಇಮೇಜ್ ಸಿಗುವುದು ಖಚಿತ! ಅಂತ ಹೇಳುವ ನವೀನ್ ಕೃಷ್ಣ, ಚಿತ್ರಕ್ಕಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. [ಪೇಪರ್ ದೋಣಿಯಲ್ಲಿ ನವೀನ್ ಕೃಷ್ಣ ವಿಹಾರ ಶುರು]
ನಿನ್ನೆಯಷ್ಟೇ (ಡಿಸೆಂಬರ್ 16) 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿದ್ದ ನಟ ನವೀನ್ ಕೃಷ್ಣ, ತಮ್ಮ ವೃತ್ತಿಬದುಕಿನ ಏಳು-ಬೀಳುಗಳ ಬಗ್ಗೆ ಮತ್ತು 'ಹಗ್ಗದ ಕೊನೆ' ಚಿತ್ರದ ಕಥಾವಸ್ತು ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಉಮೇಶ್ ಬಣಕರ್ ಮತ್ತು ದಯಾಳ್ ನಿರ್ಮಾಣ ಮಾಡಿರುವ 'ಹಗ್ಗದ ಕೊನೆ' ಚಿತ್ರದ ಬಗ್ಗೆ ನವೀನ್ ಕೃಷ್ಣ ಹೇಳಿದ್ದೇನು? ತಮ್ಮ ಆಯ್ಕೆ ಕರೆಕ್ಟ್ ಆಗಿದ್ಯಾ ಅನ್ನುವ ಪ್ರಶ್ನೆಗಳಿಗೆ ನವೀನ್ ಕೃಷ್ಣ ಕೊಟ್ಟ ಉತ್ತರಗಳು ಇಲ್ಲಿವೆ... [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
* 'ಹಗ್ಗದ ಕೊನೆ' ಹೆಸರು ಕೇಳ್ತಿದ್ದ ಹಾಗೆ ಇದು ಕಲಾತ್ಮಕ ಚಿತ್ರ ಅನ್ನುವ ಇಮೇಜ್ ಮನಸ್ಸಲ್ಲಿ ಮೂಡುತ್ತೆ. 'ಹಗ್ಗದ ಕೊನೆ' ಚಿತ್ರದ ಕಥಾವಸ್ತು ಏನು?
- 'ಹಗ್ಗದ ಕೊನೆ' ಸಂಪೂರ್ಣ ಕಲಾತ್ಮಕ ಚಿತ್ರ ಅಂತ ಹೇಳುವುದು ಕಷ್ಟ. ಆದ್ರೆ, ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳೂ ಇಲ್ಲ. ಇದು ಒಂದು ರೀತಿಯ ಬ್ರಿಡ್ಜ್ ಸಿನಿಮಾ. ಇದರಲ್ಲಿ ಮರಣದಂಡನೆಗೆ ಒಳಗಾಗಿರುವ ಅಪರಾಧಿ. ಅವನ ಮನಸ್ಸಲ್ಲಿ ಮೂಡುವ ಪ್ರಶ್ನೆಗಳನ್ನ ಇಟ್ಟುಕೊಂಡು ಚಿತ್ರಕಥೆ ರಚಿಸಲಾಗಿದೆ. ಮರಣದಂಡನೆ ಅಂದ್ರೆ ಹ್ಯಾಂಗ್ ಟಿಲ್ ಡೆತ್. ಅದು ಒಂಥರಾ Organized Killing. ''ನಾನು ಮಾಡಿರುವ ಕೊಲೆಗೂ ನೀವು ಮಾಡುತ್ತಿರುವುದಕ್ಕೂ ವ್ಯತ್ಯಾಸವೇನು'', ಅಂತ ಪ್ರಶ್ನೆಗಳನ್ನು ಮಾಡುವ ಅಪರಾಧಿ 'ಚೆನ್ನ'. ಜೈಲಿನ ಅಧಿಕಾರಿ ಮತ್ತು ಅಪರಾಧಿ ನಡುವೆ ನಡೆಯುವ ವಾಗ್ವಾದವೇ ಚಿತ್ರದ ಕಥೆ.
* ಹಾಗಾದ್ರೆ, ಅಪರಾಧಿಗೆ ಮರಣದಂಡನೆ ಆಗುತ್ತಾ?
- ಸಿನಿಮಾದ ಆರಂಭದಲ್ಲೇ ಅಪರಾಧಿಗೆ ಮರಣದಂಡನೆ ವಿಧಿಸಲಾಗುತ್ತೆ. ಅವನಿಗೆ ಉಳಿದಿರುವುದು ಕೇವಲ ಒಂದುವರೆ ಗಂಟೆ ಮಾತ್ರ. ಆ ಒಂದುವರೆ ಗಂಟೆಯಲ್ಲಿ ಏನಾಗುತ್ತೆ ಅನ್ನುವುದೇ ಚಿತ್ರದ ಸ್ಟೋರಿ. ಅವನು ಕೇಳುವ ಪ್ರಶ್ನೆಗಳಿಂದ ಪ್ರೇಕ್ಷಕರಿಗೆ, ಅಪರಾಧಿಗೆ ಕ್ಷಮಾದಾನ ಸಿಗಬಹುದು ಅನ್ನುವ ಕುತೂಹಲ ಕೊನೆಯವರೆಗೂ ಕಾಡುತ್ತೆ. ಅಪರಾಧಿ ಸಾಯುತ್ತಾನಾ? ಇಲ್ಲವಾ? ಅನ್ನುವುದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.
* 'ಹಗ್ಗದ ಕೊನೆ' ಚಿತ್ರದಲ್ಲಿ ಅಪರಾಧಿ ಮಾಡಿರುವ ತಪ್ಪೇನು?
- ಅಪರಾಧಿ ಕೊಲೆ ಮಾಡಿ ಜೈಲಿನೊಳಗೆ ಬಂದಿರುತ್ತಾನೆ. ಅದಕ್ಕೆ ಶಿಕ್ಷೆ ಸ್ವೀಕರಿಸುವುದಕ್ಕೂ ತಯಾರಾಗಿರುತ್ತಾನೆ. ಆದ್ರೆ, 'ಮರಣದಂಡನೆ' ವಿರುದ್ಧ ನ್ಯಾಯಾಂಗ ವ್ಯವಸ್ಥೆಗೆ ಪ್ರಶ್ನೆ ಮಾಡುತ್ತಾನೆ ಅಪರಾಧಿ 'ಚೆನ್ನ'.
* ಇಂದಿನ ಪರಿಸ್ಥಿಯಲ್ಲಿ 'ಮರಣದಂಡನೆ' ಶಿಕ್ಷೆ ವಿಧಿಸಲೇ ಬಾರದು ಅನ್ನುವ ಮಟ್ಟಕ್ಕೆ ಬಂದಿದೆ. 'ಮಾನವೀಯ ಹಕ್ಕು'ಗಳ ಪ್ರಕಾರ 'ಮರಣದಂಡನೆ' ಬ್ಯಾನ್ ಮಾಡಬೇಕು ಅಂತ ಕೆಲವರು ವಾದಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ 'ಹಗ್ಗದ ಕೊನೆ' ಎಷ್ಟು ಪ್ರಸ್ತುತ?
- 1963 ಯಲ್ಲಿ ನಡೆದ ಘಟನೆ ಚಿತ್ರದಲ್ಲಿದೆ. ಇವತ್ತಿನ ದಿನ ಮರಣದಂಡನೆ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ ಅನ್ನುವುದರ ಬಗ್ಗೆ ಚಿತ್ರದಲ್ಲಿಲ್ಲ. ಸಿನಿಮಾದಲ್ಲಿ ಮರಣದಂಡನೆ ಕೊಡಬೇಕೋ, ಬೇಡವೋ ಅನ್ನುವ ಬಗ್ಗೆ ನಾವು ನಿರ್ಧಾರ ಮಾಡಿ ಹೇಳುತ್ತಿಲ್ಲ. ಅಪರಾಧಿಯ ದೃಷ್ಟಿಕೋನದಿಂದ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದೀವಿ ಅಷ್ಟೆ. ಅಪರಾಧಿ ತಪ್ಪು ಮಾಡಿದ್ದಾನೆ ನಿಜ. ಆದ್ರೆ ಬೇರೆ ಶಿಕ್ಷೆ ಕೊಡಬಹುದಲ್ಲಾ? ಕೊಲೆಗೆ ಕೊಲೆ ಶಿಕ್ಷೆ ಅಲ್ಲ ಅನ್ನುವ ವಾದ ಚಿತ್ರದಲ್ಲಿದೆ.
* ಕಮರ್ಶಿಯಲ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ನವೀನ್ ಕೃಷ್ಣಗೆ 'ಹಗ್ಗದ ಕೊನೆ'ಯಂತಹ ಚಿತ್ರಗಳು ಪ್ರಯೋಗಾತ್ಮಕ ಅಥವಾ ರಿಸ್ಕ್ ಅಂತ ಅನಿಸಲಿಲ್ವಾ?
- ಇಲ್ಲ! ನನಗೆ ಆ ತರ ಇಮೇಜ್ ಇಲ್ಲ. ಹೀಗಾಗಿ ಅಷ್ಟು ತೊಂದರೆ ಆಗಿಲ್ಲ. ನನಗೆ ಸ್ಟಾರ್ ಇಮೇಜ್ ಇತ್ತು ಅನ್ನುವ ಹಾಗಿದ್ದಿದ್ದರೇ, ಇದು ಕಂಪ್ಲೀಟ್ ಎಕ್ಸ್ ಪೆರಿಮೆಂಟ್ ಆಗಿರುತ್ತಿತ್ತು. ಆದ್ರೆ, ಇದು ಪ್ರಯೋಗ ಅಥವಾ ರಿಸ್ಕ್ ಅನ್ನುವುದಕ್ಕಿಂತ ನನ್ನ ಕೆರಿಯರ್ ಗೆ ಬೇರೆಯದ್ದೇ ಮೈಲೇಜ್ ಕೊಡುವ ಸಿನಿಮಾ. ಇದರಿಂದ ನನಗೆ 'ನ್ಯಾಷಿನಲ್ ಅವಾರ್ಡ್' ಬರಬಹುದು. 'ಆಸ್ಕರ್'ಗೂ ಹೋಗಬಹುದು. ಚಿತ್ರದಲ್ಲಿರುವ ಕಂಟೆಂಟ್ ಹಾಗಿದೆ. ಹೀಗಾಗಿ ನಾವು ಪ್ರಶಸ್ತಿಗಳನ್ನು ನಿರೀಕ್ಷೆ ಮಾಡುತ್ತಿದ್ದೀವಿ. ಈಗಾಗಲೇ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಚಲನಚಿತ್ರೋತ್ಸವಕ್ಕೆ ಚಿತ್ರ ಸೆಲೆಕ್ಟ್ ಆಗಿದೆ. ಜನವರಿಯಲ್ಲಿ ಬರ್ಲಿನ್, ಕೇನ್ಸ್ ಫಿಲ್ಮ್ ಫೆಸ್ಟಿವಲ್ ಗೆ ಚಿತ್ರ ಸೆಲೆಕ್ಟ್ ಆಗುವ ಸಾಧ್ಯತೆ ಇದೆ. ಹ್ಯೂಮನ್ ರೈಟ್ಸ್ ಕುರಿತಾದ ಚಿತ್ರಗಳಿಗೆ ಅನೇಕ ಚಲನಚಿತ್ರೋತ್ಸವಗಳು ಇವೆ. ಅದರಲ್ಲೂ ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ, ಹಂಡ್ರೆಡ್ ಪರ್ಸೆಂಟ್ ವಿಶ್ವದಾದ್ಯಂತ ಸಿನಿಮಾ ಸದ್ದು ಮಾಡಲಿದೆ. ನನಗೆ ಬೇರೆ ಇಮೇಜ್ ಸಿಗುವುದು ಗ್ಯಾರೆಂಟಿ.
* ಹಾಗಾದ್ರೆ 'ಪ್ರಶಸ್ತಿ'ಯ ಉದ್ದೇಶವನ್ನಿಟ್ಟುಕೊಂಡೇ 'ಹಗ್ಗದ ಕೊನೆ' ರೆಡಿಮಾಡಿದ್ದೀರಾ?
- ಇಲ್ಲ. ಅವಾರ್ಡ್ ನಿರೀಕ್ಷೆ ಮಾಡ್ತಿದ್ದೀವಿ ನಿಜ. ಆದ್ರೆ ಸಿನಿಮಾ ಸ್ಟಾರ್ಟ್ ಆಗಿದ್ದೇ ವಿಚಿತ್ರ. ನಾನು ಮತ್ತು ನಿರ್ದೇಶಕ ದಯಾಳ್ ಒಟ್ಟಿಗೆ ಕೂತಿದ್ದು ಬೇರೆ ಯಾವುದೋ ಸಿನಿಮಾ ಮಾಡುವುದಕ್ಕೆ. ನಾವಿಬ್ಬರೂ 'ಯೋಗರಾಜ್' ಅಂತ ಸಿನಿಮಾ ಮಾಡಿದ್ವಿ. ಅದು ತುಂಬಾ ಡಿಫರೆಂಟ್ ಸ್ಟೋರಿ. ಪ್ರೇಕ್ಷಕರಿಗದು ರೀಚ್ ಆಗ್ಲಿಲ್ಲ. ಆ ನೋವು ಇಬ್ಬರಲ್ಲೂ ಇತ್ತು. ಅದಕ್ಕೆ 'ಒನ್ ಮ್ಯಾನ್ ಶೋ' ತರ ಏನಾದರೂ ಮಾಡ್ಬೇಕು ಅಂತ ನಿರ್ಧರಿಸುತ್ತಿದ್ದಾಗ ಈ ಕಾನ್ಸೆಪ್ಟ್ ಹೊಳೀತು. ಬಂಡವಾಳ ಹಾಕುವುದಕ್ಕೆ ಉಮೇಶ್ ಬಣಕರ್ ಮತ್ತು ದಯಾಳ್ ರೆಡಿಯಿದ್ದರು. ಹೀಗಾಗಿ ಸಿನಿಮಾ ಆಯ್ತು.[ಯೋಗರಾಜ್...ಬಟ್ ಒಂದ್ ಕಿತ ಹೋಗಿ ನೋಡಿ]
* 'ಹಗ್ಗದ ಕೊನೆ'ಯೇ ಯಾಕೆ?
- ಪರ್ವತವಾಣಿ ಫೇಮಸ್ ಆಗಿದ್ದೇ ಈ ನಾಟಕದಿಂದ. ನಾನು ಹತ್ತನೇ ತರಗತಿ ಓದುವಾಗ ಈ ಡ್ರಾಮಾ ಮಾಡಿದ್ದೆ. 'ಚೆನ್ನ' ಪಾತ್ರವನ್ನು ಅಂದೇ ನಿರ್ವಹಿಸಿದ್ದೆ. ಆದ್ರೆ, ಅದೇ ಸಿನಿಮಾ ಮಾಡ್ತೀನಿ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಈಗ ದಯಾಳ್ ಮೂಲಕ ಅದು ಸಾಧ್ಯವಾಯ್ತು. ಈ ಸಿನಿಮಾ ಕೂಡ 'ಒನ್ ಮ್ಯಾನ್ ಶೋ' ಆಗಿರುವ ಕಾರಣ ಇದನ್ನೇ ಮೊದಲು ಸೆಲೆಕ್ಟ್ ಮಾಡಿದ್ಚಿ.
* ನಿರ್ಮಾಪಕರಿಂದ ದೃಷ್ಟಿಯಿಂದ ಹೇಳುವುದಾದರೆ, ಇಂತ ಸಿನಿಮಾಗಳು ಕಲೆಕ್ಷನ್ ಮಾಡೋದು ತೀರಾ ಕಡಿಮೆ. ಅಂತದ್ರಲ್ಲಿ ನೀವು ಸಿಂಗಲ್ ಸ್ಕ್ರೀನ್ ಥಿಯೇಟರ್ ಬಿಟ್ಟು, ಬರೀ ಮಲ್ಟಿಪ್ಲೆಕ್ಸ್ ನಲ್ಲಿ ಮಾತ್ರ ರಿಲೀಸ್ ಮಾಡಿತ್ತಿದ್ದೀರಾ? ಇದ್ರಿಂದ ನಷ್ಟ ಆಗುವುದಿಲ್ಲವೇ?
- ಕಲೆಕ್ಷನ್ ದೃಷ್ಟಿಯಿಂದ ಸಿನಿಮಾ ಮಾಡಿಲ್ಲ ನಾವು. ನಮಗೂ ಗೊತ್ತು ಈ ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಗುವುದಿಲ್ಲ ಅಂತ. ಆದ್ರೆ, ತುಂಬಾ ಸೆನ್ಸಿಟೀವ್ ಸಿನಿಮಾ ಇದು. ಇದನ್ನ ಯಾರು ನೋಡಬೇಕು ಅಂತ ಬಯಸುತ್ತಾರೋ, ಅವರಿಗೆ ರೀಚ್ ಆಗಲಿ ಅಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ರಿಲೀಸ್ ಮಾಡುತ್ತಿದ್ದೀವಿ. ಈ ಸಿನಿಮಾನ ಮಾಸ್ ಆಡಿಯನ್ಸ್ ಗಿಂತ ಕ್ಲಾಸ್ ಆಡಿಯನ್ಸ್ ನ ಸೆಳೆಯೋದು ಜಾಸ್ತಿ. ಹೀಗಾಗಿ ಮಲ್ಟಿಪ್ಲೆಕ್ಸ್ ಗಳನ್ನೇ ಆಯ್ಕೆ ಮಾಡಿಕೊಂಡಿದ್ದೀವಿ.
* ಹಾಗಾದ್ರೆ ಚಿತ್ರದ ಬಜೆಟ್ ಎಷ್ಟು?
- ತುಂಬಾ ಕಮ್ಮಿ. 35 ರಿಂದ 40 ಲಕ್ಷ ಅಷ್ಟೆ. ಲೋಕೇಷನ್ಸ್ ಎರಡೇ. ಸೆಂಟರ್ ಜೈಲಿನಲ್ಲೇ ಬಹುತೇಕ ಚಿತ್ರೀಕರಣವಾಗಿದೆ.
* ನಿಮ್ಮ ಚಿತ್ರಕ್ಕೂ ಗಾಂಧಿನಗರದ ಥಿಯೇಟರ್ ಸಮಸ್ಯೆ ಎದುರಾಗಿದ್ಯಾ?
- ಇಲ್ಲ. ದಯಾಳ್ ಮತ್ತು ನಾನು ಡಿಸೈಡ್ ಮಾಡಿ ಮಲ್ಟಿಪ್ಲೆಕ್ಸ್ ನಲ್ಲಿ ಮಾತ್ರ ರಿಲೀಸ್ ಮಾಡ್ತಿದ್ದೀವಿ. ಈ ಸಿನಿಮಾ ಬಿಗ್ ಸ್ಕ್ರೀನ್ ನಲ್ಲಿ ನೋಡಿದ್ರೆ ಬೋರಾಗುತ್ತೆ, ಇಡೀ ಸಿನಿಮಾ ಒಂದೇ ಜಾಗದಲ್ಲಿ ನಡೆಯುವುದರಿಂದ ಶಿಳ್ಳೆ ಹೊಡೆಯೋ ಮಾಸ್ ಪ್ರೇಕ್ಷಕರಿಗೆ ಬೇಜಾರಾಗುತ್ತೆ. ಅದಕ್ಕೆ ಕ್ಲಾಸ್ ಆಡಿಯನ್ಸ್ ನ ಮೆಚ್ಚಿಸುವುದಕ್ಕೆ 'ವೀರೇಶ್ ಚಿತ್ರಮಂದಿರ' ಒಂದನ್ನು ಹೊರತುಪಡಿಸಿ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದೀವಿ.
* ಹಾಗಾದ್ರೆ ನಿಮ್ಮ ಚಿತ್ರದ ಸಂದೇಶ ಸಾಮಾನ್ಯ ಜನರಿಗೆ ತಲುಪುದು ಹೇಗೆ?
- ಸಾಮಾನ್ಯ ಜನರು ಮತ್ತು ಮಾಸ್ ಪ್ರೇಕ್ಷಕರು ಇಷ್ಟ ಪಡುವ ಅಂಶಗಳು ಚಿತ್ರದಲ್ಲಿಲ್ಲ. ಆದ್ರೆ ಚಿತ್ರವನ್ನು ನೋಡಿದ್ರೆ ಎಲ್ಲರಿಗೂ ಖಂಡಿತ ಇಷ್ಟವಾಗುತ್ತೆ. ಎಲ್ಲರಿಗೂ ರೀಚ್ ಆಗಬೇಕು ಅಂತ ನಾವು ಪ್ರಯತ್ನ ಪಡುತ್ತಿದ್ದೀವಿ. ಇದು ಕಲಾತ್ಮಕ ಸಿನಿಮಾ ಅಲ್ಲ. ಕಮರ್ಶಿಯಲ್ ಮತ್ತು ಆರ್ಟ್ ಸಿನಿಮಾಗಳ ಮಧ್ಯೆ ಇರುವ ಬ್ರಿಡ್ಜ್ ಆಗಿರುವುದರಿಂದ ಎಲ್ಲರೂ ಇಷ್ಟಪಡುತ್ತಾರೆ ಅಂದುಕೊಂಡಿದ್ದೀವಿ.
* ಸಿನಿಮಾದಲ್ಲಿರುವ ಸಂದೇಶ ಏನು? ಸಿನಿಮಾದಿಂದ ಪ್ರೇಕ್ಷಕರು ಕಲಿಬೇಕಾಗಿರುವುದೇನು?
- ಅಪರಾಧಿಯ ದೃಷ್ಟಿಕೋನದಿಂದ ಒಂದು ಸಂದೇಶ ಕೊಡುತ್ತಿದ್ದೀವಿ. ಅದು ಒಳ್ಳೆಯದ್ದೋ, ಕೆಟ್ಟದ್ದೋ ಗೊತ್ತಿಲ್ಲ. ಆದ್ರೆ ಮರಣದಂಡನೆ ಶಿಕ್ಷೆಯ ಬಗ್ಗೆ ಎಲ್ಲರೂ ಒಮ್ಮೆ ಯೋಚಿಸುವ ಹಾಗೆ ಸಿನಿಮಾ ಮಾಡುತ್ತದೆ. ಈ ಚಿತ್ರ ಎಲ್ಲರಿಗೂ ಕಾಡುವುದು ಖಂಡಿತ.
* ನ್ಯಾಯಾಂಗ ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದೀರಾ ಅಂದ್ರೆ, ತುಂಬಾ ರಿಸರ್ಚ್ ಮಾಡಿರಬೇಕು ನೀವು?
- ಅಷ್ಟೊಂದು ಮಾಡಿಲ್ಲ. ಸಾಮಾನ್ಯ ಅಪರಾಧಿ. ಅವನ ತಿಳುವಳಿಕೆ. ಅವನ ದೃಷ್ಟಿಕೋನದಲ್ಲಿ ಮೂಡುವ ಪ್ರಶ್ನೆಗಳಿವೆ ಅಷ್ಟೆ. ಅಪರಾಧಿಯೊಬ್ಬ ಕಳ್ಳ. ಅಲ್ಪ-ಸ್ವಲ್ಪ ಓದಿರುತ್ತಾನೆ ಅಷ್ಟೆ. ಅವನಿಗೆ ಗೊತ್ತಿರುವಂತೆ ಪ್ರಶ್ನೆಗಳನ್ನು ಕೇಳುತ್ತಾನೆ. ಕಾನೂನು, ನ್ಯಾಯಾಂಗದ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಜನಸಾಮಾನ್ಯನಾಗಿ ನಾನು ಸಂಭಾಷನೆ ಬರೆದಿದ್ದೀನಿ.
* ನಿಮ್ಮ ಬೆತ್ತಲೆ ಅವತಾರ ವಿವಾದ ಎಬ್ಬಿಸಿತ್ತು. ಪಿ.ಕೆ. ಆಮೀರ್ ಖಾನ್ ವರೆಗೂ ನಿಮ್ಮನ್ನ ಹೋಲಿಸಿ ಜನ ಮಾತನಾಡಿದ್ದರು. ಬೆತ್ತಲೆ ಅವತಾರ ಚಿತ್ರದಲ್ಲಿ ಅವಶ್ಯಕತೆ ಇತ್ತಾ?
- ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಅಪರಾಧಿಗೆ ಎಂಟು ದಿನದ ಮುಂಚೆ ಒಂದು ನೋಟಿಸ್ ಕಳುಹಿಸಿರುತ್ತಾರೆ. ಎಂಟನೇ ದಿನದಿಂದ ಕೊನೆಯ ದಿನದವರೆಗೂ ಅಪರಾಧಿಯ ಸೆಲ್, ನೇಣು ಹಾಕುವ ಜಾಗಕ್ಕೆ ಹತ್ತಿರವಾಗುತ್ತಿರುತ್ತದೆ. ಕೊನೆಯ ದಿನ ನೇಣಿನ ಕುಣಿಕೆಯ ಪಕ್ಕದ ಸೆಲ್ ನಲ್ಲಿ ಖೈದಿ ಇರುತ್ತಾನೆ. ಅಂಥ ಸೆಲ್ ನಲ್ಲಿ ಅಪರಾಧಿ, ಅಲ್ಲೇ ಸ್ನಾನ ಮಾಡಬೇಕಾಗಿರುತ್ತದೆ. ಶಿಕ್ಷೆಗೆ ಒಳಪಡುವುದಕ್ಕೂ ಮುನ್ನ ಅಪರಾಧಿ ಸ್ನಾನ ಮಾಡ್ಬೇಕು. ಅದನ್ನ ನಾವು ಬ್ಯಾಕ್ ಶಾಟ್ ನಲ್ಲಿ ತೋರಿಸಿದ್ದೀವಿ ಅಷ್ಟೆ. 'ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ' ಅನ್ನುವ ಹಾಗೆ, ಹೇಗಿದ್ದರೂ ಸಾಯುತ್ತಿದ್ದೀನಿ ಇನ್ನೂ ಬಟ್ಟೆಯಾಕೆ ಅಂತ ಅಪರಾಧಿ ಹೇಳುತ್ತಾನೆ. ಆ ಸನ್ನಿವೇಶದಲ್ಲಿ ಅದು ಹಾಗಿದೆ ಹೊರತು ಪಬ್ಲಿಸಿಟಿಗಾಗಿ ಮಾಡಿದ್ದಲ್ಲ. [ಹಣಕಾಸು ಮುಗ್ಗಟ್ಟಿನಲ್ಲಿ ನವೀನ್ ಕೃಷ್ಣ ಚಿತ್ರ]
* ನಿಮ್ಮ ತಂದೆ ಜೊತೆ ತುಂಬಾ ಸಿನಿಮಾಗಳನ್ನು ಮಾಡಿದ್ದೀರಾ. ಆದರೆ 'ಹಗ್ಗದ ಕೊನೆ' ಚಿತ್ರದಲ್ಲಿ ಹ್ಯಾಂಗ್ ಮ್ಯಾನ್ ಪಾತ್ರಧಾರಿಯಾಗಿ ನಿಮ್ಮ ತಂದೆ ನಟಿಸಿದ್ದಾರೆ. ತುಂಬಾ ಫೀಲ್ ಆಗ್ಲಿಲ್ವಾ?
- ಇಲ್ಲ! ಮೊದಲ ಸಿನಿಮಾದಲ್ಲಿ ನಾನು, ನನ್ನ ತಂದೆ ಅಣ್ಣ-ತಮ್ಮ ಆಗಿ ಆಕ್ಟ್ ಮಾಡಿದ್ವಿ. ನಮ್ಮಿಬ್ಬರಿಗೂ ಅಪ್ಪ-ಮಗ ಅನ್ನುವುದು ಮನೆಯಲ್ಲಿ ಮಾತ್ರ. ಹೊರಗಡೆ ಬಂದಾಗ ಇಬ್ಬರೂ ನಟರೇ. ಪಾತ್ರದಲ್ಲಿ ಅವರು ನನ್ನನ್ನ ಮಗ ಅನ್ನುವುದನ್ನು ಮರೆತುಬಿಡುತ್ತಾರೆ. ನಾನೂ ಅಷ್ಟೆ. ಇಬ್ಬರು ಪಾತ್ರದಲ್ಲಿ ಇನ್ವಾಲ್ವ್ ಆಗಿರುತ್ತೀವಿ. ಆದ್ರೆ ಈ ಚಿತ್ರದಲ್ಲಿ ಅವರು ನನಗೆ ಹ್ಯಾಂಗ್ ಮ್ಯಾನ್ ಆಗಿದ್ದರೂ ಶೂಟ್ ಮಾಡುವಾಗ ಏನೂ ಅನಿಸಲಿಲ್ಲ. ಸಿನಿಮಾ ನೋಡಿದ್ಮೇಲೆ, ''ನನ್ನ ಮಗನಿಗೆ ಹೀಗೆ ಮಾಡಿದ್ನಲ್ಲಾ'', ಅಂತ ಅಪ್ಪ ತುಂಬಾ ಫೀಲ್ ಮಾಡಿಕೊಂಡರು.
* ಕನ್ನಡ ಚಿತ್ರರಂಗದಲ್ಲಿ ಪ್ರಶಸ್ತಿ ಪುರಸ್ಕೃತ ಅನೇಕ ಚಿತ್ರ ನಿರ್ದೇಶಕರಿದ್ದಾರೆ. ಅವರಿಂದ ಸಿನಿಮಾ ನಿರ್ದೇಶನ ಮಾಡಿಸಬೇಕು ಅಂತ ಅಂದುಕೊಂಡಿದ್ರಾ?
- ಇಲ್ಲ. ನನಗೆ ಮತ್ತು ದಯಾಳ್ ಗೆ ಕೆಪಾಸಿಟಿ ಇತ್ತು. ಹೀಗಾಗಿ ನಾವೇ ಮುನ್ನುಗ್ಗಿ ಮಾಡಿದ್ದೀವಿ.
* ಇವತ್ತಿನ ಕಾಲಕ್ಕೆ ಸಿನಿಮಾ ಪ್ರಸ್ತುತ ಅಂತ ಹೇಳಿದ್ರಿ. ರೇಪಿಸ್ಟ್ ಗಳಿಗೆ ಮರಣದಂಡನೆ ವಿಧಿಸಬೇಕು ಅನ್ನುವ ಕೂಗು ವ್ಯಾಪಕವಾಗುತ್ತಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
- ಈ ಸಿನಿಮಾದಲ್ಲಿ ಫ್ಲ್ಯಾಶ್ ಬ್ಯಾಕ್ ಎಪಿಸೋಡ್ ಒಂದಿದೆ. ಅದು ಹಂಡ್ರೆಡ್ ಪರ್ಸೆಂಟ್ ಇವತ್ತಿನ ಕಥೆ. ಚಿಕ್ಕಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಸನ್ನಿವೇಶವಿದೆ. ಅದು 'ಹಗ್ಗದ ಕೊನೆ' ಕಿರುನಾಟಕದಲ್ಲಿಲ್ಲ. ಅಪರಾಧಿ ಕೊಲೆ ಮಾಡುವುದೇ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ. ಈ ಸನ್ನಿವೇಶ ತುಂಬಾ ಪರಿಣಾಮಕಾರಿಯಾಗಿದೆ.
* ರೇಪಿಸ್ಟ್ ಗಳಿಗೆ ನಿಮ್ಮ ಪ್ರಕಾರ ಮರಣದಂಡನೆ ಕೊಡಬೇಕಾ? ಬೇಡವಾ?
- ಮರಣದಂಡನೆ ಕೊಡಬಾರದು. ಅವರನ್ನ ಕೆಲಸಕ್ಕೆ ಬಾರದ ಹಾಗೆ ಮಾಡಿ ಜೀವಂತ ಇಡಬೇಕು. ಅವರನ್ನ ಕಂಬಕ್ಕೆ ಕಟ್ಟಿಹಾಕಿ ಅಂಥವರಿಗೆ ಒಂದು ಮ್ಯೂಸಿಯಂ ಕಟ್ಟಬೇಕು. ಹೋಗಿಬರುವವರು ಅವನನ್ನು ಗುರುತಿಸಿ ಛೀ..ಥು...ಅಂತ ಉಗಿಯಬೇಕು. ಅವರು ಬದುಕಿದ್ದರೂ ಸತ್ತಂತೆ ಆಗಬೇಕು. ಬಟ್, ಇದೆಲ್ಲಾ ತುಂಬಾ ಕಷ್ಟ ಅನ್ಸುತ್ತೆ.
* ನಿಮ್ಮ ಮುಂದಿನ ಪ್ರಾಜೆಕ್ಟ್ ಗಳು?
- ವಂಶೋದ್ಧಾರಕ, ಸಿದ್ದಪ್ಪಾಜಿ ಅನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀನಿ. ಸಂಭಾಷಣೆ ಬರೆಯುವುದರಲ್ಲಿ ತುಂಬಾ ಬಿಜಿಯಿದ್ದೀನಿ. ವಿಜಯ್ ರಾಘವೇಂದ್ರ ನಿರ್ದೇಶನದ ಕಿಸ್ಮತ್, ಯುಗಪುರುಷ, ಕಿಟ್ಟಿ ಅಭಿನಯದ ಸಿನಿಮಾವೊಂದಕ್ಕೆ ಸಂಭಾಷಣೆ ಬರೆಯುತ್ತಿದ್ದೀನಿ.
* ನಿಮ್ಮ ಮೊದಲ ಇಮೇಜ್, ನಿಮಗೆ ಮೇನ್ಟೇನ್ ಮಾಡುವುದಕ್ಕೆ ಕಷ್ಟವಾಯ್ತಾ, ಆಯ್ಕೆಗಳಲ್ಲಿ ಎಡವಿದ್ದೀನಿ ಅಂತ ನಿಮಗೆ ಅನ್ನಿಸ್ತಿಲ್ವಾ?
- 'ಶ್ರೀರಸ್ತು ಶುಭಮಸ್ತು' ಚಿತ್ರದ ಮೂಲಕ ನನ್ನ ಎಂಟ್ರಿ ರಾಂಗ್ ಆಯ್ತು ಅನ್ಸುತ್ತೆ. ಓಪನ್ನಿಂಗ್ ದೊಡ್ಡ ಹೀರೋ ತರಹ ಲಾಂಚ್ ಆಗಿದ್ರೆ, ಚೆನ್ನಾಗಿರುತ್ತಿತ್ತು ಅಂತ ಎಲ್ಲರೂ ಹೇಳುತ್ತಾರೆ. 'ಧಿಮಾಕು' ಸಿನಿಮಾ ನಾವೇ ಮಾಡಿದ್ವಿ. ಅದು ಕಮರ್ಶಿಯಲ್ಲಾಗಿ ಸಕ್ಸಸ್ ಆಗ್ಲಿಲ್ಲ. ಆದರೂ ಜನ ನನ್ನನ್ನ ಈಗಲೂ 'ಧಿಮಾಕು' ಚಿತ್ರದ ಮೂಲಕವೇ ಗುರುತಿಸುತ್ತಾರೆ. ನಂತ್ರ ನನ್ನ ಪರ್ಸನಲ್ ಕಮ್ಮಿಟ್ಮೆಂಟ್ ನಿಂದ, ಬಂದ ಬಂದ ಚಿತ್ರಗಳನ್ನೆಲ್ಲಾ ಒಪ್ಪಿಕೊಂಡು ಬಿಟ್ಟೆ. ಅದು ಹಾಗೇ ಮುಂದುವರಿಯಿತು. ಈಗ 'ಹಗ್ಗದ ಕೊನೆ' ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೀನಿ. ಇದರಿಂದ ಬೇರೆ ಇಮೇಜ್ ಸಿಗುತ್ತಾ ನೋಡೋಣ.