twitter
    For Quick Alerts
    ALLOW NOTIFICATIONS  
    For Daily Alerts

    ನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನ

    |

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿನ್ನೆ(ಆಗಸ್ಟ್ 11) ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಾಡುಗಳನ್ನೇ ಉಸಿರಾಗಿಸಿಕೊಂಡಿದ್ದ ಸುಬ್ಬಣ್ಣ ಇನ್ನು ನೆನಪು ಮಾತ್ರ. ಕನ್ನಡ ಸುಗಮ ಸಂಗೀತ ಲೋಕಕ್ಕೆ ಇವರ ಕೊಡುಗೆ ಅಪಾರ.

    ಒಂದ್ಕಾಲದಲ್ಲಿ ಸುಬ್ಬಣ್ಣ ಆಕಾಶವಾಣಿಯಲ್ಲಿ ಹಾಡಲು ಶುರು ಮಾಡಿದರೆ ಕೇಳುಗರು ಮೈಮರೆಯುತ್ತಿದ್ದರು. 'ಕಾಡು ಕುದುರೆ ಓಡಿ ಬಂದಿತ್ತಾ' ಹಾಡಿಗೆ 1979ರಲ್ಲಿ ರಾಷ್ಟ್ರಪ್ರಶಸ್ತಿ ಗೌರವವೂ ಅವರಿಗೆ ದೊರೆತಿತ್ತು. ಇದು ಹಿನ್ನಲೆ ಗಾಯನಕ್ಕಾಗಿ ಕನ್ನಡಕ್ಕೆ ಸಿಕ್ಕ ಮೊದಲ ರಾಷ್ಟ್ರಪ್ರಶಸ್ತಿ. ಸುಬ್ಬಣ್ಣನವರ ತಾತ ಮೀಸೆ ಶಾಮಣ್ಣನವರು ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದರು. ಹಾಗಾಗಿ ಗಾಯನ ರಕ್ತಗತವಾಗಿಯೇ ಬಂದಿತ್ತು. ತಾತನ ಬಳಿಯೇ ಪ್ರಾಥಮಿಕ ಸಂಗೀತ ಅಭ್ಯಾಸ ಮುಗಿಸಿದ್ದರು.

    ಶಿವಮೊಗ್ಗ ಸುಬ್ಬಣ್ಣ ರಾಷ್ಟ್ರಕವಿ ಕುವೆಂಪುರವರ ನೆಚ್ಚಿನ ಗಾಯಕರಾಗಿದ್ದರು. ತಮ್ಮ ನೇರ ನಡೆ ನುಡಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಸುಬ್ಬಣ್ಣ ಬಹಳ ಜೋರು ಮತ್ತು ಗಡಸು ಮಾತಿನವರು. ಯಾರು ಅವರ ಎದುರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆತ್ಮೀಯ ಸ್ನೇಹಿತೆ ಗಾಯಕಿ ಬಿ. ಕೆ ಸುಮಿತ್ರಾ ಮಾತಿಗೆ ಸುಮ್ಮನಾಗುತ್ತಿದ್ದರು. ಶಿವಮೊಗ್ಗ ಸುಬ್ಬಣ್ಣನವರ ಜೊತೆಗಿನ ಸ್ನೇಹ, ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ದಿನಗಳನ್ನು ಗಾಯಕಿ ಬಿ. ಕೆ ಸುಮಿತ್ರಾ ಫಿಲ್ಮಿ ಬೀಟ್‌ ಜೊತೆ ಹಂಚಿಕೊಂಡಿದ್ದಾರೆ.

     ಸುಬ್ಬಣ್ಣ ಜೊತೆಗಿನ ನಿಮ್ಮ ಒಡನಾಟ ಎಂಥದ್ದು?

    ಸುಬ್ಬಣ್ಣ ಜೊತೆಗಿನ ನಿಮ್ಮ ಒಡನಾಟ ಎಂಥದ್ದು?

    "ಸುಬ್ಬಣ್ಣ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ದೊಡ್ಡವರು. 10ನೇ ವಯಸ್ಸಿನಿಂದಲೇ ಶಿವಮೊಗ್ಗದಲ್ಲಿ ಇಬ್ಬರು ಆಡಿಕೊಂಡು ಬೆಳೆದವರು. ಚಡ್ಡಿ ದೋಸ್ತ್ ಅಂತರಲ್ಲ ಆ ತರ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದವರು. ನನಗಿಂತ ಎರಡು ವರ್ಷ ಸೀನಿಯರ್. ಒಬ್ಬರೇ ಗುರುಗಳು ಎಂ. ಪ್ರಭಾಕರ್‌ ಅವರ ಬಳಿ ಇಬ್ಬರು ಸಂಗೀತ ಕಲಿತಿದ್ದು. ಅವರ ತಾತ ಮೀಸೆ ಶಾಮಣ್ಣ ಹಾಗೂ ನಮ್ಮ ತಂದೆ ಆಪ್ತ ಮಿತ್ರರಾಗಿದ್ದರು. ಹಾಗಾಗಿ ಚಿಕ್ಕಂದಿನಿಂದ ನಾವು ಒಟ್ಟಿಗೆ ಬೆಳೆದದ್ದು. ಮದ್ರಾಸಿಗೆ ಬಂದ ಮೇಲೆ ಆಗಾಗ ಭೇಟಿ ಮಾಡುತ್ತಿದ್ದೆವು. ಅವರ ಜೊತೆ ತುಂಬಾ ಸಲುಗೆ ಇತ್ತು. ಅವರದ್ದು ಸ್ವಲ್ಪ ಜೋರು.. ಗಡಸು ಮಾತು. ಸುತ್ತ ಇದ್ದವರು ಹೇಳುತ್ತಿದ್ದರು ಅಮ್ಮ ನೀವು ಜೋರಾಗಿ ಮಾತನಾಡುತ್ತೀರಾ, ಅವರ ಮಾತನ್ನು ನಿಲ್ಲಿಸಿಬಿಡುತ್ತೀರಾ, ಇನ್ಯಾರ ಮಾತಿಗೂ ಸುಮ್ಮನಾಗುತ್ತಿರಲಿಲ್ಲ ಎಂದು ತಮಾಷೆ ಮಾಡುತ್ತಿದ್ದರು. ಅವರಿಗೆ ಕೋಪ ಜಾಸ್ತಿ, ನೇರವಾಗಿ ಮಾತನಾಡಿಬಿಡುತ್ತಿದ್ದರು. ಮನಸ್ಸಿನಲ್ಲಿ ಏನು ಇರುತ್ತಿರಲಿಲ್ಲ. ಮೊದಲು ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗಾಯಕ. ಇದು ಕನ್ನಡನಾಡಿಗೆ ಹೆಮ್ಮೆಯ ವಿಚಾರ. ಬಹಳ ಆತ್ಮೀಯರು. ಆಗಾಗ ಫೋನ್ ಮಾಡುತ್ತಿದ್ದೆ. ಮನೆಗೆ ಹೋಗು ಬರುತ್ತಿದ್ದೆ. ನಮ್ಮ ಮನೆಗೂ ಬರುತ್ತಿದ್ದರು. ಹೀಗೆ ಬಹಳ ಹತ್ತಿರದ ಬಾಂಧವ್ಯ".

     ಒಟ್ಟಗೆ ಕಾರ್ಯಕ್ರಮ ಕೊಟ್ಟ ದಿನಗಳು ಹೇಗಿತ್ತು?

    ಒಟ್ಟಗೆ ಕಾರ್ಯಕ್ರಮ ಕೊಟ್ಟ ದಿನಗಳು ಹೇಗಿತ್ತು?

    "ಒಟ್ಟಿಗೆ ನಾವು ಆಕಾಶವಾಣಿಯಲ್ಲಿ ಹಾಡುತ್ತಿದ್ದೆವು. ಬೇರೆ ಕಾರ್ಯಕ್ರಮಗಳಲ್ಲೂ ಹಾಡುತ್ತಿದ್ದೆವು. ಆಗಾಗ ಭೇಟಿ ಅಗುತ್ತಿದ್ದೆವು. ಒಂದೇ ಮನೆಯ ಸದಸ್ಯರಂತೆ ಇದ್ದೆವು. ಸುಬ್ಬಣ್ಣನವರ ಪತ್ನಿ ಶಾಂತಲಾ ಅವರು ಬಹಳ ಆತ್ಮೀಯರಾಗಿದ್ದರು. ಹಾಗಾಗಿ ನನಗೂ ಅವರದ್ದು ಅವಿನಾಭಾವ ಸಂಬಂಧ. ಅವರು ಜೋರಾಗಿ ಮಾತನಾಡುತ್ತಿದ್ದರು. ಅವರ ಬಾಯಿಗೆ ಎಲ್ಲರೂ ಹೆದರುತ್ತಿದ್ದರು. ಆದರೆ ನಾನೊಬ್ಬಳು ಎದುರೆದುರು ನಿಂತು ಉತ್ತರ ಕೊಡುತ್ತಿದ್ದೆ. ತಪ್ಪು ಮಾಡಿದ ತಕ್ಷಣ ಹೇಳುತ್ತಿದ್ದೆ ಹೀಗೆ ಮಾಡಬಾರದು ಅಂತ. ಅವರು ನನ್ನ ಮಾತು ಮಾತ್ರ ಕೇಳುತ್ತಿದ್ದರು. ಅಂದರೆ ನನ್ನ ಮೇಲೆ ಅಷ್ಟು ಆತ್ಮೀಯತೆ ಮತ್ತು ವಿಶ್ವಾಸ ಇತ್ತು."

     ಸುಬ್ಬಣ್ಣನವರ ಗಾಯನದ ಬಗ್ಗೆ ನಿಮ್ಮ ಮಾತು

    ಸುಬ್ಬಣ್ಣನವರ ಗಾಯನದ ಬಗ್ಗೆ ನಿಮ್ಮ ಮಾತು

    "ಸುಬ್ಬಣ್ಣನವರಂತಹ ಗಡಸು ಕಂಠ ನನಗೆ ಗೊತ್ತಿದ್ದ ಮಟ್ಟಿಗೆ ಯಾರಿಗೂ ಇರಲಿಲ್ಲ. ಅವರು ತುಂಬಾ ಸ್ವಾಭಿಮಾನಿ. ಒಮ್ಮೆ ಸಂಗೀತ ನಿರ್ದೇಶಕರೊಬ್ಬರು ಅಡಿಷನ್‌ಗೆ ಕರೆದು ವಾಯ್ಸ್‌ ಟೆಸ್ಟ್ ಮಾಡಬೇಕು ಎಂದರಂತೆ. 'ಆನಂದಮಯ' ಹಾಡನ್ನು ಯಾವಾಗಲೂ ಹಾಡುತ್ತಿದ್ದರು. ಕುವೆಂಪು ಅವರ ಪರಮಭಕ್ತರಾಗಿದ್ದರು. ಸ್ವತಃ ಕುವೆಂಪು ಅವರು ರೈಟ್ಸ್ ಕೊಟ್ಟುಬಿಟ್ಟಿದ್ದರು ತಮ್ಮ ಯಾವುದೇ ಹಾಡನ್ನು ಹಾಡುಬಹುದು ಎಂದು. ಆ ಸಂಗೀತ ನಿರ್ದೇಶಕರು ಎಸ್‌. ಪಿ ಬಾಲಸುಬ್ರಮಣ್ಯಂ ತರ ಹಾಡಬೇಕು ಎಂದರಂತೆ. ತಕ್ಷಣ ನೀವು ಎಸ್‌ಪಿಬಿ ರೀತಿ ಎಕ್ಸ್‌ಪೆಕ್ಟ್ ಮಾಡುವುದಾದರೆ ಅವರನ್ನೇ ಕರೆದು ಹಾಡಿಸಿ, ನಾನು ಬೇಕಾಗಿಲ್ಲ ಎಂದು ಎದ್ದು ಬಂದು ಬಿಟ್ಟರಂತೆ. ಆ ರೀತಿಯ ವ್ಯಕ್ತಿತ್ವ ಅವರದ್ದು. ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಿದ್ದರು. ಆದರೆ ನನಗೆ ಮಾತ್ರ ಅವರ ಎದುರು ಮಾತನಾಡುವ ಧೈರ್ಯ ಇತ್ತು. ಕಾರಣ ಒಟ್ಟಿಗೆ ಆಡಿ ಬೆಳೆದವರು ಅಲ್ಲವಾ. ತುಂಬು ಜೀವನ ನಡೆಸಿ. ಯಾವುದೇ ನೋವಿಲ್ಲದೇ ಸುಖವಾಗಿ ಹೋದರು. ಪುಣ್ಯ ಅದು."

     ನಿಮ್ಮ ನೆಚ್ಚಿನ ಸುಬ್ಬಣ್ಣನವರ ಹಾಡುಗಳು?

    ನಿಮ್ಮ ನೆಚ್ಚಿನ ಸುಬ್ಬಣ್ಣನವರ ಹಾಡುಗಳು?

    " ಸುಬ್ಬಣ್ಣ ಹಾಡಿದ ಹಾಡುಗಳಲ್ಲಿ 'ಆನಂದಮಯ...', 'ಮೊದಲು ಮಾನವನಾಗು..', ಶಿಶುನಾಳ ಷರೀಫರ ಹಾಡುಗಳು ಬಹಳ ಇಷ್ಟ. ಅವರ ಕಂಠದಲ್ಲಿ ಬಹಳ ಮಾಧುರ್ಯ ಇತ್ತು. ಅದು ಬಹಳ ಇಷ್ಟ. ಅವರ ಹಾಡುಗಳನ್ನು ನಮ್ಮ ಶಿಷ್ಯರಿಗೆ ಹೇಳಿಕೊಟ್ಟಿದ್ದೇನೆ. ಒಟ್ನಲ್ಲಿ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತೆ ಆಗಿದೆ."

     ಮರೆಯಲಾಗದ ಘಟನೆ?

    ಮರೆಯಲಾಗದ ಘಟನೆ?

    "ಒಮ್ಮೆ ಯಾವುದೋ ಕಾರ್ಯಕ್ರಮಕ್ಕಾಗಿ ಇಬ್ಬರು ಮೈಸೂರಿಗೆ ಹೋಗುತ್ತಿದ್ದೆವು. ಆಗ ಯಾರೋ ಒಬ್ಬರು ಮಧ್ಯೆ ಸಿಕ್ಕಿ ನಮಸ್ಕಾರ ಸರ್ ಅಂದರು. ಇವರು ಕೇಳಿಸಿಕೊಳ್ಳಲಿಲ್ಲ. ಆಮೇಲೆ ಆ ವ್ಯಕ್ತಿ ನನಗೆ ನಮಸ್ಕಾರ ಹೇಳಿದರು. ನಾನು ಅವರೊಟ್ಟಿಗೆ ಮಾತನಾಡಿದೆ. ಕೂಡಲೇ ಇವರಿಗೆ ಕೋಪಬಂತು. ಏನಯ್ಯಾ ನಾನಿಲ್ಲಿ ಕೂತಿದ್ದೀನಿ ನನ್ನನ್ನು ಮಾತನಾಡಿಸಲಿಲ್ಲ ಎಂದು ಬಹಳ ಬೈದರು. ಆಮೇಲೆ ನಾನು ಹೇಳಿದೆ. ಇಲ್ಲ ಸುಬ್ಬಣ್ಣ ಮೊದಲು ಅವರು ನಿಮಗೆ ನಮಸ್ಕಾರ ಹೇಳಿದರು. ನೀವು ಎಲ್ಲೋ ನೋಡುತ್ತಿದ್ರಿ, ಅದು ನಿಮ್ಮ ತಪ್ಪು ಎಂದು ನೇರವಾಗಿ ಹೇಳಿದೆ. ಕೂಡಲೇ ಅವರು ಹೌದಾ ಎಂದು ನಕ್ಕರು. ಈ ರೀತಿ ಏನೇ ಅಂದರು ತಪ್ಪು ಎಂದು ಗೊತ್ತಾದರೆ ನಕ್ಕು ಬಿಡುತ್ತಿದ್ದರು. ಇಂತಹ ಸಾಕಷ್ಟು ಸಾಕಷ್ಟು ಘಟನೆಗಳು ನಡೆದಿದೆ. ಕೆಲವೊಮ್ಮೆ ಕಾರ್ಯಕ್ರಮಗಳಲ್ಲಿ ಯಾರಾದರೂ ಹೊಸ ಗಾಯಕರು ಸೀದಾ ವೇದಿಗೆ ಹೋದರೆ, ಆಗ ಕರೆದು ಹೇಳುತ್ತಿದ್ದರು. ನನ್ನನ್ನು ತೋರಿಸಿ ಇಲ್ಲಿ ದೊಡ್ಡ ಸಿಂಗರ್ ಕೂತಿದ್ದಾರೆ. ಅವರಿಗೆ ನಮಸ್ಕಾರ ಹೇಳದೆ ಹೋಗುತ್ತಿದ್ದೀಯಾ ಅಂತಿದ್ದರು. ಆಗ ನಾನು ದೊಡ್ಡ ಸಿಂಗರ್ ಅಲ್ಲ ಎನ್ನುತ್ತಿದ್ದೆ. ಇಂತಹ ಸಾಕಷ್ಟು ಘಟನೆಗಳಿವೆ". ಎಂದು ಶಿವಮೊಗ್ಗ ಸುಬ್ಬಣ್ಣ ಅವರನ್ನು ಗಾಯಕಿ ಬಿ. ಕೆ ಸುಮಿತ್ರಾ ನೆನಪಿಸಿಕೊಂಡಿದ್ದಾರೆ.

    Recommended Video

    Gaalipata 2 | Yograj Bhat | ಜೈ 'ಗಾಳಿಪಟ 2' ಎಂದ ಭಟ್ರು *Sandalwood

    English summary
    Shivamogga Subbanna No More: Singer B K Sumitra Recalls Her Childhood Friendship With Noted Kannada Singer.
    Friday, August 12, 2022, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X