ಸಾಮಾನ್ಯವಾಗಿ ಮಕ್ಕಳು ಮಾಡುವ ತರ್ಲೆ ಕೆಲಸಗಳು ಅಪ್ಪನಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇಲ್ಲಿ ಅದು ಉಲ್ಟಾ. ಅಂಬಿ (ಅಂಬರೀಶ್) ಮಾಡುವ ಪ್ರತಿ ಎಡವಟ್ಟು ಕೆಲಸಗಳಿಂದ ಮಗನಿಗೆ ತಲೆ ನೋವು ಆಗುತ್ತಿರುತ್ತದೆ. ಒಬ್ಬ ಫೈಟ್ ಮಾಸ್ಟರ್ ಆಗಿದ್ದ ಅಂಬಿ ವಯಸ್ಸಾದ ಮೇಲೆ ಮನೆಯಲ್ಲಿ ಇರುತ್ತಾರೆ. ಚೆನ್ನಾಗಿ ನೋಡಿಕೊಳ್ಳುವ ಮಗ - ಸೊಸೆ, ಮುದ್ದಾದ ಮೊಮ್ಮಕ್ಕಳು ಎಲ್ಲ ಇದ್ದರೂ ಅಂಬಿ ಮನೆ ಬಿಟ್ಟು ಹೋಗುತ್ತಾರೆ.
ಮಗನ ಜೊತೆಗಿನ ಸಣ್ಣ ಮನಸ್ತಾಪದಿಂದ ಬೈಕ್ ಏರಿ ಮಕ್ಕಳು, ಮೊಮ್ಮಕ್ಕಳಿಂದ ಅಂಬಿ ದೂರ ಹೊರಡುತ್ತಾರೆ. 'ಮಕ್ಕಳ ಜೀವನದಲ್ಲಿ ನಾನು ಇದ್ದೇನೆ... ಆದರೆ ನನಗೂ ಒಂದು ಜೀವನ ಇದೆ' ಎಂದು ಅದನ್ನು ಹುಡುಕುತ್ತ ಅಂಬಿ ಪ್ರಯಾಣ ಆರಂಭಿಸುತ್ತಾರೆ. ತನ್ನ ಹಳೆಯ ಪ್ರೇಯಸಿ ನಂದಿನಿ (ಸುಹಾಸಿನಿ) ಈಗ ಹೇಗಿದ್ದಾಳೆ?, ಅವಳನ್ನು ನೋಡಬೇಕು ಎಂದು ಅಂಬಿ ಕೇರಳಗೆ ಹೋಗುತ್ತಾರೆ. ವಯಸ್ಸಾದ ಅಂಬಿಗೆ ಇಲ್ಲಿ ಅರಳು ಮರಳಲ್ಲ ಅವರು 'ಮರಳಿ ಅರಳು'ತ್ತಾರೆ.
ಪ್ರೀತಿಗೆ, ಭಾವನೆಗಳಿಗೆ ವಯಸ್ಸಿಲ್ಲ... ಈ ಸಿನಿಮಾ ಅದನ್ನೇ ಹೇಳುತ್ತಿದೆ. ಹಳ್ಳಿಯಲ್ಲಿ ತಾನು ಯುವಕನಾಗಿದ್ದಾಗ ಪ್ರೀತಿ ಮಾಡಿದ್ದ ಹುಡುಗಿಯನ್ನು ಮತ್ತೆ ಕಾಣಲು ಅಂಬಿ ಹೋಗುತ್ತಾರೆ. ಆಗ ಅವರಿಗೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತದೆ. ಹೆಂಡತಿ ಇಲ್ಲದ ಅಂಬಿ, ಗಂಡನಿಲ್ಲದ ನಂದಿನಿ ಮತ್ತೆ ಸೇರಿ ಹೊಸ ಜೀವನ ಶುರು ಮಾಡುತ್ತಾರಾ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.