ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅವತಾರ್ 2. 2009ರಲ್ಲಿ ಬಿಡುಗಡೆಗೊಂಡಿದ್ದ ಅವತಾರ್ ಚಿತ್ರದ ಮುಂದುವರೆದ ಭಾಗವೇ ಈ ಅವತಾರ್ ದ ವೇ ಆಫ್ ವಾಟರ್. ಮೊದಲ ಭಾಗದಲ್ಲಿ ಪ್ಯಾಂಡೊರಾವನ್ನು ಮಾನವರ ಅಟ್ಯಾಕ್‌ನಿಂದ ಉಳಿಸಿಕೊಂಡ ನಾವಿಗಳು ನಾಶವಾಗಿದ್ದ ತಮ್ಮ ಸುಂದರ ಜಾಗವನ್ನು ಮತ್ತೆ ಕಟ್ಟಿಕೊಂಡ್ರಾ, ಮತ್ತೆ ಅವರ ಮೇಲೆ ಮಾನವರು ದಾಳಿ ನಡೆಸಬಹುದಾ ಎಂಬ ಪ್ರಶ್ನೆಗಳು ವೀಕ್ಷಕರ ಮನದಲ್ಲಿತ್ತು. ಈ ಪ್ರಶ್ನೆಗಳಿಗೆ ಎರಡನೇ ಭಾಗದಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಉತ್ತರ ನೀಡಿದ್ದಾರೆ.
ಕಥೆ: ಚಿತ್ರದ ಕಥೆ ಪ್ಯಾಂಡೊರಾ ಮೂಲಕವೇ ಆರಂಭವಾಗುತ್ತದೆ. ಮೊದಲ ಭಾಗದಲ್ಲಿ ಒಂದಾಗಿದ್ದ ಜೇಕ್ ಸುಲ್ಲಿ ಹಾಗೂ ನೇಟಿರಿ ಜನರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಜೇಕ್ ಸುಲ್ಲಿ ಹಾಗೂ ನೇಟಿರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಕೂಡ ಜನಿಸುತ್ತಾರೆ. ಎಲ್ಲಾ ಚೆನ್ನಾಗಿಯೇ ಸಾಗುತ್ತಿರುವಾಗ ಮತ್ತೆ ಪ್ಯಾಂಡೊರಾಗೆ ಮಾನವರ ಪ್ರವೇಶವಾಗುತ್ತೆ. ತಮ್ಮ ಯೋಜನೆಗೆ ಅಡ್ಡಿಯಾಗಿರುವ ಜೇಕ್ ಸುಲ್ಲಿಯನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ನಾವಿಗಳ ರೂಪದಲ್ಲಿ ಬರುವ ಮಾನವರ ಯೋಜನೆ ವಿಫಲವಾಗುತ್ತೆ. ಆದರೆ ಜೇಕ್ ಸುಲ್ಲಿ ಕುಟುಂಬದ ಜತೆ ಇದ್ದ 'ಸ್ಪೈಡರ್' ಎಂಬ ಹುಡುಗನನ್ನು ಆ ಮಾನವರ ತಂಡ ತಮ್ಮೊಡನೆ ಕೊಂಡೊಯ್ಯುತ್ತಾರೆ. ಇತ್ತ ತಮ್ಮ ದೈನಂದಿನ ಚಟುವಟಿಕೆ ತಿಳಿದಿದ್ದ ಸ್ಪೈಡರ್ ಮಾನವರ ಬಳಿ ತಮ್ಮ ಬಗ್ಗೆ ಎಲ್ಲವನ್ನೂ ಹೇಳಿಬಿಡಬಹುದು ಎಂಬ ಭಯದೊಂದಿಗೆ ಜೇಕ್ ಸುಲ್ಲಿ ತಮ್ಮ ಕುಟುಂಬ ಹಾಗೂ ದತ್ತು ಪುತ್ರಿ ಕಿರಿ ಜತೆ ದ್ವೀಪವೊಂದಕ್ಕೆ ತೆರಳಿ ತಲೆಮರೆಸಿಕೊಳ್ತಾನೆ. ಇಲ್ಲಿಂದಲೇ ಚಿತ್ರದ ಅಸಲಿ ಆಟ ಶುರುವಾಗಲಿದ್ದು, ಕಾಡಿನಲ್ಲಿ ವಾಸವಾಗಿದ್ದ ಜೇಕ್ ಸುಲ್ಲಿ ಕುಟುಂಬ ಸಮುದ್ರದ ಜೀವನಕ್ಕೆ ಹೊಂದಿಕೊಳ್ಳುತ್ತಾ, ತನ್ನನ್ನು ಹುಡುಕುತ್ತಿರುವ ಮಾನವರಿಂದ ಜೇಕ್ ಸುಲ್ಲಿ ಪಾರಾಗ್ತಾನಾ ಎಂಬುದೇ ಚಿತ್ರದ ಕಥೆ.