ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಕ್ಕೆ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಹಾಗೂ ಬೃಂದಾ ಆಚಾರ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಮಿಲನಾ ನಾಗರಾಜ್, ಎನ್.ಎಸ್ ನಾಗಭೂಷಣ್, ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಮುಂತಾದವರು ಫೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಸಿ ಪಾಟೀಲ್ ಹಾಗೂ ಶಶಾಂಕ್ ಇಬ್ಬರೂ ಸೇರಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕೃಷಿ ಸಚಿವ ಬಿಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಾಣ ಮಾಡಲಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ 'ಲವ್ 360' ಮೂಲಕ ಹೊಸಬರ ಸಿನಿಮಾ ಮಾಡಿ ಗೆದ್ದಿರೋ ನಿರ್ದೇಶಕ ಮತ್ತೊಂದು ಸಾಹಸಕ್ಕೆ ಕೈ ಹಾಕಿ ಅದರಲ್ಲೂ ಸಕ್ಸಸ್ ಆಗಿದ್ದಾರೆ.
ಕೌಸಲ್ಯಾ ಸುಪ್ರಜಾ ರಾಮ ಕಥೆ: ನಾಯಕ ರಾಮ್ ತನ್ನ ತಂದೆ ಹೇಳಿಕೊಟ್ಟಂತೆ ಗಂಡು ಎಂಬ ಅಹಂನೊಂದಿಗೆ ಕಾಲೇಜು ಜೀವನದವರೆಗೂ ಬಂದಿರುತ್ತಾನೆ. ಆ ವೇಳೆ ಆಗುವ ನಾಯಕಿ ಶಿವಾನಿ ಪರಿಚಯದಿಂದ ಹುಡುಗಿಯರೆಂದರೆ ಆಗದ ನಾಯಕ ರಾಮ್ ಪ್ರೀತಿಯಲ್ಲಿ ಬೀಳುತ್ತಾನೆ. ಈ ಪ್ರೀತಿಯೂ ಸಹ ನಾಯಕನ ನಾನು ಗಂಡು ಎಂಬ ಅಹಂಕಾರಕ್ಕೆ ಸಿಲುಕಿ ಹಾಳಾಗುತ್ತೆ. ಬಳಿಕ ನಾಯಕ ತನ್ನ ತಂದೆ - ತಾಯಿ ಆರಿಸಿದ ಹುಡುಗಿಯನ್ನೇ ಮದುವೆಯಾಗ್ತಾನೆ. ಹೀಗೆ ಒಲ್ಲದ ಮನಸ್ಸಿನಿಂದ ನಿರ್ದಿಷ್ಟ ಕಾರಣವೊಂದಕ್ಕೆ, ಅಹಂ ಪಕ್ಕಕ್ಕಿಟ್ಟು ಮದುವೆಯಾಗುವ ನಾಯಕನ ಜೀವನ ಸರಿ ಹೋಗುತ್ತಾ ಅಥವಾ ಮತ್ತೆ ತನ್ನ ಅಹಂ ಅನ್ನು ಮುಂದುವರೆಸುತ್ತಾನಾ ಎಂಬುದೇ ಚಿತ್ರದ ಕಥೆ.