ತಿಮ್ಮಯ್ಯ & ತಿಮ್ಮಯ್ಯ ಸಿನಿಮಾವನ್ನು ಕಮರ್ಷಿಯಲ್ ಜಾಹಿರಾತು ನಿರ್ದೇಶಕರಾಗಿ ಕೆಲಸ ಮಾಡಿರುವ ಸಂಜಯ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ಅವರು ದಿಗಂತ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಗಂತ್ ಅವರಿಗೆ ಜೋಡಿಯಾಗಿ ಐಂದ್ರಿತಾ ರೇ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿಜಬದುಕಿನಲ್ಲೂ ಜೋಡಿಯಾಗಿರುವ ದಿಗಂತ್ ಮತ್ತು ಐಂದ್ರಿತಾ ರೇ, ಇದಕ್ಕೂ ಮುಂಚೆ ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಶುಭ್ರಾ ಐಯ್ಯಪ್ಪ ಎರಡನೇ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಕಥೆ: ತನ್ನ ಊರಿನಲ್ಲಿರುವ ಆಸ್ತಿಯನ್ನೆಲ್ಲಾ ಮಾರಿ, ಗೆಳತಿಯೊಂದಿಗೆ ವಿದೇಶಕ್ಕೆ ಹೋಗಿ ನೆಲಸಬೇಕು ಎಂಬುದು ಜ್ಯೂ. ತಿಮ್ಮಯ್ಯನ (ದಿಗಂತ್) ಪ್ಲ್ಯಾನ್. ಎಲ್ಲಾ ಅಂದುಕೊಂಡಂತೆ ಆಯಿತು ಎನ್ನುವಾಗಲೇ ಕೂರ್ಗ್‌ನಲ್ಲಿರುವ ಸೀನಿಯರ್ ತಿಮ್ಮಯ್ಯನನ್ನು (ಅನಂತ್ ನಾಗ್) ಮೂರು ತಿಂಗಳು ನೋಡಿಕೊಳ್ಳುವ ಹೊಣೆ ಜೂ. ತಿಮ್ಮಯ್ಯನ ಹೆಗಲಿಗೆ ಬೀಳುತ್ತದೆ. ಸೀನಿಯರ್ ತಿಮ್ಮಯ್ಯನಿಗೆ ವಯಸ್ಸಾಗಿದ್ದರೂ, ಸೃಷ್ಟಿಸುವ ಸಮಸ್ಯೆಗಳು, ಹಠ ಸಾಮಾನ್ಯವೇನಲ್ಲ. ಇಂತಹ ತಾತನನ್ನು ಮೂರು ತಿಂಗಳು ಸಂಭಾಳಿಸಲು ಮೊಮ್ಮಗನಿಗೆ ಆಗುತ್ತದೆಯೇ? ಅಂದುಕೊಂಡಂತೆ ಆತ ವಿದೇಶಕ್ಕೆ ಹೋಗುತ್ತಾನಾ? ಮೊಮ್ಮಗನ ಪ್ರೇಮಕಥೆ ಏನಾಗುತ್ತದೆ ಅನ್ನೋದೇ 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾದ ಕಥೆ.