»   »  ಅಪ್ರತಿಮ ಗಾಯಕ ಕಿಶೋರ್ ಕುಮಾರ್ ನೆನಪು

ಅಪ್ರತಿಮ ಗಾಯಕ ಕಿಶೋರ್ ಕುಮಾರ್ ನೆನಪು

Subscribe to Filmibeat Kannada

ಅಪ್ರತಿಮ ಗಾಯಕ,ನಟ ಕಿಶೋರ್ ಕುಮಾರ್ ಅವರ 80ನೇ ಹುಟ್ಟುಹಬ್ಬವನ್ನು ಅವರ ಅಪಾರ ಅಭಿಮಾನಿ ಬಳಗ ಸಂಭ್ರಮ, ಸಡಗರದಿಂದ ಇಂದು ಆಚರಿಸಿತು. ಕಿಶೋರ್ ಕುಮಾರ್ ಹುಟ್ಟೂರು ಮಧ್ಯಪ್ರದೇಶದ ಖಂಡ್ವಾದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಇಂದು ಮುಂಜಾನೆ ವೇಳೆಗೆಲ್ಲಾ ಅಭಿಮಾನಿಗಳು ಕಿಶೋರ್ ಕುಮಾರ್ ಅವರ ಮನೆ ಹಾಗೂ ಸಮಾಧಿ ಸ್ಥಳ ಸಂದರ್ಶಿಸಲು ತಂಡೋಪತಂಡವಾಗಿ ಆಗಮಿಸಿದ್ದರು. ಸರ್ಗಮ್ ಸಂಗೀತ ವಾದ್ಯಗೋಷ್ಠಿ ಮತ್ತು ಕಿಶೋರ್ ಪ್ರೇಮ್ ಮಂಚ್ ಸೇರಿದಂತೆ ಕೆಲವೊಂದು ಸಂಗೀತ ತಂಡಗಳು ಆಗಮಿಸಿದ್ದವು. ಕಿಶೋರ್ ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ಖಾಂಡ್ವಾ ಜಿಲ್ಲಾಧಿಕಾರಿ ಎಸ್ ಬಿ ಸಿಂಗ್, ಪೊಲೀಸ್ ಕಮೀಷನರ್ ಯೋಗೇಶ್ ದೇಶ್ ಮುಖ್ ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರು, ಹಿರಿಯ ಅಧಿಕಾರಿಗಳು ಅಭಿಮಾನಿಗಳೊಂದಿಗೆ ಬೆರೆತು ಮಹಾನ್ ಗಾಯಕನಿಗೆ ನಮನ ಸಲ್ಲಿಸಿದರು. ಹಿನ್ನೆಲೆ ಗಾಯ ವಿನೋದ್ ರಾಥೋಡ್ ಸಮಾಧಿಗೆ ಹೂಗುಚ್ಛ ಸಮರ್ಪಿಸಿ ಕಿಶೋರ್ ಕುಮಾರ್ ಒಬ್ಬ ಅದ್ವಿತೀಯ ಗಾಯಕರಾಗಿದ್ದರು ಎಂದರು.

ಇದೇ ಸಂದರ್ಭದಲ್ಲಿ ಖಾಸಗಿ ಎಫ್ ಎಂ ವಾಹಿನಿ ಮತ್ತು ಭೂಪಾಲ್ ಸಾಂಸ್ಕೃತಿಕ ಇಲಾಖೆ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕಿಶೋರ್ ಕುಮಾರ್ ಅವರ ಪುಣ್ಯತಿಥಿಯಾದ ಅಕ್ಟೋಬರ್ 13ರಂದು ಸರಕಾರ ''ಕಿಶೋರ್ ಕುಮಾರ್ ರಾಷ್ಟ್ರೀಯ ಪ್ರಶಸ್ತಿ'' ನೀಡಲಿದೆ ಎಂದು ಮಧ್ಯಪ್ರದೇಶದ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಲಕ್ಷ್ಮೀಕಾಂತ್ ಶರ್ಮ ಪ್ರಕಟಿಸಿದರು.

ಕನ್ನಡ ಸೇರಿದಂತೆ ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ ಮತ್ತು ಒರಿಯಾ ಭಾಷೆಗಳಲ್ಲಿ ಕಿಶೋರ್ ಕುಮಾರ್ ಹಾಡಿರುವ ಹಾಡುಗಳು ಇಂದಿಗೂ ಜನಪ್ರಿಯ. ದ್ವಾರಕೀಶ್ ಅಭಿನಯದ 'ಕುಳ್ಳ ಏಜೆಂಟ್ 000'(1972) ಚಿತ್ರದ ''ಆಡು ಆಟ ಆಡು...'' ಕಿಶೋರ್ ಹಾಡಿರುವ ಕನ್ನಡದ ಜನಪ್ರಿಯ ಗೀತೆ.

ಕಿಶೋರ್ ಬರೀ ಗಾಯಕರಷ್ಟೇ ಆಗಿರಲಿಲ್ಲ. ಗೀತ ಸಾಹಿತಿ, ಸಂಗೀತ ಸಂಯೋಜಕ, ಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕತೆ, ಸಂಭಾಷಣೆಕಾರರಾಗಿಯೂ ಗುರುತಿಸಿಕೊಂಡಿದ್ದರು. ರೂಪ್ ತೇರಾ ಮಸ್ತಾನಾ, ಖೈಕೆ ಪಾನ್ ಬನಾರಸ್ ವಾಲಾ, ಜಿಂದಗಿ ಏಕ್ ಸಫರ್, ಓ ಸಾಥಿ ರೇ ಅವರ ಜನಪ್ರಿಯ ಗೀತೆಗಳಲ್ಲಿ ಕೆಲವು. ಐವತ್ತರ ದಶಕದಿಂದ ಎಪ್ಪತ್ತರವರೆಗೂ ತಮ್ಮ ಅಪ್ರತಿಮ ಕಂಠದಿಂದ ಮೋಡಿ ಮಾಡಿದ ಗಾಯಕ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada