»   » ಸಿಡಿ ರೂಪದಲ್ಲಿ ಡಾ.ಸಿ. ಅಶ್ವಥ್ ಹಾಡುಗಳು

ಸಿಡಿ ರೂಪದಲ್ಲಿ ಡಾ.ಸಿ. ಅಶ್ವಥ್ ಹಾಡುಗಳು

Subscribe to Filmibeat Kannada

ಸ್ವರ ಮಾಂತ್ರಿಕ ಸಿ.ಅಶ್ವಥ್ ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಅಶ್ವಥ್ ಕಂಚಿನ ಕಂಠದಲ್ಲಿ ಹೊರಹೊಮ್ಮಿದ ಹಾಡುಗಳ ಸಿಡಿಯನ್ನು ಲಹರಿ ಸಂಸ್ಥೆ ಹೊರ ತರುತ್ತಿದೆ. 'ಡಾ.ಸಿ.ಅಶ್ವಥ್ ನೆನಪು' ಹೆಸರಿನಲ್ಲಿ ಅವರ ಜನಪ್ರಿಯ ಗೀತೆಗಳ ಏಳು ಎಂಪಿ3 ಸಿಡಿಗಳು ಮಾರುಕಟ್ಟೆಗೆ ಶೀಘ್ರದಲ್ಲೆ ಬಿಡುಗಡೆಯಾಗಲಿವೆ.

ಪ್ರತಿ ಸಿಡಿ 25 ಹಾಡುಗಳನ್ನು ಒಳಗೊಂಡಿರುತ್ತದೆ. ಒಟ್ಟು ಏಳು ಸಿಡಿಗಳಲ್ಲಿ 175 ಹಾಡುಗಳು ಕೇಳುಗರಿಗೆ ಲಭ್ಯವಾಗಲಿವೆ. ಈ ಸಿಡಿಗಳನ್ನು ಬಿಡಿಬಿಡಿಯಾಗಿ ಅಲ್ಲದೆ ಒಂದೇ ಪ್ಯಾಕ್ ನಲ್ಲಿ ಹೊರತರಲಾಗುತ್ತಿರುವುದು ವಿಶೇಷ. ಪ್ರತಿಯೊಂದು ಸಿಡಿಗೂ ಒಂದೊಂದು ಹೆಸರನ್ನು ಇಡಲಾಗಿದೆ.

'ದೀಪವು ನಿನ್ನದೆ ಗಾಳಿಯು ನಿನ್ನದೆ', 'ಕಾಣದ ಕಡಲಿಗೆ', 'ಕುರುಡು ಕಾಂಚಣ', 'ಸೋರುತಿಹುದು ಮನೆಯ ಮಾಳಿಗೆ', 'ಶ್ರಾವಣ ಬಂತು ನಾಡಿಗೆ', 'ಯಾವುದಿ ಪ್ರವಾಹವು', 'ಮೌನ ತಬ್ಬಿತು ನೆಲವ' ಎಂಬ ಹೆಸರಿನಲ್ಲಿ ಸಿಡಿಗಳು ಲಭ್ಯವಾಗಲಿವೆ ಎಂದು ಲಹರಿ ಆಡಿಯೋ ಕಂಪನಿಯ ಮಾಲೀಕ ವೇಲು ತಿಳಿಸಿದ್ದಾರೆ.

ಸಿಡಿ ತಯಾರಿಕೆಯ ಕೆಲಸ ಈಗಾಗಲೇ ಮುಗಿದಿದ್ದು ಇನ್ನೆರಡು ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ವೇಲು ವಿವರ ನೀಡಿದ್ದಾರೆ. 'ಡಾ.ಸಿ.ಅಶ್ವಥ್ ನೆನಪು' ಸಿಡಿ ಗುಚ್ಛಕ್ಕಾಗಿ ದೂರವಾಣಿ ಮೂಲಕ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 080 2224 1044.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada