»   »  ಯೋಗರಾಜಭಟ್ಟರ ಮನಸಾರೆ ಧ್ವನಿಸುರುಳಿ ವಿಮರ್ಶೆ

ಯೋಗರಾಜಭಟ್ಟರ ಮನಸಾರೆ ಧ್ವನಿಸುರುಳಿ ವಿಮರ್ಶೆ

By: *ನಿಸ್ಮಿತಾ, ಬೆಂಗಳೂರು
Subscribe to Filmibeat Kannada

ಬ್ಯಾನರ್ : ರಾಕ್ ಲೈನ್ ಪ್ರೊಡಕ್ಷನ್ಸ್
ನಿರ್ಮಾಪಕ: ರಾಕ್ ಲೈನ್ ವೆಂಕಟೇಶ್
ನಿರ್ದೇಶಕ: ಯೋಗರಾಜ್ ಭಟ್
ಸಾಹಿತ್ಯ: ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್
ಸಂಗೀತ: ಮನೋಮೂರ್ತಿ
ಹಾಡಿರುವವರು: ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್, ಸೋನು ನಿಗಂ, ವಿಜಯ್ ಪ್ರಕಾಶ್, ಅನನ್ಯ, ಭಗತ್, ಕಿಶನ್ ಕುಮಾರ್ (ಕೆಕೆ) ವಿಕಾಸ್ ವಸಿಷ್ಠ,ಲಕ್ಷ್ಮೀ ನಾಗರಾಜ್

ಒಟ್ಟು ಏಳು ಹಾಡುಗಳಿರುವ ಚಿತ್ರದಲ್ಲಿ ಕೆಲವೊಂದು ಹಾಡುಗಳಿಗೆ ಸಾಹಿತ್ಯಕ್ಕೆ ಒತ್ತು ನೀಡಲಾಗಿದೆ. ಸುವರ್ಣ ವಾಹಿನಿಯ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಕಾಸ್ ವಸಿಷ್ಠ ಮತ್ತು ಲಕ್ಷ್ಮೀ ನಾಗರಾಜ್ ಅವರಿಗೆ ಮನೋಮೂರ್ತಿ ಅವಕಾಶ ನೀಡಿದ್ದು, ಸ್ಲಮ್ ಡಾಗ್ ಚಿತ್ರದಲ್ಲಿ 'ಜೈ ಹೋ' ಹಾಡಿಗೆ ಸಹ ಗಾಯಕರಾಗಿ ಹಾಡಿದ್ದ ಮೈಸೂರು ಮೂಲದ ವಿಜಯ್ ಪ್ರಕಾಶ್ ಕೂಡ ಒಂದು ಹಾಡು ಹಾಡಿರುವುದು ವಿಶೇಷ.

ಒಂದು ಕನಸು ಕಾಲೀಪೀಲಿ ಕಣ್ಣಮುಂದೆ ತೂರುತಿರಬೇಕು, ಎನ್ನುವ ಹಾಡಿನಲ್ಲಿ ಕನ್ನಡ ಸಾಹಿತ್ಯಕ್ಕಿಂತ ಕಾಯ್ಕಿಣಿ ಇಂಗ್ಲಿಷ್ ಗೆ ಮೊರೆಹೋಗಿದ್ದಾರೆ. ಈ ಹಾಡಿನಲ್ಲಿ ಕುನಾಲ್ ಕನ್ನಡ ಪದವನ್ನು ಬಳಸಿದ ರೀತಿ ದೇವರಿಗೇ ಪ್ರೀತಿ.ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ ಹಾಡಿನಲ್ಲಿ ಕಾಯ್ಕಿಣಿ ಉತ್ತಮ ಸಾಹಿತ್ಯ ನೀಡಿದ್ದಾರೆ ಹಾಗೂ ಹಾಡಿನ ಟ್ಯೂನ್ ಸೋನು ನಿಗಂ ಅವರ ಟ್ರೇಡ್ ಮಾರ್ಕ್ ಹಾಡಿನಂತಿದೆ. ಮತ್ತೆಮತ್ತೆ ಗುನುಗುಟ್ಟುವಂತಿದೆ.

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ ಎನ್ನುವ ಹಾಡಿನಲ್ಲಿ ನಿರ್ದೇಶಕ ಯೋಗರಾಜ್ ಭಟ್ ತನ್ನಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಹೊರಗೆಡವಿದ್ದಾರೆ. ಕಿಶನ್ ಕುಮಾರ್ (ಕೆಕೆ) ಮತ್ತು ಶ್ರೇಯಾ ಘೋಷಾಲ್ ಬಹಳ ಇಂಪಾಗಿ ಹಾಡಿದ್ದಾರೆ. 'ಒಂದೇ ನಿನ್ನ ನೋಟಸಾಕು ಮಳ್ಳನಾಗೋಕೆ...' ಹಾಡಿಗೆ ಕಾಯ್ಕಿಣಿ ಸಾಹಿತ್ಯ ಪರವಾಗಿಲ್ಲ, ಟ್ಯೂನ್ ಹಿಂದೆ ಎಲ್ಲೋ ಕೇಳಿದ ನೆನಪು ಬರುವಂತದ್ದು, ಆದರೆ ಮನೋಮೂರ್ತಿ ಈ ಹಾಡಿಗೆ ಸೋನುನಿಗಂ ಆಯ್ಕೆ ಮಾಡಿದ್ದು ಸರಿಯಲ್ಲ ಎಂದನಿಸುತ್ತದೆ.

'ನಾ ನಗುವ ಮೊದಲೇನೆ ಮಿನುಗುತಿದೆ ಮುಗುಳುನಗೆ...' ಹಾಡಿಗೆ ಸಾಹಿತ್ಯ, ಸಂಗೀತ ಮತ್ತು ಶ್ರೇಯಾ ಘೋಷಾಲ್ ಅವರ ಧ್ವನಿ ಎಲ್ಲಾ ಒಂದಕ್ಕೊಂದು ಮಿಳಿತವಾಗಿದೆ. ನಾನು ಮನಸಾರೆ ಹಾಡು ಜಗತಿನ ನಂಟು, ಸುವರ್ಣವಾಹಿನಿಯ ಮೂಲಕ ಬಂದ ವಿಕಾಸ್ ಮತ್ತು ಲಕ್ಶ್ಮಿ ಅವರಂತಹ ಉತ್ತಮ ಪ್ರತಿಭೆಗಳನ್ನು ಪರಿಚಯಿಸಿದ್ದಕ್ಕೆ ಮನೋಮೂರ್ತಿಗೆ ಅಭಿನಂದಗಳನ್ನು ಸಲ್ಲಿಸಬೇಕು. ಸಹನಾವತು ಎನ್ನುವ ಶ್ಲೋಕವನ್ನು ನಿರ್ದೇಶಕ ಯೋಗರಾಜ್ ಭಟ್ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಸ್ಲಂ ಡಾಗ್ ಚಿತ್ರದ ಜನಪ್ರಿಯ ಹಾಡು ಜೈಹೋ ಹಾಡಿಗೆ ಧ್ವನಿಗೂಡಿಸಿದ್ದ ವಿಜಯ್ ಪ್ರಕಾಶ್ ಈ ಹಾಡನ್ನು ಚಂದವಾಗಿ ಹಾಡಿದ್ದಾರೆ.

ಒಟ್ಟಿನಲ್ಲಿ ಮುಂಗಾರುಮಳೆ, ಮಿಲನ ಮತ್ತು ಚೆಲುವಿನ ಚಿತ್ತಾರದಂತ ಚಿತ್ರಗಳಿಗೆ ಇಂಪಾದ ಸಂಗೀತ ನೀಡಿದ್ದ ಮನೋಮೂರ್ತಿ ಅವರ ಸಂಗೀತದಲ್ಲಿ ಏನೋ ಕೊರತೆ ಕಾಣಿಸುತ್ತಿದೆ. ಅವರಿಗೊಂದು ಕಿವಿಮಾತು ನಮ್ಮ ಕನ್ನಡದ ಪ್ರತಿಭೆಗಳಿಗೆ ಅವಕಾಶ ನೀಡಿ ಬಾಲಿವುಡ್ ಗಾಯಕರು ಕನ್ನಡವನ್ನು ಕೊಲ್ಲುವುದನ್ನು ಸ್ವಲ್ಪ ಮಟ್ಟಿಗೆ ತಪ್ಪಬಹುದೇನೋ (ಶ್ರೇಯಾ ಘೋಷಾಲ್ ಹೊರತಾಗಿ).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada