»   »  ದುಗ್ಗಾಣಿ ಖರ್ಚಿಲ್ಲದೆ ಬಂದ ಜಂಗ್ಲಿ ಧ್ವನಿಸುರುಳಿ!

ದುಗ್ಗಾಣಿ ಖರ್ಚಿಲ್ಲದೆ ಬಂದ ಜಂಗ್ಲಿ ಧ್ವನಿಸುರುಳಿ!

By: *ಜಯಂತಿ
Subscribe to Filmibeat Kannada
Vijay in Junglee
ದುನಿಯಾ ಸೂರಿ ಹಾಗೂ ವಿಜಯ್ ಕಾಂಬಿನೇಷನ್‌ನ, ಬಹು ನಿರೀಕ್ಷಿತ ಜಂಗ್ಲಿ ಚಿತ್ರದ ಧ್ವನಿಸುರುಳಿಗಳು,ಸಿ.ಡಿ. ತಟ್ಟೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿವೆ. ಧ್ವನಿಸುರುಳಿ ಬಿಡುಗಡೆಯಾದುದು ಯಾವಾಗ?

ಪತ್ರಕರ್ತರಿಗೆ ಸುಳಿವಿಲ್ಲ. ಗಾಂಧಿನಗರದ ಗ್ರೀನ್‌ಹೌಸ್‌ನಲ್ಲಿ ಬಾಳೆಎಲೆಯ ಊಟ ಹಾಕಿಸಲಿಲ್ಲ. ಬೆಂಗಳೂರಿನ ಅರಮನೆ ಮೈದಾನದಲ್ಲೋ, ಜಿಲ್ಲಾಕೇಂದ್ರದ ಕ್ರೀಡಾಂಗಣದಲ್ಲೋ ಜಂಗ್ಲಿ ತಂಡ ಕುಣಿದು ಕುಪ್ಪಳಿಸಿದ ಸುದ್ದಿಯಿಲ್ಲ. ಇವೆಲ್ಲ ಹೋಗಲಿ, ಪ್ರೆಸ್‌ಕ್ಲಬ್‌ನಲ್ಲೊಂದು ಸಣ್ಣ ಸುದ್ದಿಗೋಷ್ಠಿಯೂ ನಡೆಯಲಿಲ್ಲ. ಹೀಗಿರುವಾಗ, ಸಿನಿಮಾ ಸಂಪ್ರದಾಯಕ್ಕೆ ವಿರುದ್ಧವಾಗಿ ಜಂಗ್ಲಿ ಮಾರುಕಟ್ಟೆಗೆ ಬಂದುದು ಹೇಗೆ?

ಉತ್ತರದ ರೂಪದಲ್ಲಿ ಕಾಣಿಸುವುದು ಎರಡು ಸಾಧ್ಯತೆ. ಮೊದಲನೆಯದು, ಕಾಸ್ಟ್ ಕಟಿಂಗ್ ಮಂತ್ರವನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜಾರಿಗೊಳಿಸಿರಬೇಕು. ಎರಡನೆಯದು, ನಿರ್ದೇಶಕ ಸೂರಿಗೆ ಪತ್ರಕರ್ತರ ಮೇಲಿನ ಕೋಪ ಇನ್ನೂ ಹಸಿಯಾಗಿರಬೇಕು.

ಮೊದಲಿಗೆ ಸೂರಿ ಸಿಟ್ಟಿನ ವಿಷಯ. ಇಂತಿ ನಿನ್ನ ಪ್ರೀತಿಯ ಚಿತ್ರ ಬಿಡುಗಡೆಯಾದ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಗುಂಡುಗೋಷ್ಠಿಗೆ ಮೊದಲೇ ಸೂರಿ ಹಾಗೂ ಸುದ್ದಿಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಿನಿಮಾದಲ್ಲಿ ಕುಡಿತ ಹೆಚ್ಚಾಯಿತು ಎನ್ನುವ ಪತ್ರಕರ್ತರ ಮಾತಿನ ವರಸೆ ಸೂರಿಗೆ ಇಷ್ಟವಾಗಿರಲಿಲ್ಲ. ನಾನಿನ್ನು ಸಿನಿಮಾನೇ ಮಾಡೊಲ್ಲ ಎಂದವರು ಕೋಪಿಸಿ ಪತ್ರಕರ್ತರಿಗೆ ಬೆನ್ನು ತೋರಿದ್ದರು. ನಂತರ, ಒಂದಷ್ಟು ದಿನಗಳ ಅಜ್ಞಾತವಾಸದ ನಂತರ ಅವರು ಕೈಗೆತ್ತಿಕೊಂಡಿದ್ದು ಜಂಗ್ಲಿ. ಈ ಚಿತ್ರದ ಮುಹೂರ್ತ, ಚಿತ್ರೀಕರಣ ವಿವರ- ಯಾವುದರ ಬಗ್ಗೆಯೂ ಈವರೆಗೆ ಸೂರಿ ಸುದ್ದಿಗೋಷ್ಠಿ ಕರೆದಿಲ್ಲ. ತಾವಾಗಿಯೇ ಸಂಪರ್ಕಿಸಿದ ಪತ್ರಕರ್ತರಿಗೆ ಕೇಳಿದ ಪ್ರಶ್ನೆಗಷ್ಟೇ ಉತ್ತರ.

ಇನ್ನು ರಾಕ್‌ಲೈನ್ ಸಮಾಚಾರ. ಆಪರೇಷನ್ ಕಾಸ್ಟ್‌ಕಟಿಂಗ್ ಮುಂಚೂಣಿಯಲ್ಲಿರುವುದು ಇದೇ ರಾಕ್‌ಲೈನ್. ಬಜೆಟ್ ದೊಡ್ಡದಾಯಿತೆಂದು ಯೋಗರಾಜ ಭಟ್ಟರ ಲಗೋರಿಯನ್ನು ಮುಲಾಜಿಲ್ಲದೆ ನಿರಾಕರಿಸಿದ ರಾಕ್‌ಲೈನ್ ಜಂಗ್ಲಿ ಚಿತ್ರದ ಬಜೆಟ್ ಬಗ್ಗೆಯೂ ಮೈಯೆಲ್ಲ ಎಚ್ಚರವಾಗಿದ್ದಾರೆ. ಈ ಮೊದಲು ಬಿಂದಾಸಾಗಿ ಖರ್ಚು ಮಾಡಿದ ಬೊಂಬಾಟ್ ನೆಲಕಚ್ಚಿದ್ದೇ ಈ ಮುನ್ನೆಚ್ಚರಿಕೆಗೆ ಕಾರಣ.

ಅಂದಹಾಗೆ, ಪತ್ರಿಕಾಗೋಷ್ಠಿ-ಗುಂಡುಗೋಷ್ಠಿ ನಡೆಯಲಿಲ್ಲ ಎಂದಮಾತ್ರಕ್ಕೆ ಜಂಗ್ಲಿ ಸುಖಾಸುಮ್ಮನೆ ಮಾರುಕಟ್ಟೆಗೆ ಬಂದಿಲ್ಲ. ಖರ್ಚಿಲ್ಲದ ಹೊಸ ಮಾರ್ಗವೊಂದನ್ನು ಸೂರಿ-ರಾಕ್ ಜೋಡಿ ಹುಡುಕಿದೆ. ಅದು ಟೀವಿಯ ಲೈವ್ ಕಾರ್ಯಕ್ರಮ. ಉದಯ ಟೀವಿಯಲ್ಲಿ ಭಾನುವಾರ (ಜ. 18) ನಡೆದ ನೇರಪ್ರಸಾರದ ಕಾರ್ಯಕ್ರಮದಲ್ಲಿ ಜಂಗ್ಲಿ ಧ್ವನಿಸುರುಳಿ ನಡೆದಿದೆ. ಸೂರಿ, ರಾಕ್‌ಲೈನ್, ವಿಜಿ, ಅಂದ್ರಿತಾ ಜೊತೆ ಜಯಂತ ಕಾಯ್ಕಿಣಿ, ಹರಿಕೃಷ್ಣ ಹಾಗೂ ಯೋಗರಾಜ ಭಟ್ಟರು ಉದಯ ಸ್ಟುಡಿಯೋಗೆ ಆಗಮಿಸಿ ಕ್ಯಾಸೆಟ್‌ಗಳನ್ನು ಕ್ಯಾಮರಾ ಕಣ್ಣಿಗೆ ಒಡ್ಡಿದ್ದಾರೆ. ಚಿಕ್ಕಾಸು ಖರ್ಚಿಲ್ಲದೆ ಧ್ವನಿಸುರುಳಿ ಬಿಡುಗಡೆ ಸಮಾಚಾರ ಮನೆಮನೆ ತಲುಪಿರುವುದು ಹೀಗೆ.

ಪ್ರಸ್ತುತ, ಯು-2 ವಾಹಿನಿಯಲ್ಲಿನ ಅತ್ಯಂತ ಜನಪ್ರಿಯ ಗೀತೆ ಜಂಗ್ಲಿಯದು-

ಹಳೆ ಪಾತ್ರೆ, ಹಳೆ ಕಬ್ಬುಣ, ಹಳೆ ಪೇಪರ್...

ಕೊನೆಯ ಮಾತು: ಫೆಬ್ರುವರಿಯಲ್ಲಿ ಜಂಗ್ಲಿ ತೆರೆಕಾಣುತ್ತಿದ್ದಾನೆ.
ಪೂರಕ ಓದಿಗೆ
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್
ಮತ್ತೊಂದು ದುನಿಯಾದ ನಿರೀಕ್ಷೆಯಲ್ಲಿ ಸೂರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada