»   » ಭಜರಂಗಿ ಆಡಿಯೋ ವಿಮರ್ಶೆ: ಐದಕ್ಕೆ ನಾಲ್ಕು ಮಾರ್ಕ್

ಭಜರಂಗಿ ಆಡಿಯೋ ವಿಮರ್ಶೆ: ಐದಕ್ಕೆ ನಾಲ್ಕು ಮಾರ್ಕ್

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada
Rating:
4.0/5

ಇಂದಿಗೂ ಗೆಳೆಯ ಚಿತ್ರದ 'ಈ ಸಂಜೆ ಯಾಕಾಗಿದೆ' ಅಥವಾ ಬಿರುಗಾಳಿ ಚಿತ್ರದ 'ಮಧುರಾ ಪಿಸು ಮಾತಿಗೆ' ಹಾಡು ಟಿವಿಯಲ್ಲಿ ಬರುತ್ತಿದ್ದರೆ ಚಾನಲ್ ಬದಲಿಸಲು ಮನಸಾಗುವುದಿಲ್ಲ. ಆ ಹಾಡುಗಳನ್ನು ಕೊರಿಯೊಗ್ರಾಫರ್ ಹರ್ಷ ಚಿತ್ರಿಸಿರುವ ರೀತಿಯನ್ನು ಕನ್ನಡ ಪ್ರೇಕ್ಷಕ ಇನ್ನೂ ಮರೆತಿಲ್ಲ. ಅದೇ ಹರ್ಷ ನಿರ್ದೇಶನದಲ್ಲಿ ಬರುತ್ತಿರುವ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭಜರಂಗಿ.

ಇಂದಿಗೂ ಹೆಜ್ಜೆ ಹಾಕುವುದರಲ್ಲಿ ಮುಂದೇ ಇರುವ ಶಿವಣ್ಣ, ಕಿಕ್ ಕೊಡುವ ಗೀತೆಗಳನ್ನು ನೀಡುತ್ತಾ ಸಂಗೀತ ಪ್ರೇಮಿಗಳನ್ನು ವಾಲಾಡಿಸುತ್ತಿರುವ ಅರ್ಜುನ ಜನ್ಯರ ಸಂಗೀತ, ಹರ್ಷರ ಸಾರಥ್ಯವಿರುವ ಚಿತ್ರ ಎಂದರೆ ಆ ಚಿತ್ರದ ಬಗ್ಗೆ ನಿರೀಕ್ಷೆ ಇಲ್ಲದೆ ಇರುತ್ತದೆಯೇ?

'ಭಜರಂಗಿ' ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಕನ್ನಡದ ಅಗ್ರ ಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವತ್ತ ನಿಧಾನವಾಗಿ ಹೆಜ್ಜೆ ಇಡುತ್ತಿದ್ದ ಅರ್ಜುನ ಜನ್ಯ, ಈ ಚಿತ್ರದಿಂದ ಆ ದಿಕ್ಕಿನೆಡೆ ಬಲವಾದ ಹೆಜ್ಜೆ ಇಟ್ಟಿದ್ದಾರೆ ಎಂದೆನಿಸುತ್ತದೆ. ಸೋಮವಾರ (ನ 11) ಧ್ವನಿಸುರುಳಿ ಬಿಡುಗಡೆಯಾದ ಭಜರಂಗಿ ಚಿತ್ರದ ಹಾಡುಗಳು ಹೇಗಿವೆ? ಸ್ಲೈಡ್ ಪ್ಲೀಸ್..

ಬ್ಯಾನರ್: ಕೆ ಕೆ ಫಿಲಂಸ್
ನಿರ್ಮಾಪಕ: ನಟರಾಜ್ ಗೌಡ, ಮಂಜುನಾಥ ಗೌಡ
ಸಂಗೀತ: ಅರ್ಜುನ್ ಜನ್ಯ
ನಿರ್ದೇಶಕ: A ಹರ್ಷ
ತಾರಾಗಣದಲ್ಲಿ : ಶಿವರಾಜ್ ಕುಮಾರ್, ಐಂದ್ರಿತಾ ರೇ, ಊರ್ವಶಿ, ಶಿವರಾಂ, ಹರಿಣಿ, ಬುಲೆಟ್ ಪ್ರಕಾಶ್, ಹೊನ್ನವಳ್ಳಿ ಕೃಷ್ಣ

ಭಜರಂಗಿ ಗ್ಯಾಲರಿ

ಜೈ ಭಜರಂಗಿ

ಹಾಡಿರುವವರು: ಶಂಕರ್ ಮಹಾದೇವನ್
ಸಾಹಿತ್ಯ: ಡಾ. ನಾಗೇಂದ್ರ ಪ್ರಸಾದ್

ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಶಂಕರ್ ಮಹಾದೇವನ್ ಕಂಠ ಎಂದಾಗಲೇ ಒಬ್ಬ ಸಂಗೀತ ಕೇಳುಗನ ಮನದಲ್ಲಿ ಹಾಡಿನ ಕಲ್ಪನೆ ಖಂಡಿತವಾಗಿಯೂ ಮೂಡುತ್ತೆ. ಆ ಕಲ್ಪನೆಗೆ ಮೋಸವಾಗದಂತಹ ಗೀತೆ ಇದು. ಶಕ್ತಿಶಾಲಿ ಸಾಹಿತ್ಯಕ್ಕೆ ಅಷ್ಟೇ ಭಾವ ಪೂರ್ಣ ಹಾಗೂ ಸತ್ವಪೂರ್ಣ ಗಾಯನ ನೀಡಿದ್ದಾರೆ ಶಂಕರ್ ಮಹಾದೇವನ್. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಉತ್ತಮವಾಗಿದ್ದು ಹಿನ್ನಲೆಯಲ್ಲಿನ ಕೋರಸ್ ಸಹಾ ಮೆರಗು ತಂದಿದೆ.

ಜಿಯಾ ತೇರಿ

ಹಾಡಿರುವವರು : ಕಾರ್ತಿಕ್
ಸಾಹಿತ್ಯ: ಜಯಂತ್ ಕಾಯ್ಕಿಣಿ

ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಗೀತೆಯಲ್ಲಿ ಹಿಂದಿ ಹೇಗೆ ನುಸುಳಿತು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲೇ ಹಾಡು ಇಷ್ಟವಾಗುತ್ತದೆ. ನಿಸ್ಸಂದೇಹವಾಗಿ ಆಲ್ಬಂನ ಅತ್ಯುತ್ತಮ ಗೀತೆ. 'ನೋಟದ ಬಾಣವು ನಾಟಿದೆ ಆಗಲೇ' ಎಂಬ ಹಾಡಿನ ಸಾಲಿನಂತೆ ಸಂಗೀತ, ಕಾರ್ತಿಕರ ಗಾಯನ, ಕಾಯ್ಕಿಣಿಯವರ ಸಾಹಿತ್ಯ ಎಲ್ಲವೂ ಮನಸೂರೆಗೊಳ್ಳುತ್ತದೆ. ಮೊದಲೇ ಕೇಳಿದಂತೆ ಅನಿಸಿದರೂ ಉತ್ತಮವಾದ ವಾದ್ಯ ಸಂಯೋಜನೆ ಈ ಗೀತೆಗಿದೆ. ಕೋರಸ್ ಸಹ ಮನ ಗೆಲ್ಲುತ್ತದೆ.

ಬಾಸ್ ನಮ್ಮ ಬಾಸು

ಹಾಡಿರುವವರು: ಅರ್ಜುನ್ ಜನ್ಯ
ಸಾಹಿತ್ಯ : ಚೇತನ್, ಚಂದನ್, ಮೋಹನ್

ಅರ್ಜುನ್ ಜನ್ಯ ಸ್ವತ: ತಾವೇ ಹಾಡಿರುವ ಈ ಗೀತೆ ಇಂದಿನ ಚಿತ್ರಗಳಲ್ಲಿ ಮಾಮೂಲಿಯಾಗಿರುವ ನಾಯಕನ ಗುಣಗಾನದ ರೀತಿಯ ಗೀತೆ. 'ಇವ್ರು ಹೊಡೆದ್ಬುಟ್ರೆ ಒಂದೇಟು, ಬಿದ್ದಂಗೆ ಬುಲ್ಲೆಟ್ಟು, ಇವ್ರು ಸ್ಟೆಪ್ ಹಾಕಿದ್ ಮೇಲೇನೆ, ಹುಟ್ಟ್ ಕೊಂಡ್ತು ಎರೆಡೇಟು' ಎಂಬಂತ ಸಾಲುಗಳು ಈ ಹಾಡಿನಲ್ಲಿ ದಂಡಿಯಾಗಿ ಸಿಗುತ್ತದೆ. ಅರ್ಜುನ್ ಜನ್ಯರ ಸಂಗೀತದಲ್ಲಿ ಲವಲವಿಕೆ ಇದ್ದು, ತೆರೆಯ ಮೇಲೆ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಬಹುದೆಂಬ ಭರವಸೆ ನೀಡುತ್ತದೆ. ಕೇಳಿದೊಡನೆ ಕೈ ಕಾಲುಗಳು ತಾವೇ ತಾಳ ಹಾಕುವ ಹಾಡುಗಳ ಸಾಲಿಗೆ ಸೇರುವ ವೇಗದ ಧಾಟಿಯ ಹಾಡು.

ಶ್ರೀ ಕೃಷ್ಣ

ಹಾಡಿರುವವರು : ಅನುರಾಧ ಭಟ್
ಸಾಹಿತ್ಯ: ಡಾ. ನಾಗೇಂದ್ರ ಪ್ರಸಾದ್

ಇತ್ತೀಚಿನ ಚಿತ್ರಗಳಲ್ಲಿ ಒಂದು ಪರಿಪೂರ್ಣ ಭಕ್ತಿ ಗೀತೆ ಕೇಳಿ ತುಂಬಾ ಸಮಯವೇ ಆಗಿತ್ತು ಎಂಬ ಕೊರತೆಯನ್ನು ನೀಗಿಸುವಂತ ಗೀತೆ. ಇಂತಹ ಗೀತೆಗಳನ್ನು ಚಂದವಾಗಿ ಹಾಡುವ ಅನುರಾಧ ಭಟ್ಟರ ಕಂಠ ಸಿರಿಯಲ್ಲಿ ಮೂಡಿರುವ ಗೀತೆ ತನ್ನ ವಿಭಿನ್ನತೆಯಿಂದ ಇಷ್ಟವಾಗುತ್ತದೆ. ಅರ್ಜುನ್ ಜನ್ಯ ಈ ಗೀತೆಯ ಮೂಲಕ ಅಚ್ಚರಿ ಮೂಡಿಸುತ್ತಾರೆ. ನಾಗೇಂದ್ರ ಪ್ರಸಾದರಿಗೆ ಈ ರೀತಿಯ ಗೀತಾಸಾಹಿತ್ಯ ಕಷ್ಟವೇನಲ್ಲ. ಸಾಹಿತ್ಯ ನವಿರಾಗಿ, ಉತ್ತಮವಾಗಿದೆ.

ರೇ ರೇ ಭಜರಂಗಿ

ಹಾಡಿರುವವರು : ಕೈಲಾಶ್ ಖೇರ್
ಸಾಹಿತ್ಯ: ಕೆ ಕಲ್ಯಾಣ್

ಕಲ್ಯಾಣ್ ಸಾಹಿತ್ಯದ ಈ ಗೀತೆಗೆ ಕೈಲಾಶ್ ಖೇರ್ ಕಂಠದ ಮಾಂತ್ರಿಕ ಸ್ಪರ್ಷ ದೊರಕಿದೆ. ಕೈಲಾಶ್ ಇದನ್ನು ಅದೆಷ್ಟು ಸೊಗಸಾಗಿ ಹಾಡಿದ್ದಾರೆಂದರೆ ಉತ್ತಮವಾದ ವಾದ್ಯ ಸಂಯೋಜನೆ, ಸಂಗೀತ, ಸಾಹಿತ್ಯವೆಲ್ಲವೂ ತೆರೆಮರೆಯಲ್ಲಿ ನಿಂತು ಅವರ ಕಂಠಕ್ಕೆ ತಲೆದೂಗಿದಂತೆ ಅನಿಸುತ್ತದೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಬರುವಂತೆ ತೋರುವ ಈ ಗೀತೆ ತನ್ನಲ್ಲಿ ಚಿತ್ರದ ಕಥೆಯನ್ನು ಸಹಾ ಹೇಳುವಂತೆ ತೋರುತ್ತದೆ.

English summary
Audio review of Shivaraj Kumar starer Bajarangi. Harsha directing this movie and Arjun Janya composed the song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada