»   » ಓಂ ಪ್ರಕಾಶ್ ರಾವ್ ಗರಡಿಯಲ್ಲಿ ಕಿಶೋರ್ 'ಹುಲಿ'

ಓಂ ಪ್ರಕಾಶ್ ರಾವ್ ಗರಡಿಯಲ್ಲಿ ಕಿಶೋರ್ 'ಹುಲಿ'

Posted By:
Subscribe to Filmibeat Kannada

ಸಾಕಷ್ಟು ಚಿತ್ರಗಳ್ರಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿ ಚಿತ್ರರಸಿಕರ ಮನ ಗೆದ್ದಿರುವವರು ನಟ ಕಿಶೋರ್. ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಈ ನಟ 'ಹುಲಿ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗುತ್ತಿದ್ದಾರೆ. ಓಂಪ್ರಕಾಶ್ ರಾವ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರ ವಿಶಿಷ್ಟ ಕಥಾವಸ್ತು ಹೊಂದಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಸುದೀಪ್ ನಟಿಸಿದ್ದ 'ಹುಚ್ಚ' ಚಿತ್ರ ಹಿಟ್ ಆಗಿದ್ದು ಎಲ್ಲರಿಗೂ ತಿಳಿದ ಸಂಗತಿ. ದರ್ಶನ್ ಅವರಿಗಾಗಿ ರಾವ್ ಅವರು ನಿರ್ದೇಶಿಸಿದ 'ಕಲಾಸಿಪಾಳ್ಯ' ಚಿತ್ರ ಕೂಡ ಯಶಸ್ಸಿನ ಮೆಟ್ಟಿಲೇರಿತು. ಈಗ 'ಹುಲಿ' ಚಿತ್ರ ಕಿಶೊರ್ ಅವರಿಗೆ ಜಯ ತಂದು ಕೊಡುವುದು ಖಂಡಿತಾ ಎನ್ನುತ್ತಾರೆ ನಿರ್ಮಾಪಕ ರಮೇಶ್ ಕಶ್ಯಪ್.

ಹಿಂದೆ 'ನಂದಾ ಲವ್ಸ್ ನಂದಿತಾ' ಹಾಗೂ 'ಭಾಗ್ಯದ ಬಳೆಗಾರ' ಚಿತ್ರಗಳನ್ನು ಸಿಂಹಾದ್ರಿ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿರುವ ರಮೇಶ್ ಅವರ ಮೂರನೇ ಕಾಣಿಕೆ 'ಹುಲಿ'. ಈ ಸಂಸ್ಥೆಯ ನಿರ್ಮಾಣದ 'ನಂದಾ ಲವ್ಸ್ ನಂದಿತಾ' ಚಿತ್ರದಲ್ಲಿ 'ದುನಿಯಾ' ಖ್ಯಾತಿಯ ಯೋಗೀಶ್ ನಾಯಕನಾಗಿ ಅಭಿನಯಿಸಿ ಜನಮನ್ನಣೆ ಪಡೆದರು. ಪ್ರತಿಭಾವಂತ ನಟರನ್ನು ತಮ್ಮ ಸಂಸ್ಥೆಯ ಮೂಲಕ ಪರಿಚಯಿಸುವ ಇರಾದೆ ನಿರ್ಮಾಪಕರಿಗಿದೆ.

ಫೆಬ್ರವರಿ 25ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಅದರ ಸುತ್ತಮುತ್ತ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಮನೋಹರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಡೆನ್ನಿಸ್ ಪ್ರಕಾಶ್ ಕಥೆ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ಅವರ ಸಹನಿರ್ಮಾಣವಿರುವ ಚಿತ್ರದ ತಾರಾಬಳಗದಲ್ಲಿ ಕಿಶೋರ್, ಡಾಲಿ, ತೇಜಸ್ವಿನಿ, ರಂಗಾಯಣರಘು, ಸ್ವಸ್ತಿಕ್ ಶಂಕರ್, ಶೋಭ್‌ರಾಜ್, ಸಾಧುಕೋಕಿಲಾ, ಬುಲೆಟ್‌ಪ್ರಕಾಶ್, ಚಿತ್ರಾಶೆಣೈ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada