»   »  ಮಂಜುನಾಥ ಏಳುತ್ತಿದ್ದಾನೆ ಬೆಡ್ ಕಾಫಿ ರೆಡಿ ಮಾಡಿ!

ಮಂಜುನಾಥ ಏಳುತ್ತಿದ್ದಾನೆ ಬೆಡ್ ಕಾಫಿ ರೆಡಿ ಮಾಡಿ!

Subscribe to Filmibeat Kannada
ಸರ್ವಜ್ಞ ಮತ್ತೊಮ್ಮೆ ಹುಟ್ಟಿಬಾ, ರಾಜಣ್ಣ ಮತ್ತೊಮ್ಮೆ ಹುಟ್ಟಿಬಾ ಎಂದು ಅವರವರ ಅಭಿಮಾನಿಗಳು ಆರ್ದ್ರತೆಯಿಂದ ಕರೆಯುವುದನ್ನು ನೀವು ಆಗಾಗ ಅಲ್ಲಲ್ಲಿ ಕೇಳಿರಬಹುದು. ಓದಿರಬಹುದು. ಕನ್ನಡದ ಅಣ್ಣ ಮತ್ತೊಮ್ಮೆ ಹುಟ್ಟಿಬಂದರೂ ಬರಬಹುದು ಆದರೆ ಗಾಢ ನಿದ್ರೆಗೆ ಜಾರಿರುವ ಜಗ್ಗೇಶ್ ಮಾತ್ರ ಈ ಜನ್ಮದಲ್ಲಿ ಎದ್ದೇಳುವ ಸೂಚನೆಗಳಿಲ್ಲ ಎಂಬ ಚಟಾಕಿ ಗಾಂಧಿನಗರದಲ್ಲಿ ಮನೆಮಾತಾಗಿತ್ತು.

ಎಲ್ಲ ಸತ್ಯಗಳನ್ನು ಸುಳ್ಳು ಮಾಡುವ ಅಥವಾ ಎಲ್ಲ ಸುಳ್ಳುಗಳನ್ನು ಸತ್ಯಮಾಡುವ ಸುದ್ದಿ ಇದೀಗ ಗಾಂಧಿನಗರದಿಂದ ಅಲೆಅಲೆಯಾಗಿ ತೇಲಿ ಬರುತ್ತಿದೆ. ಹೌದು, ಎದ್ದೇಳು ಮಂಜುನಾಥ ಎದ್ದು ಬರುತ್ತಿದ್ದಾನಂತೆ. ಕನ್ನಡಪ್ರಭ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ಕಳೆದ ಶುಕ್ರವಾರ ಕಾಣಿಸಿಕೊಂಡ ಒಂದು ಜಾಹೀರಾತು ನೆನೆಪಿಸಿಕೊಳ್ಳುವುದಾದರೆ;

"17/07/09ನೇ ತಾರೀಖು ಎಲ್ಲಾ ಲೆಕ್ಕಾಚಾರಗಳಿಂದ ಸರಿ ಇದೆ ಅಂತ ಅಂದ್ಕೊಂಡಿದೀನಿ. ಅವತ್ತು ಎದ್ದೇಳೋದು ಗ್ಯಾರಂಟಿ". ವಿಶಾಲ ಕರ್ನಾಟಕದ ಹಂಚಿಕೆದಾರರು ಜಯಣ್ಣ ಫಿಲಂಸ್!

ನವರಸ ನಾಯಕ ಜಗ್ಗೇಶ್ ಅವರ ವೃತ್ತಿ ಜೀವನದ 25ನೇ ವರ್ಷಕ್ಕೆ ವಿಶೇಷ ಚಿತ್ರ ಎಂದು ಬಿಂಬಿತವಾಗಿರುವ ಎದ್ದೇಳು ಮಂಜುನಾಥ ಚಿತ್ರೀಕರಣ ಆರಂಭವಾಗಿ ಸರಿಸುಮಾರು ಒಂದೂವರೆ ವರ್ಷಗಳೇ ಕಳೆದಿದೆ. ಜತೆಗೆ, ಇತ್ತೀಚೆಗೆ ತೆರೆಕಂಡಿರುವ ಜಗ್ಗೇಶ್ ಅಭಿನಯದ ಹಲವಾರು ಚಿತ್ರಗಳು ಜನಪ್ರಿಯತೆ ಗಳಿಸುವಲ್ಲಿ ಅಥವಾ ನಿರ್ಮಾಪಕನ ಜೇಬು ತುಂಬುವಲ್ಲಿ ಅಸಮರ್ಥವಾಗಿವೆ. ಈ ಹಿನ್ನೆಲೆಯಲ್ಲಿ ಎದ್ದೇಳು ಚಿತ್ರ ಏನಾಗುವುದೋ ಆ ಮಂಜುನಾಥ ಸ್ವಾಮಿಗೇ ಗೊತ್ತು ಎಂದರೆ ಅಪಾರ ಭರವಸೆ ಇಟ್ಟುಕೊಂಡಿರುವ ಜಗ್ಗೇಶ್ ಮತ್ತು ಚಿತ್ರ ನಿಮ್ರಾಣ ತಂಡಕ್ಕೆ ಒಂದು ಕ್ಷಣ ಮೈ ಝುಂ ಎನ್ನಬಹುದು.

ಎದ್ದೇಳು ಮಂಜುನಾಥ ಚಿತ್ರದ ಕೆಲವು ದೃಶ್ಯಾವಳಿಗಳನ್ನು ಖುದ್ದು ಕಾಣಲು ಇಲ್ಲಿ ಕ್ಲಿಕ್ ಮಾಡಿ. ಅಂದಹಾಗೆ ಇದು ಮಠ ನಿರ್ದೇಶಕ ಗುರುಪ್ರಸಾದ್ ಅವರ ಎರಡನೇ ಚಿತ್ರ ಹಾಗೂ ಈ ವರ್ಷ ತೆರೆಕಾಣುತ್ತಿರುವ ರಿಮೇಕ್ ಚಿತ್ರಗಳ ಅಬ್ಬರದಲ್ಲಿ ಜಗ್ಗೇಶ್ ಅವರಿಗೋಸ್ಕರ ವಿ. ಸನತ್ ಕುಮಾರ್ ಮತ್ತು ಬಳಗದವರು ನಿರ್ಮಿಸಿರುವ ಚೊಚ್ಚಲ ಸ್ವಮೇಕ್ ಚಿತ್ರ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada