»   »  ಚಿತ್ರಸಾಹಿತಿ ವಿ ನಾಗೇಂದ್ರಪ್ರಸಾದ್ ಸಂದರ್ಶನ

ಚಿತ್ರಸಾಹಿತಿ ವಿ ನಾಗೇಂದ್ರಪ್ರಸಾದ್ ಸಂದರ್ಶನ

Posted By:
Subscribe to Filmibeat Kannada

ರಾಜೇಂದ್ರ ಚಿಂತಾಮಣಿ

ಅಖಿಲಂ ನಿಖಿಲಂ (ವಂಶಿ), ಮೋಡದ ಒಳಗೆ (ಪಯಣ), ಪ್ರೀತ್ಸೆ ಅಂತ ಪ್ರಾಣ ತಿನ್ನೋ (ಎಕ್ಸ್ ಕ್ಯೂಸ್ ಮಿ ), ಕರಿಯಾ ಐ ಲವ್ ಯು (ದುನಿಯಾ)... ಕೆಂಚಾಲೊ ಮಂಚಾಲೊ (ಕರಿಯಾ) ನಂತಹ ಜನಪ್ರಿಯ ಹಾಡುಗಳನ್ನು ಬರೆದ ನಟ, ಚಿತ್ರ ಸಾಹಿತಿ, ನಿರ್ದೇಶಕ ದಟ್ಸ್ ಕನ್ನಡ ಕಚೇರಿಗೆ ಆಗಮಿಸಿದ್ದರು. ಅವರಿಗೆ ಹೂಗುಚ್ಛದ ಮೂಲಕ ಸ್ವಾಗತ ಕೋರಿ, ನಮ್ಮ ಕಚೇರಿಯ ದುಂಡು ಮೇಜಿನ ಕೊಠಡಿಗೆ ಕರೆತರಲಾಯಿತು. ಭುಜಕ್ಕೆ ತಾಕುತ್ತಿದ್ದ ಕೂದಲು, ಅವರ ಕಂಠಾಭರಣಗಳು, ವೇಷ ಭೂಷಣ ಎಲ್ಲವನ್ನೂ ತದೇಕಚಿತ್ತದಿಂದ ನೋಡುತ್ತಾ ಮಾತಿಗೆ ಶುರು ಹಚ್ಚಿಕೊಂಡೆವು.


ಚಿತ್ರರಂಗದ ಕಡೆಗೆ ಸೆಳೆತ ಹೇಗೆ?

ನಾನು ಮೈಸೂರಿನಲ್ಲಿ ಎಂ.ಎ(ಕನ್ನಡ) ಓದುತ್ತಿರುವಾಗಲೇ ಚಿತ್ರರಂಗದ ಕಡೆಗೆ ಸೆಳೆತ ಇತ್ತು. ಮೊದಲು ಚಿತ್ರಸಾಹಿತಿಯಾಗಿ ಚಿತ್ರರಂಗಕ್ಕೆ ಬಂದೆ. ನಂತರ ಸಂಭಾಷಣೆ ಬರೆದೆ, ಈಗ ನಿರ್ದೇಶಕನಾಗಿದ್ದೇನೆ.

ನೀವು ಚಿತ್ರರಂಗಕ್ಕೆ ಬರಲು ನಿಮ್ಮ ಮನೆಯಲ್ಲಿ ಬೆಂಬಲ ಇತ್ತಾ?
ಆರಂಭದಲ್ಲಿ ಇರಲಿಲ್ಲ. ನಂತರ ನನ್ನ ಒಂದೊಂದೇ ಚಿತ್ರಗಳು ಯಶಸ್ವಿಯಾಗುತ್ತಿದ್ದಂತೆ ಬೆನ್ನುತಟ್ಟಲು ಪ್ರಾರಂಭಿಸಿದರು.

ವೃತ್ತಿಯಲ್ಲಿ ನೀವು ಆಯುರ್ವೇದ ವೈದ್ಯರಂತೆ?
ಹೌದು ಈ ವೃತ್ತಿ ನಮ್ಮ ಕುಟುಂಬಕ್ಕೆ ತಲೆತಲಾಂತರದಿಂದ ಹರಿದು ಬಂದಿದೆ. ಹಾಗಾಗಿ ನಾನು ಅದನ್ನು ಮುಂದುವರಿಸುತ್ತಿದ್ದೆ. ಈಗ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದರಿಂದ ಆಯುರ್ವೇದದ ಕಡೆ ಗಮನ ಕೊಡಲು ಆಗುತ್ತಿಲ್ಲ

ಟ್ಯೂನ್ ಚೆನ್ನಾಗಿದ್ದರೆ ಸಾಹಿತ್ಯ ಚೆನ್ನಾಗಿರಲ್ಲ. ಸಾಹಿತ್ಯ ಚೆನ್ನಾಗಿದ್ದರೆ ಟ್ಯೂನ್ ಹೊಂದಾಣಿಕೆಯಾಗಲ್ಲ ಹೀಗ್ಯಾಕೆ?

ನೋಡಿ ಸಾಹಿತ್ಯ ಮತ್ತು ಸಂಗೀತ ಅನ್ನುವುದು ಗಂಡ ಹೆಂಡತಿ ಇದ್ದಂತೆ. ಸಾಹಿತ್ಯ ಗಂಡನಾದರೆ ಸಂಗೀತ ಹೆಂಡತಿ ಇದ್ದಂತೆ. ಎರಡು ಹೊಂದಾಣಿಕೆಯಾದರೇನೆ ಉತ್ತಮ ಹಾಡು ಸಾಧ್ಯ.

ರೀಮೇಕ್ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ರೀಮೇಕ್ ಚಿತ್ರವನ್ನು ಮಾಡೋದಿಲ್ಲ. ರೀಮೇಕ್ ಚಿತ್ರಗಳಲ್ಲಿ ನಾನು ಬರೆದ ಹಾಡುಗಳೂ ಸ್ವಂತಿಕೆಯಿಂದ ಕೂಡಿವೆ. ರೀಮೇಕ್ ಮಾಡುವರು ಮಾಡುತ್ತಾರೆ. ಅದು ಅವರವರ ಪ್ರಿನ್ಸಿಪಲ್.

'ಕರಿಯ' ಚಿತ್ರದ 'ಕೆಂಚಾಲೊ ಮಂಚಾಲೋ...' ಹಾಡಿನ ವಿವಾದ?

ಆ ಹಾಡನ್ನು ಬರೆದದ್ದು ನಾನೇ. ಆದರೆ ಹಾಡಿನ ಮೊದಲ ಪದ 'ಕೆಂಚಾಲೊ' ಸೇರಿಸಿದ್ದು ಮಾತ್ರ ಪ್ರೇಮ್.

ನಲ್ಲ ನಂತರ ಸಾಕಷ್ಟು ಗ್ಯಾಪ್ ಬಂತಲ್ಲ?

'ಶಂಕರನಾಗ್ ಸರ್ಕಲ್' ಎಂಬ ಅತಿದೊಡ್ಡ ಪ್ರಾಜೆಕ್ಟ್ ಕೈಗೊಂಡಿದ್ದೆ. ಕಾರಣಾಂತರಗಳಿಂದ ಆ ಚಿತ್ರವನ್ನು ಕೈಬಿಡಬೇಕಾಯಿತು. ಆ ಪ್ರಾಜೆಕ್ಟ್ ಕಾರಣ ಒಂದು ವರ್ಷ ಕಳೆದುಹೋಯಿತು. ಹಾಗಾಗಿ ಈ ಗ್ಯಾಪ್.

ಮೇಘವೇ ಮೇಘವೇ ಬಿಡುಗಡೆಗೆ ಸಹ ತಡವಾಯಿತಲ್ಲ ಯಾಕೆ?

ನೇಪಾಳದಲ್ಲಿ ಬಹುಭಾಗ ಚಿತ್ರೀಕರಣವಾಗಬೇಕಿತ್ತು. ಆದರೆ ಅಲ್ಲಿನ ರಾಜಕೀಯ ಅಸ್ಥಿರತೆ ನಮ್ಮ ಚಿತ್ರೀಕರಣದ ಮೇಲೆ ಪ್ರಭಾವ ಬೀರಿತು. ಈ ಕಾರಣಕ್ಕೆ ಮೇಘವೇ ಮೇಘವೇ ಚಿತ್ರ ತಡವಾಯಿತು.

ಹೊಸ ಚಿತ್ರ ಸಾಹಿತಿಗಳು ಸಾಕಷ್ಟು ಮಂದಿ ಬರುತ್ತಿದ್ದಾರಲ್ಲ? ನಿಮ್ಮಲ್ಲಿ ಸ್ಪರ್ಧೆ ಇದೆ ಅನ್ನಿಸುವುದಿಲ್ಲವೇ?

ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಸಾಕಷ್ಟು ಹೆಚ್ಚುತ್ತಿದೆ. ಹಾಗಾಗಿ ಇಲ್ಲಿ ಸ್ಪರ್ಧೆಯೇ ಇಲ್ಲ. ಆರಂಭದಲ್ಲಿ ಹಂಸಲೇಖ ಇದ್ದರು. ಈಗ ನಾನು, ಕವಿರಾಜ್ ತರಹದವರು ಬಂದಿದ್ದೇವೆ. ನಾವೆಲ್ಲಾ ಹೊಸ ತಲೆಮಾರಿನ ಚಿತ್ರಸಾಹಿತಿಗಳು. ನಮ್ಮಲ್ಲಿ ಸ್ಪರ್ಧೆ ಎಂಬುದೇ ಇಲ್ಲ. ಇಲ್ಲಿ ಎಲ್ಲರಲ್ಲೂ ಸ್ನೇಹ ಮನೋಭಾವವಿದೆ.

ನಿಮ್ಮ ಮುಂದಿನ ಚಿತ್ರ?
ಶಿವರಾಜ್ ಕುಮಾರ್ ಅವರೊಂದಿಗೆ. ಚಿತ್ರದ ಹೆಸರು ಪುಣ್ಯವಂತ, ಸನ್ ಆಫ್ ಭಾಗ್ಯವಂತ ಎಂದು. ಸದ್ಯದಲ್ಲೇ ಸೆಟ್ಟೇರಲಿದೆ.

ಗ್ಯಾಲರಿ: ದಟ್ಸ್ ಕನ್ನಡ ಕಚೇರಿಯಲ್ಲಿ ವಿ.ನಾಗೇಂದ್ರ ಪ್ರಸಾದ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada