For Quick Alerts
  ALLOW NOTIFICATIONS  
  For Daily Alerts

  ತಮಿಳಿಗೆ ಹೋಗಲು ಕಾರಣ ವಿಷ್ಣು: ರಜನಿಕಾಂತ್

  By *ರಾಜೇಂದ್ರ ಚಿಂತಾಮಣಿ
  |

  ''ವಿಷ್ಣು ಜೊತೆ ಸ್ನೇಹ ಬೆಳೆಸಿದವರಿಗೆ ಮಾತ್ರ ಸ್ನೇಹ ಎಂದರೇನು ಎಂದು ಗೊತ್ತಾಗುತ್ತದೆ.ನನ್ನ ಮತ್ತು ವಿಷ್ಣು ಸ್ನೇಹ ಸಂಬಂಧ 32 ವರ್ಷಗಳಷ್ಟು ಹಳೆಯದು. ನನಗೆ ಅಣ್ಣನಂತೆ ಪ್ರೋತ್ಸಾಹ ನೀಡಿದ ನಟ. ವಿಷ್ಣು ಅವರ ಸಾವಿನ ಸುದ್ದಿ ನಂಬಲಿಕ್ಕೆ ಆಗುತ್ತಿಲ್ಲ'' ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ ಬೆಂಗಳೂರಿನಲ್ಲಿ ಹೇಳಿದರು.

  ಬೆಂಗಳೂರಿನ ಜಯನಗರದ ವಿಷ್ಣುವರ್ಧನ್ ಅವರ ಮನೆಗೆ ಬುಧವಾರ ಭೇಟಿ ನೀಡಿದ ರಜನಿಕಾಂತ್ ದಂಪಂತಿಗಳು ಭಾರತಿ ಅವರೊಂದಿಗೆ ಸಾಂತ್ವನದ ಮಾತುಗಳನ್ನು ಆಡಿದರು. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಷ್ಣು ಮತ್ತು ಅವರ ಸಂಬಂಧವನ್ನು ನೆನೆದು ಕ್ಷಣಕಾಲ ಮೂಕವಾದರು.

  ರಜನಿಕಾಂತ್ ಮಾತನಾಡುತ್ತಾ, 'ಸಹೋದರರ ಸವಾಲ್', 'ಗಲಾಟೆ ಸಂಸಾರ' ಚಿತ್ರದಲ್ಲಿ ನಾವಿಬ್ಬರೂ ನಟಿಸಿದ್ದೇವು. ನಾನಾಗ ಚಿತ್ರರಂಗಕ್ಕೆ ಹೊಸಬ. ಆಗ ವಿಷ್ಣು ಸೂಪರ್ ಸ್ಟಾರ್ ಆಗಿದ್ದರು. ನನಗೆ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಏಕಕಾಲಕ್ಕೆ ಅವಕಾಶ ಬಂದಿತ್ತು. ಯಾವ ಚಿತ್ರರಂಗವನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲಕ್ಕೆ ಸಿಲುಕಿದ್ದೆ. ಆಗ ತಮಿಳು ಚಿತ್ರರಂಗಕ್ಕೆ ಹೋಗು ಎಂದು ಸಲಹೆ ನೀಡಿದರು ವಿಷ್ಣು ಎಂದು ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾದರು ರಜನಿಕಾಂತ್.

  ನಮ್ಮ ಹುಡುಗ ಬೇರೆ ಭಾಷೆಯಲ್ಲಿ ಸಾಧನೆ ಮಾಡಿದರೆ ನಮಗೆ ಹೆಮ್ಮೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ವಿಷ್ಣು. ಅಲ್ಲಿ ಹೋಗಿ ನೀನು ಸಾಧನೆ ಮಾಡು ಎಂದು ಸಲಹೆ ಕೊಟ್ಟ ಗೆಳೆಯನನ್ನು ಹೇಗೆ ಮರೆಯಲಸಾಧ್ಯ. ವಿಷ್ಣು ಆಧ್ಯಾತ್ಮಿಕವಾಗಿಯೂ ಉನ್ನತ ಸ್ಥಾನಕ್ಕೆ ಬೆಳೆದಿದ್ದ ಎಂದರು. 'ಆಪ್ತರಕ್ಷಕ'ಚಿತ್ರ ತುಂಬ ಚೆನ್ನಾಗಿದೆ. ಅದನ್ನು ನೀನೇ ಮಾಡಬೇಕು ಎಂದು ಎರಡು ತಿಂಗಳ ಹಿಂದಷ್ಟೆ ಹೇಳಿದ್ದ. ಆಪ್ತರಕ್ಷಕ ಚಿತ್ರವನ್ನು ನಾವಿಬ್ಬರೂ ನೋಡೋಣ ಎಂದು ವಿಷ್ಣು ಹೇಳಿದ್ದನ್ನು ರಜನಿಕಾಂತ್ ನೆನೆದರು.

  ವಿಷ್ಣು ನಿಧನರಾದ ದಿನವೇ ಬರಬೇಕು ಎಂದುಕೊಂಡಿದ್ದೆ. ಆದರೆ ಜನಜಂಗುಳಿ ವಿಪರೀತವಾಗಿದ್ದ ಕಾರಣ ಸಾಧ್ಯವಾಗಲಿಲ್ಲ. ವಿಷ್ಣು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿ ಮಾತು ಮುಗಿಸಿದರು ರಜನಿಕಾಂತ್. ಈ ಸಂದರ್ಭದಲ್ಲಿ ನಟ ಅಂಬರೀಶ್, ಅನಿರುದ್ಧ, ರಾಕ್ ಲೈನ್ ವೆಂಕಟೇಶ್, ನಿರ್ಮಾಪಕ ಕೆ ಮಂಜು ಉಪಸ್ಥಿತರಿದ್ದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X