»   »  ಗುರು ಪ್ರಸಾದ್ ನಿರ್ದೇಶನದಲ್ಲಿ ಕೋಮಲ್!

ಗುರು ಪ್ರಸಾದ್ ನಿರ್ದೇಶನದಲ್ಲಿ ಕೋಮಲ್!

Subscribe to Filmibeat Kannada

'ಎದ್ದೇಳು ಮಂಜುನಾಥಾ' ಚಿತ್ರದ ಯಶಸ್ಸಿನ ರೂವಾರಿಗಳಾದ ಗುರುಪ್ರಸಾದೂ ಹಾಗೂ ಜಗ್ಗೇಶೂ 'ಟೂ'ಬಿಟ್ಟುಕೊಂಡು ಮುಖ ತಿರುಗಿಸಿಕೊಂಡಿದ್ದಾರೆ. 'ಸಾಕು ಜಗ್ಗೇಶ್ ಸಹವಾಸ' ಎನ್ನೋದು ಗುರು ಉವಾಚ. 'ನಾನು ನಿರ್ದೇಶನ ಮಾಡಿ ತೋರಿಸ್ತೀನಿ' ಎನ್ನೋದು ಜಗ್ಗೇಶ್ ಮಾರ್ಮಿಕ ಮಾತು.

ಈ ಕೋಳಿಜಗಳದಲ್ಲಿ ಅನ್ಯಾಯವಾಗಿ ಒಂದು ಯಶಸ್ವಿ ಜೋಡಿ ಕನ್ನಡ ಚಿತ್ರರಂಗಕ್ಕೆ ತಪ್ಪಿಹೋಯಿತಲ್ಲ ಎಂದು ಕೆಲವರು ಅಲವತ್ತುಕೊಳ್ಳುವ ಹೊತ್ತಿಗೇ ಗುರು ಹೊಸ ಕಾಂಬಿನೇಷನ್ ಕಂಡುಕೊಂಡಿರುವ ಸುದ್ದಿ ಗಾಂಧಿನಗರದಿಂದ ಹೊರಬಿದ್ದಿದೆ.

ಅಣ್ಣನ ಹಂಗಿಲ್ಲದೆ ಹೋದರೆ ಏನಾಯಿತು, ತಮ್ಮ ಜೊತೆಗಿದ್ದರೆ ಸಾಕು ಎಂದು ಕೋಮಲ್ ನಾಯಕತ್ವದಲ್ಲಿ ಗುರುಪ್ರಸಾದ್ ಸಿನಿಮಾ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ. ಕೋಮಲ್‌ಗೆ ಕೂಡ ಗುರುಕಥೆ ಇಷ್ಟವಾಗಿದೆ. ಹೊಸ ಸಿನಿಮಾ ಯಾವುದು, ಯಾವಾಗ ಸೆಟ್ಟೇರುತ್ತೆ ಎನ್ನೋದು ಇನ್ನೂ ಹೊರಬೀಳಬೇಕಾಗಿದೆ. ನಿರ್ಮಾಪಕರು ಕೂಡ ಗುಟ್ಟು ಗುಟ್ಟು! ಚಿತ್ರದ ವಿವರಗಳನ್ನು ನಿರ್ಮಾಪಕರು ಸದ್ಯದಲ್ಲೇ ಬಹಿರಂಗಪಡಿಸುತ್ತಾರಂತೆ. ಸದ್ಯಕ್ಕೆ ನೀವಿಬ್ಬರೂ ಸುಮ್ಮನಿರಿ ಎಂದು ಕೋಮಲ್-ಗುರೂಗೆ ನಿರ್ಮಾಪಕರು ಸೂಚಿಸಿದ್ದಾರಂತೆ.

ಆ ವಿಷಯ ಬಿಡಿ. ಇತ್ತ ಚಮ್ಕಾಯ್ಸಿ ಬಗ್ಗೆ ನೋಡಿ. ಗರಗಸದಂತೆ ಚಮ್ಕಾಯ್ಸಿ ಚಿತ್ರಮಂದಿರಗಳಲ್ಲಿ ಕಚ್ಚಿಕೊಳ್ಳದಿದ್ದರೂ ಬಂಡವಾಳಕ್ಕೆ ಮೋಸವಾಗಿಲ್ಲ. ಸ್ಯಾಟಲೈಟ್ ಹಕ್ಕುಗಳಿಂದಲೇ ಅಂದಾಜು ಎಪ್ಪತ್ತು ಲಕ್ಷ ರೂಪಾಯಿಗಳನ್ನು ಚಮ್ಕಾಯ್ಸಿ ಸಂಪಾದಿಸಿದೆಯಂತೆ. ಹಾಗಾಗಿ ಕೋಮಲ್ ಬೇಡಿಕೆ ಮುಂದುವರಿದಿದೆ! ಸದ್ಯ, 'ಅಪ್ಪು- ಪಪ್ಪು" ಚಿತ್ರದ ಪ್ರಮುಖ ಪಾತ್ರದಲ್ಲಿ ಕೋಮಲ್ ಅಭಿನಯಿಸುತ್ತಿದ್ದಾರೆ. 'ಅಲಕ್ ನಿರಂಜನ್" ಎಂಬ ಮತ್ತೊಂದು ಚಿತ್ರವೂ ಅವರ ಕೈಯಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada