twitter
    For Quick Alerts
    ALLOW NOTIFICATIONS  
    For Daily Alerts

    ದಿಢೀರಂತ ಹೋಗುವಂತಹದ್ದೇನಾಗಿತ್ತು ಮುರಳಿಗೆ

    By * ಉದಯರವಿ
    |

    ಬಹುಭಾಷಾ ನಟ ಮುರಳಿ ಇಷ್ಟು ಬೇಗ ಕಣ್ಮರೆಯಾಗುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಅವರದು ದಿಢೀರಂತ ಹೋಗುವ ವಯಸ್ಸು ಅಲ್ಲ. ಆದರೆ ಆ ಜವರಾಯ ಅವರನ್ನು ತನ್ನ ಬಳಿಗೆ ಬಹುಬೇಗ ಕರೆದುಕೊಂಡು ಬಿಟ್ಟಿದ್ದಾನೆ. ಈಗ ಉಳಿದಿರುವುದು ಅವರು ನೆನಪುಗಳು ಮಾತ್ರ.

    ಸುದೀರ್ಘ ಸಮಯದ ಬಳಿಕ ಮುರಳಿ ತಮಿಳು ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದರು. ಆ ಚಿತ್ರದ ಹೆಸರು 'ಏನ್ ರಾಸಿ ನಲ್ಲ ರಾಸಿ'(ನನ್ನ ರಾಶಿ ಒಳ್ಳೆ ರಾಶಿ). ಆದರೆ ಈ ಶೀರ್ಷಿಕೆಗೆ ಅಪವಾದವೆಂಬಂತೆ ಅವರು ಅಸ್ತಂಗತರಾಗಿದ್ದಾರೆ. ಅವರು ಹುಟ್ಟಿದ್ದು ಮೇ19, 1964ರಲ್ಲಿ.

    ಮೂಲಗಲ ಪ್ರಕಾರ ಮುರಳಿ ಅವರ ಆರೋಗ್ಯ ದಿಢೀರಂತ ಕೈಕೊಟ್ಟಿತು. ಚೆನ್ನ್ನೈನ ಹೊರವಲಯದಲ್ಲಿರುವ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದರು. ಇತ್ತೀಚೆಗಷ್ಟೆ ಅವರು ರಜನಿಕಾಂತ್ ಪುತ್ರಿ ಸೌಂದರ್ಯ ಅವರ ಮದುವೆಯಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಶುಭ ಹಾರೈಸಿದ್ದರು.

    ಮುರಳಿ ಹೆಚ್ಚಾಗಿ ಗುರುತಿಸಿಕೊಂಡಿದ್ದು ತಮಿಳಿನ ಸಾಮಾಜಿಕ ಅಂಶಗಳುಳ್ಳ ಚಿತ್ರಗಳಲ್ಲಿ. ಅವರ ಮೈಕಟ್ಟು, ಮೈ ಬಣ್ಣ ತಮಿಳು ಚಿತ್ರರಂಗಕ್ಕೆ ಹೇಳಿ ಮಾಡಿಸಿದಂತಿತ್ತು. ಅವರು ಅಲ್ಲೇ ಉತ್ತಮ ಹೆಸರು ಮಾಡಿದ್ದರು. ತಮಿಳಿನ 'ಪೂವಿಳಂಗು' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟಿದ್ದರು . ಈ ಚಿತ್ರದಲ್ಲಿ ರಜನಿಕಾಂತ್, ಕಮಲ ಹಾಸನ್, ವಿಜಯಕಾಂತ್ ನಟಿಸಿದ್ದರು. ಈ ಚಿತ್ರ ಅವರ ವೃತ್ತಿ ಬದುಕಿನಲ್ಲಿ ಉತ್ತಮ ಬ್ರೇಕ್ ನೀಡಿತು.

    ಬಳಿಕ ಅವರು ನಟಿಸಿದ 'ಪೋರ್ ಕಾಲಂ' ಚಿತ್ರ ಅವರ ವೃತ್ತಿ ಜೀವನದಲ್ಲಿ ಹೊಸ ತಿರುವಿಗೆ ಕಾರಣವಾಯಿತು. ಅದಾದ ಬಳಿಕ ಅವರು ಚಿತ್ರದ ಆಯ್ಕೆಯಲ್ಲಿ ಬಹಳಷ್ಟು ಚೂಸಿಯಾದರು. ಮುರಳಿ ಅವರ ಮಗ ಅಥರ್ವ ಅವರನ್ನು 'ಬನ ಕಥಾಡಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಿದರು.

    ಆಗಸ್ಟ್ 4ರಂದು ಬೆಂಗಳೂರಿಗೆ ಬಂದಿದ್ದ ಅವರು ತಮ್ಮ ಮಗನನ್ನು ಕನ್ನಡ ಚಿತ್ರ ಮಾಧ್ಯಮಕ್ಕೆ ಪರಿಚಯಿಸಿದ್ದರು. ತಂದೆ ಸಿದ್ದಲಿಂಗಯ್ಯ ಅವರೊಂದಿಗೆ ಕುಳಿತು ತಮ್ಮ ಹಳೆಯ ನೆನಪುಗಳನ್ನು ಒಂದೊಂದಾಗಿ ಪತ್ರಕರ್ತರ ಜೊತೆಗೆ ಹಂಚಿಕೊಂಡಿದ್ದರು. ಇದೇ ಅಕ್ಟೋಬರ್ ತಿಂಗಳಿಗೆ ಪುನಃ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವುದಾಗಿ ಪ್ರಕಟಿಸಿದ್ದರು. ಆದರೆ ಆ ವಿಧಿ ಅವರ ಆಸೆಗಳನ್ನು ಈಡೇರಲು ಬಿಡಲಿಲ್ಲ.

    ತಮ್ಮ ಪುತ್ರ ಅಥರ್ವ ಅವರನ್ನು ಕನ್ನಡ ಬೆಳ್ಳಿತೆರೆಗೆ ಪರಿಚಯಿಸುತ್ತಿರುವುದಾಗಿಯೂ ತಿಳಿಸಿದ್ದರು. ಮುರಳಿ ನಟಿಸಿದ್ದು ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳಲ್ಲಿ. ಕನ್ನಡ ಚಿತ್ರರಂಗದಲ್ಲಿ ಅವರು ಮೂಡಿಸಿದ ಛಾಪು ಅಚ್ಚಳಿಯದೆ ಹಾಗೆ ಉಳಿದಿದೆ. ಪ್ರೇಮ ಪರ್ವ, ಅಜೇಯ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ, ಸಂಭವಾಮಿ ಯುಗೇ ಯುಗೇ, ಅಜಯ್ ವಿಜಯ್ ಅವರು ನಟಿಸಿದ ಕನ್ನಡ ಚಿತ್ರಗಳು.

    ಶಿವಾಜಿ ಗಣೇಶನ್, ಮಮ್ಮುಟ್ಟಿ, ಶರತ್ ಕುಮಾರ್, ವಿಜಯ್ ಕಾಂತ್ ಸೇರಿದಂತೆ ತಮಿಳಿನ ಹೆಸರಾಂತ ನಟರ ಜೊತೆ ಅಭಿನಯಿಸಿದ ಖ್ಯಾತಿ ಮುರಳಿ ಅವರದು.
    ಸರಿಸುಮಾರು 26 ವರ್ಷಗಳ ಕಾಲ ತಮಿಳು ಚಿತ್ರರಂಗದಡಾರ್ಲಿಂಗ್ ಎನಿಸಿಕೊಂಡಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದ ಪರವಾಗಿ ಪ್ರಚಾರವನ್ನು ಮಾಡಿದ್ದರು.

    ಬೆಂಗಳೂರಿನ ರಾಜಾಜಿನಗರದ ಮನೆಯಲ್ಲಿ ಈಗ ನೀರವ ಮೌನ. ಅವರು ರಾಜಾಜಿನಗರದ ಮನೆಗೆ ಬಂದಾಗ ತಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಆದರೆ ಈಗ ಅವರ ನಿಧನ ವಾರ್ತೆ ಬರಸಿಡಿಲಿನಂತೆ ಬಂದೆರಗಿದೆ. ಸರಳ ಮತ್ತು ಸುಂದರ ವ್ಯಕ್ತಿತ್ವದ ಮುರಳಿ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮುರಳಿ ಅವರ ಪತ್ನಿ ಶೋಭಾ, ಮಗಳು ಕಾವ್ಯ ಹಾಗೂ ಪುತ್ರರಾದ ವಿಜಯ್ ಮತ್ತು ಅಥರ್ವ ಅವರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಹಾರೈಸೋಣ.

    ಮುರಳಿಗೆ ಅಂತಿಮ ನಮನ

    Thursday, September 9, 2010, 10:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X