»   »  ನಗಿಸಲು ಬರುತ್ತಿದ್ದಾನೆ ನಂಜನಗೂಡು ನಂಜುಂಡ

ನಗಿಸಲು ಬರುತ್ತಿದ್ದಾನೆ ನಂಜನಗೂಡು ನಂಜುಂಡ

Subscribe to Filmibeat Kannada
Actor Ravishankar
ಎರಡು ವರ್ಷಗಳ ಹಿಂದೆ ಪ್ರಚಂಡ ರಾವಣ ಎಂಬ ಪೌರಾಣಿಕ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸ ಪ್ರಸಾದ್ ಈಗ ಮಾನಸಿಕ ರೋಗಿಯೊಬ್ಬನ ಜೀವನ ಕುರಿತಾದ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಪಯಣ ಚಿತ್ರದ ನಾಯಕ ಹಾಸ್ಯನಟ ರವಿಶಂಕರ್ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಈ ಚಿತ್ರದ ಹೆಸರು ನಂಜನಗೂಡು ನಂಜುಂಡ. ಕಳೆದ ವಾರ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ಆಚರಿಸಿಕೊಂಡ ನಂಜುಂಡನಿಗೆ ಮಲಯಾಳಂ ನಟಿ ಹಂಸಿಣಿ ನಾಯಕಿ.

ಈಕೆ ಈಗಾಗಲೇ 2 ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾಳೆ. ರಕ್ಷಕ ಚಿತ್ರಕ್ಕೆ ಸಂಗೀತ ನೀಡಿದ್ದ ರವಿಚಂದ್ರ ಈ ಚಿತ್ರದ 6 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಗಿರಿ ಎಸ್. ನಾರಾಯಣ್ ಜೊತೆ ಕೆಲಸ ಮಾಡಿದ್ದ ಸುರೇಶ್ ಈ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿದ್ದಾರೆ. ಫರ್ನಿಚರ್ ಉದ್ಯಮ ನಡೆಸುತ್ತಿರುವ ಸುಭಾಷ್ ಕೂರ್ಗ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಿರ್ದೇಶಕರು ಒಂದು ಮಲಯಾಳಂ ಕಥೆಯನ್ನು ಕನ್ನಡದಲ್ಲಿ ಮಾಡಬೇಕೆಂದು ನನ್ನ ಬಳಿ ಬಂದಾಗ ನನಗೂ ಕಥೆ ಇಷ್ಟವಾಯಿತು. ಈ ರೀತಿಯ ಸಿನಿಮಾಗಳನ್ನು ಕನ್ನಡಿಗರು ಸ್ವೀಕರಿಸುತ್ತಾರೆಂಬ ನಂಬಿಕೆ ನನಗಿದೆ ಎಂದು ಸುಭಾಷ್ ಹೇಳಿದರು.

1989ರಲ್ಲಿ ತೆರೆಗೆ ಬಂದ ಒಡಕ್ಕು ನೋಕ್ಕಿ ಯಂದಿರಮ್ (ಒಡಕು ದೋಣಿ ಯಂತ್ರ) ಎಂಬ ಮಲಯಾಳಂ ಸಿನಿಮಾ ಕಥೆಯನ್ನು ನಮ್ಮ ನೇಟಿವಿಟಿಗೆ ಹಾಗೂ ಈಗಿನ ಕಾಲಮಾನಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ಚಿತ್ರಕಥೆ ಮಾಡುತ್ತೇನೆ. ಮಾನಸಿಕ ಅಸ್ವಸ್ಥತೆ ಹತ್ತರಲ್ಲಿ ಏಳು ಜನರಿಗೆ ಕಾಣಿಸುವ ತೊಂದರೆ. ಆದರೆ, ಅದು ಇತಿಮಿತಿ ಮೀರಿದಾಗ ನಮ್ಮ ಸುತ್ತಮುತ್ತಲಿನವರಿಗೆ ಹೇಗೆ ತೊಂದರೆಯಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹಾಸ್ಯಮಿಶ್ರಿತವಾಗಿ ಹೇಳುತ್ತಿದ್ದೇನೆ ಎನ್ನುತ್ತಾರೆ ನಿರ್ದೇಶಕರು.

ಮೂಲ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳಿದ್ದಿಲ್ಲ, ನಮ್ಮ ಚಿತ್ರಕ್ಕೆ ಮನರಂಜನೆಗೆ ಬೇಕಾದ ಹಲವಾರು ಅಂಶಗಳನ್ನು ಅಳವಡಿಸಿಕೊಂಡು ಸೈಕಾಲಜಿ ಜೊತೆಗೆ ಹಾಸ್ಯವನ್ನು ಸೂಕ್ಷ್ಮವಾಗಿ ತೆಗೆದುಕೊಂಡು ಹೋಗಿದ್ದೇನೆ. ತನ್ನ ಹೆಂಡತಿ ಸುಂದರವಾಗಿರುವುದನ್ನೇ ಅನುಮಾನಿಸುವ ನಾಯಕ ಆಕೆಯನ್ನು ಯಾರಾದರೂ ನೋಡಿದರೆ, ಮಾತನಾಡಿಸಿದರೆ, ಅನುಮಾನಪಡುತ್ತಾನೆ. ಆ ಅನುಮಾನ ಅತಿರೇಕಕ್ಕೆ ಹೋಗಿ ನೋಡುಗರಿಗೆ ಹೇಗೆ ಹಾಸ್ಯವಾಗುತ್ತದೆ ಎನ್ನುವುದೇ ಈ ಚಿತ್ರದ ಕಥೆ ಎಂದು ನಿರ್ದೇಶಕ ಶ್ರೀನಿವಾಸ ಪ್ರಸಾದ್ ಹೇಳಿದರು.

ನಂಜನಗೂಡು, ಶ್ರೀರಂಗಪಟ್ಟಣ ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ, ಕೂರ್ಗ್‌ನಲ್ಲಿ 2ಹಾಡು, ಸ್ಟುಡಿಯೋದಲ್ಲಿ ಸೆಟ್ ಹಾಕಿ 2ಹಾಡು, ನಂಜನಗೂಡಿನಲ್ಲಿ 2ಹಾಡುಗಳನ್ನು ಚಿತ್ರೀಕರಿಸಲಾಗುವುದು. ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿರುವ ಕೆ.ಎಸ್.ಎಲ್. ಸ್ವಾಮಿ ಮಾತನಾಡಿ, ನಾನು 50 ವರ್ಷಗಳಿಂದ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಮೂಲತಃ ನನಗೆ ಕಾಮಿಡಿ ಇಷ್ಟ. ಹಾಗೆ ಸುಮ್ಮನೆ, ಜಂಬೂಸವಾರಿಯಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿದ್ದೇನೆ ಎಂದರು.

ನಾಯಕ ರವಿಶಂಕರ್ ಮಾತನಾಡಿ ಪಯಣದ ನಂತರ ಒಂದು ಉತ್ತಮ ಪಾತ್ರಕ್ಕಾಗಿ ಬಹಳ ಕಾದೆ. ಈ ಕಥೆ ನನಗೆ ಬಹಳ ಇಷ್ಟವಾಯಿತು. ನಾನು ಇಷ್ಟಪಟ್ಟಂತಹ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಕ್ಯಾಮೆರಾ ಮುಂದೆ ನಗಿಸುವುದು ಕಷ್ಟದ ಕೆಲಸ. ಕಾಮಿಡಿ ಮಾಡುವವರೆಲ್ಲಾ ಕಾಮಿಡಿಯನ್ ಅಲ್ಲ. ಅದು ವ್ಯಕ್ತಿತ್ವದಿಂದಲೇ ಬರಬೇಕು ಎಂದರು. ಹಾಸ್ಯನಟ ನಾಗರಾಜ್ ಕೋಟೆ ಕೂಡ ಪ್ರಮುಖ ಹಾಸ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada