»   »  ದೇವರು ಕೊಟ್ಟ ತಂಗಿ ಗ್ರಾಫಿಕ್ಸ್ ಗೆ ನಲವತ್ತೈದು ಲಕ್ಷ

ದೇವರು ಕೊಟ್ಟ ತಂಗಿ ಗ್ರಾಫಿಕ್ಸ್ ಗೆ ನಲವತ್ತೈದು ಲಕ್ಷ

By: *ಜಯಂತಿ
Subscribe to Filmibeat Kannada

ಅಣ್ಣ ಶಿವರಾಜಕುಮಾರ್ ಬಂದಿರಲಿಲ್ಲ. ತಂಗಿ ಮೀರಾ ಜಾಸ್ಮಿನ್ ಹಾಜರಿರುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ದೇವರು ಕೊಟ್ಟ ತಂಗಿ ಚಿತ್ರದ ಬಗ್ಗೆ ಮಾತನಾಡಲಿಕ್ಕೆ ಪತ್ರಕರ್ತರ ಎದುರು ಒಂಟಿಯಾಗಿ ಕೂತಿದ್ದ ಸಾಯಿಪ್ರಕಾಶ್ ಮುಖದಲ್ಲಿ ಚಿಂತೆಯ ಗೆರೆಗಳಿದ್ದವು.

ಸಾಯಿ ಅವರ ಚಿಂತೆಗೆ ಕಾರಣವಾಗಿದ್ದುದು ಶಿವಣ್ಣ ಅಥವಾ ಮೀರಾಳ ಗೈರುಹಾಜರಿಯಲ್ಲ. ಈಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ಅವರ ಚಿಂತೆಗೆ ಕಾರಣ. ತಂಗಿ ಚಿತ್ರಕ್ಕೆ ನಿರ್ದೇಶಕರು ಮಾತ್ರವಲ್ಲ, ನಿರ್ಮಾಪಕರೂ ಆಗಿರುವುದು ಸಾಯಿ ವ್ಯಥೆಯ ಇನ್ನೊಂದು ಮುಖ. ಚಿಂತೆಯ ಮಾತು ಪಕ್ಕಕ್ಕಿರಲಿ. ತಂಗಿಯ ವಿವರಗಳನ್ನು ನೋಡಿ.

ದೇವರು ಕೊಟ್ಟ ತಂಗಿ ಚಿತ್ರೀಕರಣ ಮುಗಿದಿದೆ. ಘಾಟಿ ಸುಬ್ರಹ್ಮಣ್ಯ, ವಿದುರಾಶ್ವತ್ಥ, ಮದ್ದೂರು ಬಳಿಯ ಕಾಲಭೈರವ ದೇಗುಲ, ಬಲಮುರಿ, ಶಿಂಷಾ- ಹೀಗೆ ಹತ್ತಾರು ಕಡೆ ಶೂಟಿಂಗ್ ನಡೆಸಿದೆ. ದೀಪಾವಳಿ ವೇಳೆಗೆ ಚಿತ್ರದ ಧ್ವನಿಸುರುಳಿ ಮಾರುಕಟ್ಟೆಗೆ ಬರಲಿದೆ. ರಾಜ್ಯೋತ್ಸವ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.

ಸಾಯಿಪ್ರಕಾಶ್ ಪ್ರಕಾರ ಚಿತ್ರದ ಹೈಲೈಟ್ ಕ್ಲೈಮ್ಯಾಕ್ಸ್. ಇತ್ತೀಚೆಗೆ ಕರ್ನಾಟಕದಲ್ಲಿ ಸಂಭವಿಸಿದ ಪ್ರಳಯಸದೃಶ ಪ್ರವಾಹವನ್ನು ನೆನಪಿಸುವಂಥ ನೆರೆಯ ದೃಶ್ಯಗಳು ಚಿತ್ರದಲ್ಲಿವೆಯಂತೆ. ಶಿಂಷಾ ಪರಿಸರದಲ್ಲಿ ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು ಗ್ರಾಫಿಕ್ ಸ್ಪರ್ಶ ಇದೆಯಂತೆ. ನಲವತ್ತೇಳು ನಿಮಿಷಗಳ ದೃಶ್ಯಗಳಿಗೆ ಸ್ಪೆಷಲ್ ಎಫೆಕ್ಟ್ ಕೊಡಲಿಕ್ಕಾಗಿಯೇ ನಲವತ್ತೈದು ಲಕ್ಷ ರೂಪಾಯಿ ಖರ್ಚಾಗಿದೆ. ಈ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವುದು ನಿರ್ದೇಶಕರ ನಂಬಿಕೆ.

ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರಾಗಿ ಸಾಯಿಪ್ರಕಾಶ್ ಹಲವು ಯೋಜನೆ ಹಾಕಿಕೊಂಡಿದ್ದಾರಂತೆ. ಪ್ರಚಾರದ ಭಾಗವಾಗಿ ಈಗಾಗಲೇ ಗ್ರಾಮೀಣ ಭಾಗಗಳಿಗೆ ದೇವರು ಕೊಟ್ಟ ತಂಗಿಯ ಪಾಕೆಟ್ ಕ್ಯಾಲೆಂಡರ್ ಹಾಗೂ ಸ್ಟಿಕ್ಕರ್ ತಲುಪಿವೆಯಂತೆ.

ಮೀರಾ ಜಾಸ್ಮಿನ್ ತುಂಬಾ ಮೂಡಿಯಂತೆ. ಅವರೊಂದಿಗೆ ಕೆಲಸ ಮಾಡೋದು ಕಷ್ಟವಾಗಲಿಲ್ಲವಾ? ಎನ್ನುವುದು ಪತ್ರಕರ್ತರ ಪ್ರಶ್ನೆ. ಇಲ್ಲ ಎಂದರು ಸಾಯಿಪ್ರಕಾಶ್. ಮೀರಾಳಿಂದ ಯಾವುದೇ ತೊಂದರೆಯಾಗಲಿಲ್ಲ. ಆಕೆಯ ವ್ಯಕ್ತಿತ್ವ ಹೇಗಿದ್ದರೆ ನನಗೇನು? ಶೂಟಿಂಗ್ ಮುಗಿದ ಮೇಲೆ ನಾನ್ಯಾರೋ ಅವರ‌್ಯಾರೊ ಎಂದು ನಕ್ಕರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada