»   » ತಮ್ಮ ಗಿರಿಜಾ ಮೀಸೆ ತಿರುವುತ್ತಾ ರವಿ ಹೇಳಿದ್ದು ಇಷ್ಟು!

ತಮ್ಮ ಗಿರಿಜಾ ಮೀಸೆ ತಿರುವುತ್ತಾ ರವಿ ಹೇಳಿದ್ದು ಇಷ್ಟು!

Posted By: Super Admin
Subscribe to Filmibeat Kannada


ಮಾದೇಶ  ಸಿನಿಮಾದಲ್ಲಿ ಪತ್ರಕರ್ತ ರವಿ ಬೆಳಗೆರೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು, ಅವರ ಮೀಸೆ ನೋಡಿದರೆ ವಿಚಾರ ಸ್ಪಷ್ಪವಾಗುತ್ತದೆ. 80ರ ದಶಕದ ಕುಖ್ಯಾತ ಭೂಗತ ಪಾತಕಿಯ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ರವಿ ಶ್ರೀವತ್ಸ  ಚಿತ್ರವೆಂದ ಮೇಲೆ  ರವಿ ಬೆಳಗೆರೆಗೆ ಏನಾದರೂ ಪಾತ್ರ ಇರೋದಂತೂ ಗ್ಯಾರಂಟಿ. ಆದರೆ ಈ ಬಾರಿ ಪೂರ್ಣ ಪ್ರಮಾಣದ ಪಾತ್ರದಲ್ಲಿ , ಅದೂ ನೆಗೆಟಿವ್ ರೋಲ್ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಕೈಲಿ ಗೂಸಾ ತಿನ್ನುತ್ತಾರೋ ಇಲ್ವೋ ಗೊತ್ತಿಲ್ಲ. ರವಿ(ಶ್ರೀವತ್ಸ)ನಮ್ಮ ಹುಡುಗ ಸೆಟ್ ನಲ್ಲಿ ನಾನು ಅವನ ವಿದ್ಯಾರ್ಥಿ ಎಂಬುದು ಬೆಳಗೆರೆ ಮಾತು.

ಹಾಯ್ ಬೆಂಗಳೂರು, ಓ ಮನಸೇ ಪತ್ರಿಕೆಗಳನ್ನು  ನಡೆಸುವುದರ ಜೊತೆಗೆ, ಹಲವಾರು ಕಾದಂಬರಿಗಳನ್ನು, ಪ್ರವಾಸ ಕಥನಗಳನ್ನು ತಮ್ಮ ಲೇಖನಿಯಿಂದ ಹರಿಸಿ, ಜನಮನ ತಣಿಸಿದ್ದಾರೆ ಬೆಳಗೆರೆ. ಯಾಕೋ ಇದು ಸಾಲದೆನಿಸಿ,  ಆಡೀಯೋ ಸಿಡಿ ಮಾಡಿ ಮಾರಿದ್ದಾಯಿತು, ಕಿರುತೆರೆಗೆ ಕಾಲಿಟ್ಟು ನಿಂತದ್ದಾಯ್ತು, ನಟನೆ ಮಾಡಿದ್ದಾಯ್ತು, ಬೆಳ್ಳಿತೆರೆಯಲ್ಲಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡದ್ದಾಯ್ತು, ಈಗ ಇನ್ನೊಂದು ಅವತಾರ. ಈಗಿನ ಸುದ್ದಿಯಂತೆ, ಮಾರ್ಚ್ ಹೊತ್ತಿಗೆ ತಮ್ಮ ಭಾವಿ ಅಳಿಯ ಶ್ರೀನಗರ ಕಿಟ್ಟಿಯನ್ನು ಹಾಕಿಕೊಂಡು  ಚಿತ್ರ ನಿರ್ಮಿಸಿ, ನಿರ್ದೇಶನ ಮಾಡಲಿದ್ದಾರಂತೆ. ಅಫ್ ಕೋರ್ಸ್ ಕಥೆ, ಚಿತ್ರಕಥೆ, ಸಂಭಾಷಣೆ  ಬೆಳಗೆರೆಯವರದ್ದೇ. ಆ ಚಿತ್ರದಲ್ಲಿ  ನಟನೆ ಕೂಡ ಮಾಡಲಿದ್ದೇನೆ ಎಂದು ರವಿ ಹೇಳಿದ್ದಾರೆ.

ಸಿನೆಮಾಕ್ಕೆ ಬಂದ ಮೇಲೆ ಬರವಣಿಗೆ ನಿಂತ ಹಾಗೆ ಅಲ್ವಾ ಅಂದರೆ, ಇಲ್ಲಾ ಖಂಡಿತಾ ಇಲ್ಲ .. ನನ್ನ ಉಸಿರಿರೋವರೆಗೂ ನನ್ನ ಕೈ ಬರೆಯೋದನ್ನು ನಿಲ್ಲಿಸೋಲ್ಲ. ಸಿನೆಮಾ ಒಂದು passion ಅಷ್ಟೆ ಎನ್ನುತ್ತಾರೆ.

ಚಿಕ್ಕಂದಿನಲ್ಲಿ ರಾಜ್ ಕುಮಾರ್ ಚಿತ್ರದಲ್ಲಿ ಕುದುರೆ ಮೇಲೆ ಹೋಗೋ ದೃಶ್ಯ ನೋಡಿದಾಗಿನಿಂದ ಸಿನಿಮಾ ಹುಚ್ಚು ಹತ್ತಿತ್ತು. ಆದರೆ ನನ್ನ ಹೋರಾಟದ ಬದುಕಿನ ಮಧ್ಯೆ ಸಿನಿಮಾದಿಂದ ಸ್ವಲ್ಪ ದೂರಾನೇ ಇದ್ದೆ. ಈಗ ಬೇಕಾದರೆ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದೇನೆ  ಎನ್ನಬಹುದು ಎಂದು ತಮ್ಮ ಗಿರಿಜಾ ಮೀಸೆ ಮೇಲೆ ಕೈಯಿರಿಸಿ ರವಿ ನಗುತ್ತಾರೆ. ಏನೋ ಮಾರಾಯ.. ಸುಖವಾಗಿರು ಸಾಕು.. ಸುಖದ ಮಧ್ಯೆ ಬರೆಯೋದಕ್ಕೆ ಮೈಗಳ್ಳತನ ತೋರಿಸಬೇಡ ಎಂಬುದು ಅವರ ಅಭಿಮಾನಿಗಳ ಹಾರೈಕೆ ಮತ್ತು ಸೂಚನೆ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಮಾದೇಶ ಚಿತ್ರದ ಮುಹೂರ್ತದ ಗ್ಯಾಲರಿ ಮೇಲೆ ಕಣ್ಣಾಡಿಸಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada