»   »  ಜಗ್ಗೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ರದ್ದು

ಜಗ್ಗೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ರದ್ದು

Posted By:
Subscribe to Filmibeat Kannada

ಚಿತ್ರನಟ ಹಾಗೂ ಮಾಜಿ ಶಾಸಕ ಜಗ್ಗೇಶ್ ವಿರುದ್ಧ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ನ ಏಕಸದಸ್ಯ ಪೀಠ ಮಂಗಳವಾರ (ಸೆ.8) ರದ್ದು ಗೊಳಿಸಿದೆ. ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಕೃಷ್ಣಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊಕದ್ದಮೆಯ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ್ ಗೆ ಜಗ್ಗೇಶ್ ರಿಟ್ ಅರ್ಜಿ ಸಲ್ಲಿಸಿದ್ದರು.

ಪತ್ರಿಕಾ ವರದಿಯನ್ನು ಆಧರಿಸಿ ಜಗ್ಗೇಶ್ ಅವರೊಬ್ಬರನ್ನೇ ಆರೋಪಿಯನ್ನಾಗಿಸಲಾಗಿದೆ. ಪತ್ರಿಕಾ ಸಂಪಾದಕರು, ವರದಿಗಾರರನ್ನು ಏಕೆ ಆರೋಪಿಯನ್ನಾಗಿಸಲಿಲ್ಲ ಎಂದು ಪ್ರಶ್ನಿಸಿರುವ ನ್ಯಾಯಾಲಯ ಅರ್ಜಿಯನ್ನು ರದ್ದುಗೊಳಿಸಿದೆ. ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಅವರು 2004ರಲ್ಲಿ ಜಗ್ಗೇಶ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

ಪತ್ರಿಕಾಗೋಷ್ಠಿಯೊಂದರಲ್ಲಿ ಜಗ್ಗೇಶ್ ಅವರು ಎಂ ಟಿ ಕೃಷ್ಣಪ್ಪ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದರು. ಶಿಕ್ಷಣಾಧಿಕಾರಿಯೊಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ಎಂಟಿ ಕೃಷ್ಣಪ್ಪ 3 ಲಕ್ಷ ರುಪಾಯಿ ಲಂಚ ಸ್ವೀಕರಿಸಿದ್ದಾರೆ ಎಂದು ಜಗ್ಗೇಶ್ ಆರೋಪಿಸಿದ್ದರು. ಈ ಸಂಬಂಧ ಕೃಷ್ಣಪ್ಪ ಅವರು ತುಮಕೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಜಗ್ಗೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯ ಜಗ್ಗ್ಗೇಶ್ ಗೆ ಸಮನ್ಸ್ ಜಾರಿ ಮಾಡಿತ್ತು. ಮೊಕದ್ದಮೆಯ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಜಗ್ಗೇಶ್ ಅವರು ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದರು. ಸಮರ್ಪಕ ದಾಖಲೆಗಳನ್ನು ಹಾಗೂ ಸಾಕ್ಷ್ಯಾಧಾರಗಳನ್ನು ಒದಗಿಸದೆ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಕ್ಕೆ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮೊಕದ್ದಮೆಯನ್ನು ರದ್ದು ಪಡಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada