»   »  ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ

ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ

Posted By:
Subscribe to Filmibeat Kannada
Dr. Jayamala
ಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 1ರಿಂದ 3ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಅಮೃತ ಘಳಿಗೆಯನ್ನು ಅವಿಸ್ಮರಣೀಯವಾಗಿಸಲು ಕರ್ನಾಟಕ ಸರ್ಕಾರದೊಂದಿಗೆ ಉದಯ ವಾಹಿನಿ ಮತ್ತು ಸನ್ ಫೀಸ್ಟ್ ಸಂಸ್ಥೆಗಳು ಕೈ ಜೋಡಿಸುತ್ತಿವೆ ಎಂದು ಕೆಎಫ್ ಸಿಸಿ ಅಧ್ಯಕ್ಷೆ ಡಾ. ಜಯಮಾಲಾ ತಿಳಿಸಿದ್ದಾರೆ.

ಅಮೃತ ಮಹೋತ್ಸವದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆಗಾಗಿ, ರಂಗ ತಾಲೀಮು ಮಾಡಿಕೊಳ್ಳಲು, ಕನ್ನಡ ಚಿತ್ರರಂಗದ ಪ್ರತಿಯೊಬ್ಬರೂ ಭಾಗವಹಿಸಬೇಕೆಂಬ ಸದುದ್ದೇಶದಿಂದ ಇಡೀ ಕನ್ನಡ ಚಿತ್ರೋದ್ಯಮಕ್ಕೆ ಫೆಬ್ರವರಿ 17ರಿಂದ 15 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಮೂರು ದಿನಗಳ ಕಾಲ ಕಾರ್ಯಕ್ರಮ ಸುಸೂತ್ರವಾಗಿ ನಿರ್ವಹಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ವತಿಯಿಂದ ಕಾರ್ಯಕ್ರಮಕ್ಕೆ ಶೋಭೆ ನೀಡಲಿದ್ದಾರೆ.

ಹಣಕಾಸು ಸಮಿತಿಯ ಅಧ್ಯಕ್ಷೆಯಾಗಿ ಪಾರ್ವತಮ್ಮ ರಾಜ್ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮದ ನಿರ್ದೇಶಕರಾಗಿ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್, ಅಮೃತ ಮಹೋತ್ಸವ ಪುಸ್ತಕ ಸರಣಿಯ ಪ್ರಧಾನ ಸಂಪಾದಕರಾಗಿ ಡಾ.ಬರಗೂರು ರಾಮಚಂದ್ರಪ್ಪ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸದಭಿರುಚಿಯ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಟಿ.ಎಸ್.ನಾಗಾಭರಣ ಮತ್ತು ''ಕನ್ನಡ ಚಿತ್ರರಂಗ ನೆನ್ನೆ, ಇಂದು ಮತ್ತು ನಾಳೆ'' ವಿಚಾರ ಸಂಕಿರಣದ ನೇತೃತ್ವವನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ.

ಮಾರ್ಚ್ 1 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಂಸ್ಕೃತಿಕ ಹಬ್ಬದೊಂದಿಗೆ ಬೆಳಗ್ಗೆ 7 ಗಂಟೆಗೆ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿದೆ. ಆಗಿಹೋದ ಕನ್ನಡ ಚಿತ್ರರಂಗದ ಮಹಾನುಭಾವರುಗಳ 75 ಪುಸ್ತಕಗಳ ಲೋಕಾರ್ಪಣೆಯಾಗಲಿವೆ. ಕನ್ನಡ ಚಿತ್ರೋದ್ಯಮದ 108 ಮಂದಿ ಗಣ್ಯರಿಗೆ ಸನ್ಮಾನಿಸಲಾಗುತ್ತದೆ. ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಚಿತ್ರಗಳಲ್ಲಿ ನಟಿಸಿ ಈಗ ಅನ್ಯ ಭಾಷೆಗಳಲ್ಲಿ ನಟಿಸುತ್ತಿರುವ ಕಲಾವಿದರನ್ನು ಮಾರ್ಚ್ 3ರಂದು ಸನ್ಮಾನಿಸಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ವಿವರ ನೀಡಿದರು.

ಅಮೃತ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸಕ್ತಿದಾಯಕವಾಗಿ ರೂಪಿಸಲು, ಕನ್ನಡ ಚಿತ್ರರಂಗದ ಆಗಿ ಹೋದ ಮಹಾನುಭಾವರನ್ನು ನೆನಪಿಸುವಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ವಿ.ರವಿಚಂದ್ರನ್. ಈ ಸಾಂಸ್ಕೃತಿಕ ಹಬ್ಬ ಒಟ್ಟು ನಾಲ್ಕು ಗಂಟೆಗಳ ಕಾಲ ನಡೆಯಲಿದ್ದು 11 ಗಂಟೆಗೆ ಕೊನೆಯಾಗಲಿದೆ ಎಂದು ರವಿಚಂದ್ರನ್ ತಿಳಿಸಿದರು. ಡಾ.ಬಿ.ಸರೋಜಾದೆವಿ, ಡಾ.ಶ್ರೀನಾಥ್, ಪಾರ್ವತಮ್ಮ ರಾಜ್ ಕುಮಾರ್, ಉದಯ ವಾಹಿನಿಯ ಮುಖ್ಯ ನಿರ್ವಹಣಾಧಿಕಾರಿ ವಿಜಯ ಕುಮಾರ್, ಸನ್ ಫೀಸ್ಟ್ ಐಟಿಸಿ ಫುಡ್ಸ್ ನ ಮಾರುಕಟ್ಟೆ ಮುಖ್ಯಸ್ಥ ವಿ.ಎಲ್.ರಾಜೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada