»   »  ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕೆ?

ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕೆ?

Subscribe to Filmibeat Kannada

2008ರಲ್ಲಿ ಕನ್ನಡ ಚಿತ್ರರಂಗ ಅಡ್ಡಡ್ಡ ಮಲಗಿಬಿಟ್ಟಿದೆ. ಬಿಡುಗಡೆಯಾಗಿರುವ ನೂರಾಹತ್ತು ಚಿತ್ರಗಳಲ್ಲಿ ನೂರನ್ನು ಕಳೆದರೆ ಉಳಿದ ಚಿತ್ರಗಳು ನಿಟ್ಟುಸಿರು ಬಿಟ್ಟಿವೆ, ಉಳಿದವು ಉಸಿರು ಕಳೆದುಕೊಂಡಿವೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗ 75 ವರ್ಷ ಸವೆಸಿರುವ ಸುಸಂದರ್ಭ ಒದಗಿಬಂದಿದೆ.

ಕನ್ನಡದ ಘಟಾನುಘಟಿ ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳೆಲ್ಲ ಕರ್ನಾಟಕ ವಾಣಿಜ್ಯ ಮಂಡಳಿಯೊಂದಿಗೆ ಈ ಪ್ಲಾಟಿನಂ ಜ್ಯುಬಿಲಿ ಆಚರಣೆಗೆ ಟೊಂಕ ಕಟ್ಟಿ ನಿಂತಿವೆ. ಮಾರ್ಚ್ 3ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಹೋತ್ಸವದಲ್ಲಿ ಇಡೀ ಚಿತ್ರರಂಗ ತೊಡಗಿಕೊಳ್ಳಲಿದೆ. ಹಿರಿಯ, ಕಿರಿಯ ಕಲಾವಿದರು, ತಂತ್ರಜ್ಞರು, ಲೈಟ್ ಬಾಯ್ ಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಎಲ್ಲಾ ಜೀವಗಳು ಹಬ್ಬಕ್ಕಾಗಿ ಸಿದ್ಧತೆ ನಡೆಸಲಿದ್ದಾರೆ. ಅದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಫೆಬ್ರವರಿ 17ರಿಂದ 15 ದಿನಗಳ ಕಾಲ ರಜೆ ಘೋಷಿಸಲು ನಿರ್ಧರಿಸಿದೆ. ಈ ಸಮಯದಲ್ಲಿ ಉತ್ಸವದ ತಯಾರಿಯ ಹೊರತು ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಚಟುವಟಿಕೆಗಳೂ ನಡೆಯುವುದಿಲ್ಲ.

ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಚಿತ್ರರಂಗದ ನಟ-ನಟಿಯರೆಲ್ಲ ಉಲ್ಲಾಸ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೆನೆದಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಉಪೇಂದ್ರ, ಪೂಜಾ ಗಾಂಧಿ ಮತ್ತಿತರ ಕಲಾವಿದರು ತುತ್ತು ನೀಡಿದ ಕಲಾಭಿಮಾನಿಗಳನ್ನು ರಂಜಿಸಲು ಹಾತೊರೆಯುತ್ತಿದ್ದಾರೆ. ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಕಂಗಳಲ್ಲಿ ಉತ್ಸವದ ಹಿಗ್ಗು ಮನೆಮಾಡಿದೆ. ಅರಮನೆ ಮೈದಾನ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಜರುಗಲಿದೆ. ರಜಾ ಘೋಷಣೆಯಿಂದಾಗಿ ಮುಂಗಾರು ಮಳೆಯಂತೆ ಪುಟಿದಾಡುತ್ತಿರುವ ಪೂಜಾ ಗಾಂಧಿಯಂತೂ ರಜಾದ ಒಂದು ಭಾಗವನ್ನು ಗೋವಾದಲ್ಲಿ ಕಳೆಯಲು ಹವಣಿಸುತ್ತಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಅತಿ ದೊಡ್ಡ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಸಹಾಯ ಬೇಕಾಗುತ್ತದೆಂದು ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಫರ್ಮಾನು ಹೊರಡಿಸಿದ್ದಾರೆ. 75 ವರ್ಷಾಚರಣೆಯನ್ನೇನೋ ಆಚರಿಸುವುದು ಸರಿ. ಆದರೆ, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಚಿತ್ರರಂಗಕ್ಕೆ 15 ದಿನಗಳ ಬಿಡುವು ನೀಡಿದರೆ, ದಿನದ ತುತ್ತಿಗಾಗಿ ದುಡಿಯುತ್ತಿರುವ ಕೈಗಳ ಪಾಡೇನು? ತಿಂಗಳಾನುಗಟ್ಟಲೆ ಬೆವರು ಸುರಿಸಿ ಮೂರು ನಾಲ್ಕು ಕೋಟಿ ಸುರಿದು ತಯಾರಿಸಿದ ಚಿತ್ರ ಮೂರು ನಾಲ್ಕು ದಿನ ಚಿತ್ರಮಂದಿರದಲ್ಲಿ ನಿಲ್ಲುವ ಗ್ಯಾರಂಟಿಯಿಲ್ಲ. ದೊಡ್ಡ ದೊಡ್ಡ ನಟರಿಗೇ ಕೋಟಿ ನೀಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕಾಗಿತ್ತೆ? ಇದನ್ನು ಜಯಮಾಲಾ ಯೋಚಿಸಿದ್ದಾರೆಯೆ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada