»   »  ಶಿವಾಜಿ ಗಣೇಶರೂ ಚಿ.ಉದಯಶಂಕರೂ

ಶಿವಾಜಿ ಗಣೇಶರೂ ಚಿ.ಉದಯಶಂಕರೂ

Posted By: * ಜಯಂತಿ
Subscribe to Filmibeat Kannada

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಶಿವಾಜಿ ಗಣೇಶನ್‌ರ ಅವನದಾನ್ ಮನಿದಾನ್ ಚಿತ್ರದ ಚಿತ್ರೀಕರಣ ಸಂದರ್ಭ. ಅದು ಅವರ ನೂರನೇ ಚಿತ್ರ. ಆ ಕಾರಣದಿಂದಾಗಿ ಸಿನಿಮಾದ ಬಗ್ಗೆ ಶಿವಾಜಿ ವಿಪರೀತ ಕಾಳಜಿ ತೆಗೆದುಕೊಂಡಿದ್ದರು. ಹಾಗೆ ನೋಡಿದರೆ ಅವನದಾನ್ ಮನಿದಾನ್ ಚಿತ್ರವನ್ನು ಒಪ್ಪಿಕೊಳ್ಳಲಿಕ್ಕೇನೆ ಶಿವಾಜಿ ಹಿಂದೆಮುಂದೆ ನೋಡಿದ್ದರು. ಅಂದಹಾಗೆ, ಅವನದಾನ್ ಮನಿದಾನ್ ಕನ್ನಡದಲ್ಲಿ ರಾಜಕುಮಾರ್ ನಟಿಸಿದ್ದ ಕಸ್ತೂರಿ ನಿವಾಸ ಚಿತ್ರದ ರೀಮೇಕು!

ಇದೆಂಥಾ ಕಥೆ! ಕಸ್ತೂರಿ ನಿವಾಸ ನೋಡಿದಾಗ ಶಿವಾಜಿ ಅವರ ಮೊದಲ ಪ್ರತಿಕ್ರಿಯೆಯಿದು. ಕಥೆ ನಿಧಾನವಾಗಿ ಅವರ ಮನಸ್ಸಿನೊಳಕ್ಕಿಳಿಯಿತು. ನೂರನೇ ಚಿತ್ರಕ್ಕೆ ಈ ಗಟ್ಟಿ ಕಥೆಯೇ ಇರಲಿ ಎನ್ನುವ ಹಿತೈಷಿಗಳ ಸಲಹೆಯನ್ನು ಒಪ್ಪಿಕೊಂಡರು.

ಕಸ್ತೂರಿ ನಿವಾಸದಲ್ಲಿ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಡಿದೆಯಲ್ಲ- ಆ ಹಾಡು ಶಿವಾಜಿ ಅವರಿಗೆ ಇಷ್ಟವಾಗಿತ್ತು. ಮಕ್ಕಳ ಆಟದ ಗಮ್ಮತ್ತಿನೊಂದಿಗೆ ಜೀವನದ ಚಿರಸತ್ಯಗಳನ್ನು ಹಿಡಿದಿಟ್ಟ ಆ ಗೀತೆ ಸಹಜವಾಗಿಯೇ ಶಿವಾಜಿ ಅವರ ಗಮನ ಸೆಳೆದಿತ್ತು. ಆ ಗೀತೆಗೆ ರಾಜಕುಮಾರ್ ಜೀವತುಂಬಿದ್ದರು. ಸಂಕೀರ್ಣವಾದ ಹಾಡಿಗೆ ಜೀವದುಂಬುವುದು ತಮಾಷೆಯ ಮಾತೆ? ಆ ಗೊಂದಲದಲ್ಲಿಯೇ ಶಿವಾಜಿ ಆಡಿಸಿದಾತ... ಗೀತೆಯನ್ನು ಬರೆದ ಚಿ.ಉದಯಶಂಕರ್ ಬಳಿ ಬಂದರು.

ಕನ್ನಡದ ಕಣ್ಣದಾಸನ್ ಆಗಿಬಿಟ್ಟಿದ್ದೀಯಲ್ಲಯ್ಯ? ತುಂಬಾ ಒಳ್ಳೆ ಹಾಡು ಬರೆದಿದ್ದೆ. ಆ ಹಾಡಿನ ಒಳಗೆ ಏನೇನು ಇದೆ ಅನ್ನೋದನ್ನ ನಿನ್ನ ಬಾಯಿಂದಲೇ ಹೇಳು. ನಾಳೆ ನಾನು ಆ ಗೀತೆಗೆ ಅಭಿನಯಿಸಬೇಕು ಎಂದು ಉದಯಶಂಕರ್ ಎದುರು ಶಿವಾಜಿ ಕುಳಿತೇಬಿಟ್ಟರು. ತಮಿಳಿನ ಮೇರುನಟ ತನ್ನ ಸಾಹಿತ್ಯ ಮೆಚ್ಚಿಕೊಂಡಿದ್ದಕ್ಕೆ ಉದಯಶಂಕರ್‌ಗೆ ಖುಷಿ, ಆಶ್ಚರ್ಯ.

ಕಲಾವಿದರ ಸಜ್ಜನಿಕೆ, ಒಳ್ಳೆಯದನ್ನು ಮೆಚ್ಚುವ ಗುಣ, ಕಿರಿಯರ ಮೇಲಿನ ಮತ್ಸರ ರಹಿತ ವಾತ್ಸಲ್ಯ, ಅಭಿನಯದ ಮೇಲಿನ ಬದ್ಧತೆ- ಒಂದು ಘಟನೆ ಎಷ್ಟಕ್ಕೆಲ್ಲ ಉದಾಹರಣೆಯಾಗಬಲ್ಲದು ನೋಡಿ. ಈಗ ಶಿವಾಜಿ ಗಣೇಶನ್ ಇಲ್ಲ. ಉದಯಶಂಕರ್ ಇಲ್ಲ. ರಾಜಕುಮಾರ್ ಅವರೂ ಇಲ್ಲ. ಇರುವುದು ನೆನಪುಗಳು ಮಾತ್ರ.ಎಂಥ ಕಾಲವಪ್ಪ ಇದು ಎನ್ನುವುದು ಕೇವಲ ಹಳಹಳಿಕೆಯಲ್ಲ ಅಲ್ಲವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada