»   » ನನ್ನ ಮಗಳಿಗೆ ಕಪಾಳಕ್ಕೆ ಹೊಡೆದರೆ?

ನನ್ನ ಮಗಳಿಗೆ ಕಪಾಳಕ್ಕೆ ಹೊಡೆದರೆ?

Posted By:
Subscribe to Filmibeat Kannada

ನಾಗತಿಹಳ್ಳಿ ಮತ್ತು ಐಂದ್ರಿತಾ ನಡುವೆ ಉಂಟಾದ ಜಗಳ,ಕದನದಲ್ಲಿ ಯಾರದು ತಪ್ಪು ಯಾರದು ಸರಿ ಎಂದು ಇದುವರೆಗೆ ಖಚಿತವಾಗಿಲ್ಲ. ಇಬ್ಬರೂ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರಾದರೂ ದೂರು ಆಲಿಸಿ, ನ್ಯಾಯದಾನ ಮಾಡುವುದಕ್ಕೆ ಕನ್ನಡ ಚಿತ್ರರಂಗದ ಹಿರಿಯರು ಪಂಚಾಯ್ತಿ ಕಟ್ಟೆಗೆ ಬಂದಿಲ್ಲ.

ಇವತ್ತು ಶುಕ್ರವಾರ ಪಂಚಾಯ್ತಿ ನಡೆಯುವುದೆಂದು ಹೇಳಲಾಗಿತ್ತು. ಆದರೆ, ಸಂಜೆ 7 ಗಂಟೆಯಾದರೂ ಕೋರ್ಟ್ ಮಾರ್ಷಲ್ ಮಾಡುವ ಬಗೆಗೆ ಸುಳಿವೇ ಇಲ್ಲ. ಜಯಮಾಲಾ, ಸಾರಾ ಗೋವಿಂದು, ಅಂಬರೀಷ್ ಮುಂತಾದ ಗಣ್ಯರು ನಿರ್ಮಾಪಕರ ಸಂಘದ ನೂತನ ಕಟ್ಟಡದ ಉದ್ಘಾಟನೆಗೆ ಟೇಪು ಕತ್ತರಿಸುವುದರಲ್ಲಿ ಬಿಜಿಯಾಗಿದ್ದಾರೆ.

ನಿರ್ಮಾಪಕರ ಸಂಘದ ಹೊಸ ಕಟ್ಟಡ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿದೆ. ನಿರ್ಮಾಪಕರ ಸಂಘದ ಪದಾಧಿಕಾರಿಗಳು, ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಕಲಾವಿದರ ಸಂಘದ ಪದಾಧಿಕಾರಿಗಳು ಸಮಾರಂಭದಲ್ಲಿರುವುದರಿಂದ ಇವತ್ತು ನಾಗತಿ ಮತ್ತು ಐಂದ್ರಿತಾ ಅವರ ಹಾಂಗ್ ಕಾಂಗ್ ಹಗರಣ ಇತ್ಯರ್ಥವಾಗುವ ಸಾಧ್ಯತೆಗಳು ಕಮ್ಮಿ.

ಈ ಮಧ್ಯೆ, ವಾಣಿಜ್ಯಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಹಗರಣಗ ಬಗೆಗೆ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಐಂದ್ರಿತಾ ರೇಗೆ ಕಪಾಳಕ್ಕೆ ಹೊಡೆದಿರುವುದು ಖಂಡನಾರ್ಹ, ನಾಗತಿಹಳ್ಳಿ ಅವರಿಗೆ ಹೊಡೆಯಲು ಅಧಿಕಾರ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.ಪ್ರಾಯಕ್ಕೆ ಬಂದ ನಮ್ಮ ಹೆಣ್ಣು ಮಕ್ಕಳನ್ನು ಹೊಡೆಯಲು ಹಿಂದೆ ಮುಂದೆ ನೋಡುತ್ತೇವೆ. ವಿಷಯ ಹೀಗಿರುವಾಗ ನಟಿ ಐಂದ್ರಿತಾ ರೇ ಮೇಲೆ ಕೈ ಮಾಡಿದ್ದು ತಪ್ಪು ಎಂದು ಜಯಮಾಲ ಖಾರವಾಗಿ ಉತ್ತರಿಸಿದ್ದಾರೆ.

ಒಂದು ವೇಳೆ ಐಂದ್ರಿತಾ ರೇ ಚಿತ್ರೀಕರಣಕ್ಕೆ ತಡವಾಗಿ ಬಂದಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡಬೇಕಿತ್ತು. ಅದು ಬಿಟ್ಟು ಆಕೆಯ ಮೇಲೆ ಕೈ ಮಾಡಿದ್ದು ಸರಿಯಲ್ಲ. ಮುಂದೊಂದು ದಿನ ನನ್ನ ಮಗಳು ಚಿತ್ರರಂಗಕ್ಕೆ ಬರಬಹುದು. ಒಬ್ಬ ಹೆಣ್ಣು ಮಗಳ ತಾಯಿಯಾಗಿ ಈ ಘಟನೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

ತಪ್ಪು ಮಾಡಿದವರಿಗೆಲ್ಲಾ ಕಪಾಳಮೋಕ್ಷ ಮಾಡುವುದಾದರೆ ಉಳಿದ ನಿರ್ದೇಶಕರು ನಾಗತಿಹಳ್ಳಿ ಅವರನ್ನೇ ಅನುಸರಿಸುತ್ತಾರೆ. ಎಲ್ಲ ಸಮಸ್ಯೆಗಳಿಗೂ ಕಪಾಳಮೋಕ್ಷ ಮಾಡುವುದೊಂದೇ ಪರಿಹಾರವಲ್ಲ. ನಾಗತಿಹಳ್ಳಿ ಅವರು ಸಜ್ಜನರು. ಅವರ ಮೇಲೆ ಬಂದಿರುವ ಆರೋಪಗಳಿಗೆ ಎರಡು ಕಡೆಯಿಂದ ವಿವರಣೆ ಪಡೆದು ನಂತರವೇ ಉತ್ತರಿಸಬೇಕಾಗುತ್ತದೆ. ನಮಗೆ ತಿಳಿದ ಮಟ್ಟಿಗೆ ನಾಗತಿಹಳ್ಳಿ ಅವರು ಈ ಹಿಂದೆ ಹೀಗೆ ಅಸಭ್ಯವಾಗಿ ನಡೆದುಕೊಂಡ ಉದಾಹರಣೆ ಇಲ್ಲ.

ಕಲಾವಿದರ ಸಂಘದ, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷರುಗಳ ಸಮ್ಮುಖದಲ್ಲಿ ಇಬ್ಬರ ಹೇಳಿಕೆಗಳನ್ನು ಪಡೆದು ಯಾರದು ಸತ್ಯ, ಯಾರದು ತಪ್ಪು ಎಂಬುದನ್ನು ಅರಿಯಬೇಕಾಗಿದೆ. ಚಿತ್ರತಂಡವನ್ನು ಕರೆಸಿ ಮಾಹಿತಿ ಪಡೆಯಲಾಗುತ್ತದೆ. ಇಬ್ಬರ ಹೇಳಿಕೆಯನ್ನು ಪಡೆದು ಸತ್ಯಾಸತ್ಯತೆಗಳು ತಿಳಿಯಲಿವೆ.

ಕನ್ನಡ ಚಿತ್ರರಂಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಇವರಿಬ್ಬರ ವಿವಾದವನ್ನು ನೋಡಬೇಕಾಗಿರುವುದು ದುರಂತ. ಚಿತ್ರೀಕರಣಕ್ಕೆ ತಡವಾಗಿ ಬಂದು ನಷ್ಟವಾಗಿದ್ದರೆ ವಾಣಿಜ್ಯ ಮಂಡಳಿಗೆ ಮನವಿ ಮಾಡಬಹುದಿತ್ತು. ಅದು ಬಿಟ್ಟು ಕೈ ಮಾಡಿರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.

ಹೆಣ್ಣು ಮಗಳ ಮೇಲೆ ಕೈ ಮಾಡಿದ ನಾಗತಿ ವಿರುದ್ಧ ನಾನಾ ಮಹಿಳಾ ಸಂಘಟನೆಗಳು ದನಿ ಎತ್ತಿವೆ. ಶಿವಾನಂದ ಸ್ಟೋರ್ಸ್ ಸಮೀಪದ ವಾಣಿಜ್ಯಮಂಡಳಿ ಕಚೇರಿಯ ಮುಂದೆ ಶುಕ್ರವಾರ ಸಂಜೆ ಮಹಿಳಾ ಸಂಘಟನೆಗಳು ಪ್ರತಿಭಟನಾ ಸಭೆ ನಡೆಸಿದವು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada