»   »  ಕನ್ನಿಹಾ ಎಂಬ ನೆರೆಮನೆ ರಾಜಕುಮಾರಿ

ಕನ್ನಿಹಾ ಎಂಬ ನೆರೆಮನೆ ರಾಜಕುಮಾರಿ

Subscribe to Filmibeat Kannada

*ಜಯಂತಿ

ಓದಿದ್ದು ಎಂಜಿನಿಯರಿಂಗ್, ಮಿಂಚುತ್ತಿರುವುದು ಸಿನಿಮಾದಲ್ಲಿ. ಇದು ಕನ್ನಿಹಾ ಎನ್ನುವ ರಾಜಕುಮಾರಿಯ ಒನ್‌ಲೈನ್ ಬಯೋಡೇಟಾ. ಮಂಜಣ್ಣನ (ನಿರ್ಮಾಪಕ ಕೆ.ಮಂಜು) ರಾಜ್‌ಕುಮಾರಿ ಸಿನಿಮಾ ನೋಡಿದ್ದರೆ ಕನ್ನಿಹಾ ಎನ್ನುವ ಈ ಸುಂದರಿಯನ್ನು ಕಣ್ಣು ತುಂಬಿಕೊಂಡೇ ಇರುತ್ತೀರಿ. ನೋಡಲಿಕ್ಕೆ ಮುಗ್ಧಳಂತೆ ಕಾಣುವ ಸ್ನಿಗ್ಧ ಸೌಂದರ್ಯದ ಕನ್ನಿಹಾ, ತನ್ನ ಬಗ್ಗೆ ಹೇಳಿಕೊಳ್ಳೋದು- 'ನಾನು ನಿಜವಾಗಿಯೂ ಮುಗ್ಧೆ ಕಣ್ರೀ"! ಬಹುಶಃ ಈ ಮುಗ್ಧತೆಯೇ ಮಂಜಣ್ಣನಿಗೆ ಇಷ್ಟವಾಗಿರಬೇಕು. ಅವರು ಬಾರಮ್ಮಾ ರಾಜಕುಮಾರಿ ಎಂದಿರಬೇಕು!

ಹಾಂ, ಕನ್ನಿಹಾಳನ್ನು ಕನ್ನಡಕ್ಕೆ ಕರೆತಂದಿರುವುದು ಮಂಜಣ್ಣನಿಗೆ ಸಲ್ಲಬೇಕಾದ ಕ್ರೆಡಿಟ್ಟೇನೂ ಅಲ್ಲ. ರಾಜ್‌ಕುಮಾರಿ ಕನ್ನಡದಲ್ಲಿ ಆಕೆಯ ಮೂರನೇ ಸಿನಿಮಾ. 'ಅಣ್ಣಾವ್ರು" ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ, 'ಸೈ" ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಕನ್ನಿಹಾ ಬಣ್ಣಹಚ್ಚಿದ್ದಳು. ಮೂರನೆಯದು ರಾಜಕುಮಾರ ಬಾಲಾಜಿ ಸರದಿ. ಆದರೂ, ಗಾಂಧಿನಗರದಲ್ಲಿ ಆಕೆಯ ಪಬ್ಲಿಸಿಟಿ ಅಷ್ಟಕ್ಕಷ್ಟೇ. ಅದಕ್ಕೆ ಆಕೆಯ ಮುಗ್ಧತೆ ಕಾರಣವಾ?

ನಾನು ಮುಗ್ಧೆ, ಪಕ್ಕಾ ಮನೆ ಹುಡುಗಿ, ಮನೆ ಊಟ ಅಂದ್ರೆ ಇಷ್ಟ; ಹೀಗೆ ತನ್ನನ್ನು ಬಣ್ಣಿಸಿಕೊಳ್ಳುವ ಈ ತಮಿಳು ಚೆಲುವೆಗೆ ಅಭಿನಯಿಸಲಿಕ್ಕೆ ಮಾತ್ರ ಪ್ರಬುದ್ಧ ಪಾತ್ರಗಳೇ ಇಷ್ಟವಂತೆ. ಈ ಸುಂದರಿ, 2001ರಲ್ಲಿ 'ಮಿಸ್ ಚೆನ್ನೈ' ಪಟ್ಟ ಗಿಟ್ಟಿಸಿದ್ದಳು. ಚೆಲುವಿನ ಕ್ವಾಲಿಫಿಕೇಷನ್ ಮುಂದಿಟ್ಟುಕೊಂಡೇ ಹತ್ತಾರು ತಮಿಳು ಚಿತ್ರಗಳಲ್ಲಿ ನಟಿಸಿದ್ದೂ ಆಯಿತು. ಮಲೆಯಾಳಂನಲ್ಲೂ ನಟಿಸಿರುವ ಕನ್ನಿಹಾ ಸದ್ಯಕ್ಕೆ ತ್ರಿಭಾಷಾ ತಾರೆ.

ಪ್ರಸ್ತುತ ಕನ್ನಿಹಾ ಆದ್ಯತೆಗಳಲ್ಲಿ ಮದುವೆಗೆ ಸ್ಥಾನವಿಲ್ಲ. ಆದರೆ ಮದುವೆಯಾಗುವ ಹುಡುಗನ ಬಗ್ಗೆ ಒಂದಷ್ಟು ಕನಸು ಕಟ್ಟಿಕೊಂಡಿದ್ದಾರೆ. ತಾನು ಕೈಹಿಡಿಯುವ ಹುಡುಗ ತನಗಿಂತಾ ಎತ್ತರವಾಗಿರಬೇಕು; ಲಕ್ಷಣವಾಗಿರಬೇಕು ಎನ್ನೋದು ಆ ಕನಸುಗಳಲ್ಲಿ ಸೇರಿವೆ. ಕನ್ನಡದಲ್ಲಿ ಹೊಸ ಅವಕಾಶಗಳನ್ನು ಕನ್ನಿಹಾ ಎದುರು ನೋಡುತ್ತಿದ್ದಾಳೆ. ಅಂದಹಾಗೆ, ಕನ್ನಿಹಾ ಎಂದರೆ ಗೆಲುವು ಎಂದರ್ಥವಂತೆ. ಕನ್ನಡದಲ್ಲಂತೂ ಆ ಗೆಲುವು ಅವರನ್ನಿನ್ನೂ ಕೈಹಿಡಿದಿಲ್ಲ. ರಾಜ್‌ಕುಮಾರಿ ಬರಕತ್ತೂ ಚೆನ್ನಾಗಿದ್ದಂತಿಲ್ಲ.

ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ (ವಿಮರ್ಶೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada