»   »  ಹಲೋ ಫಿಲ್ಮ್ ಚೇಂಬರ್,ಪುಸ್ತಕಗಳು ಬೇಕು!

ಹಲೋ ಫಿಲ್ಮ್ ಚೇಂಬರ್,ಪುಸ್ತಕಗಳು ಬೇಕು!

By: *ಜಯಂತಿ
Subscribe to Filmibeat Kannada
Jayamala
ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಗಿರುವ ಒಳ್ಳೆಯ ಕೆಲಸಗಳಲ್ಲಿ ಮುಖ್ಯವಾದದ್ದು 75ಅಗಲಿದ ಗಣ್ಯರ ಕುರಿತ ಪುಸ್ತಕ ಬಿಡುಗಡೆ. ಪುಸ್ತಕಗಳ ಬಿಡುಗಡೆ ಏನೋ ಆಯಿತು. ಅವು ಜನರ ಕೈಗೆ ಎಟುಕುವುದೇ ಅನ್ನೋದು ಈಗಿರುವ ಪ್ರಶ್ನೆ.

ಅಮೃತ ಮಹೋತ್ಸವ ನಡೆದ ಅರಮನೆ ಮೈದಾನದಲ್ಲಿ ಕೊನೆ ದಿನ ಕೂಡ ಪುಸ್ತಕಗಳನ್ನು ಮಾರಾಟಕ್ಕೆ ಇಡಲಿಲ್ಲ. ಪುಸ್ತಕ ಮಾಲಿಕೆಯ ಪ್ರಧಾನ ಸಂಪಾದಕ ಬರಗೂರು ರಾಮಚಂದ್ರಪ್ಪ ಹಾಗೂ ಸಂಪಾದಕ ಮಂಡಳಿ ಮಾರಾಟದ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಾಧ್ಯತೆಗಳನ್ನು ಹೇಳಿಯೂ ಪ್ರಯೋಜನವಾಗಿಲ್ಲ. ಸಮಾರಂಭದ ಸಂದರ್ಭದಲ್ಲೇ ಪುಸ್ತಕಗಳು ಸಿಗುವಂತಾಗಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ಆ ಕೆಲಸವನ್ನೂ ತಾವೇ ನೋಡಿಕೊಳ್ಳಿ ಎಂಬ ಧಾಟಿಯಲ್ಲಿ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮಾತನಾಡಿದ್ದಾರೆ. ಮೊದಲೇ ಹೈರಾಣಾಗಿದ್ದ ಬರಗೂರರು ಇನ್ನೊಂದು ಕಷ್ಟವನ್ನು ಯಾಕೆತಾನೆ ಮೈಮೇಲೆ ಹಾಕಿಕೊಳ್ಳಬೇಕು?

ಈಗ ಚಲನಚಿತ್ರ ಅಕಾಡೆಮಿ ತಲೆಎತ್ತಿದೆ. ಇನ್ನು ಪುಸ್ತಕದ ಉಸಾಬರಿಯನ್ನು ಅದರ ತಲೆಗೆ ಕಟ್ಟಿದರಾಯಿತು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲಾ ನೇರವಾಗಿ ಹೇಳಿದ್ದಾರೆ. ಅವರ ತಲೆಯಲ್ಲಿ ಇನ್ನೊಂದು ಯೋಚನೆ ಇದೆ. ಸಿನಿಮಾ ನಟ, ನಟಿಯರು ಹಾಗೂ ತಂತ್ರಜ್ಞರಿಗೆ ಒಂದೊಂದು ಸೆಟ್ ಪುಸ್ತಕಗಳನ್ನು ಕಳುಹಿಸಿಕೊಟ್ಟು ಅವರಿಂದ ಹಣ ವಸೂಲು ಮಾಡಿದರಾಯಿತು ಎಂಬುದೇ ಆ ಲೆಕ್ಕಾಚಾರ. ಮುದ್ರಿಸಿರುವುದು ಕೇವಲ ಸಾವಿರ ಪ್ರತಿಗಳನ್ನು. ಒಂದು ವೇಳೆ ಅವರು ಹಾಗೆ ಮಾಡಿದರೆ ಅಷ್ಟೂ ಪ್ರತಿಗಳು ಖರ್ಚಾಗುವುದಂತೂ ಖರೆ. ಹಾಗಾದಲ್ಲಿ ಪುಸ್ತಕಗಳ ಮರುಮುದ್ರಣ ನಡೆಯುತ್ತದಾ ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಮಾತ್ರ ಅವರು ಉತ್ತರ ಕೊಡುತ್ತಿಲ್ಲ.

ಎಪ್ಪತ್ತೈದು ಸಾಧಕರ ಬಗ್ಗೆ ಪ್ರಕಟವಾಗಿರುವ ಈ ಪುಸ್ತಕಗಳು ಸಿನಿಮಾ ಪ್ರೇಮಿಗಳಿಗೆ ಖಂಡಿತ ಉಪಯುಕ್ತ. ಆದರೆ, ಕೃತಿಗಳು ಯಾವ ಪುಸ್ತಕದಂಗಡಿಯಲ್ಲೂ ಸಿಗುತ್ತಿಲ್ಲ ಎಂಬುದು ನಿರಾಶಾದಾಯಕ. ಒಳ್ಳೆಯ ಕೆಲಸವೊಂದಕ್ಕೆ ಸೂಕ್ತ ರೀತಿಯಲ್ಲಿ ಮಾರುಕಟ್ಟೆ ಒದಗಿಸದಿದ್ದರೆ ಹೀಗೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಹಾಗಾಗುತ್ತದೆ.

ಅಂದಹಾಗೆ, ಯಾರ್‍ಯಾರ ಕುರಿತು ಪುಸ್ತಕ ಪ್ರಕಟವಾಗಿದೆಯೋ, ಅಂಥವರ ಕುಟುಂಬಗಳಿಗೆ ಸಿಕ್ಕಿರುವುದು ಕೃತಿಯ ಒಂದೇ ಪ್ರತಿ. ಕೊಳ್ಳಲು ಅವರು ಸಿದ್ಧವಿದ್ದರೂ, ಮಾರಲು ವಾಣಿಜ್ಯ ಮಂಡಳಿ ಸಿದ್ಧವಿಲ್ಲ!

ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?
ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada