»   » ಕೈಕೊಟ್ಟ 'ತಂಗಿ' : ಸಾಯಿಪ್ರಕಾಶ್ ಆತ್ಮಹತ್ಯೆಗೆ ಯತ್ನ

ಕೈಕೊಟ್ಟ 'ತಂಗಿ' : ಸಾಯಿಪ್ರಕಾಶ್ ಆತ್ಮಹತ್ಯೆಗೆ ಯತ್ನ

Posted By:
Subscribe to Filmibeat Kannada
Kannada movie director Om Saiprakash
ಅಣ್ಣ-ತಂಗಿ ಸೆಂಟಿಮೆಂಟಿನ ಸಾಲೋಸಾಲು ಚಿತ್ರಗಳನ್ನು ನೀಡಿ ಮಹಿಳೆಯನ್ನು ಹೆಚ್ಚೆಚ್ಚು ಆಕರ್ಷಿಸಿದ್ದ ಕನ್ನಡ ಚಲನಚಿತ್ರ ನಿರ್ದೇಶಕ ಓಂ ಸಾಯಿಪ್ರಕಾಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನೇಕ ಕಣ್ಣೀರಿನ ಕಥೆಗಳನ್ನು ನಿರ್ದೇಶಿಸಿದ್ದ ಸಾಯಿಪ್ರಕಾಶ್ ಅವರಿಗೆ ಅವರ ಮಹತ್ವಾಕಾಂಕ್ಷೆಯ ಚಿತ್ರ ದೇವರು ಕೊಟ್ಟ ತಂಗಿಯೇ ಕಣ್ಣೀರು ಬರಿಸಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿ.

ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಅವರನ್ನು ವಿಜಯನಗರದಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿರುವ ಅವರು ಸಾವು ಬದುಕಿನ ನಡುವೆ ಹುಯ್ದಾಡುತ್ತಿದ್ದರು. ಇತ್ತೀಚಿಗೆ ಬಂದಿರುವ ವರದಿಯ ಪ್ರಕಾರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಶಿವರಾಜ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ಧೈರ್ಯ ಮತ್ತು ಮತ್ತೊಂದು ಚಿತ್ರ ಮಾಡುವ ಭರವಸೆ ನೀಡಿದ್ದಾರೆ.

ಅವರು ಇತ್ತೀಚೆಗೆ ನಿರ್ಮಿಸಿ ನಿರ್ದೇಶಿಸಿದ್ದ ದೇವರು ಕೊಟ್ಟ ತಂಗಿ ಚಿತ್ರ ಉಂಟುಮಾಡಿದ ನಷ್ಟ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮೀರಾ ಜಾಸ್ಮಿನ್ ಮತ್ತು ಮೋನಿಕಾ ನಟಿಸಿದ್ದರು.

ದೇವರು ಕೊಟ್ಟ ತಂಗಿ ನಿರ್ಮಿಸಿ ಸುಮಾರು ಎರಡು ಕೋಟಿ ರು. ಸಾಲವನ್ನು ತಲೆಮೇಲೆ ಹೊತ್ತಿದ್ದರು. ಸಾಲಬಾಧೆಯಿಂದ ಹೊರಬರಲು ಮನೆ, ಸೈಟನ್ನೆಲ್ಲ ಮಾರಿದ್ದರೂ ಸಾಲ ಅವರನ್ನು ಬೆನ್ನತ್ತಿತ್ತು. ದೊಡ್ಡ ಪ್ರಮಾಣದಲ್ಲಿ ಚಿತ್ರ ನಿರ್ಮಿಸುವ ಯೋಜನೆಯಿಂದ ಕೋಟಿಗಟ್ಟಲೆ ಹಣ ಸುರಿದಿದ್ದರು. ಗ್ರಾಫಿಕ್ಸ್ ಎಫೆಕ್ಟ್ ಗಾಗಿಯೇ 45 ಲಕ್ಷ ರು. ವ್ಯಯಿಸಿದ್ದರು. ಸಾಯಿ ಭಕ್ತರಾಗಿರುವ ಸಾಯಿಪ್ರಕಾಶ್ ದೇವರನ್ನು ನಂಬಿ ದೇವರು ಕೊಟ್ಟ ತಂಗಿಗೆ ಹಣ ಸುರಿದಿದ್ದರು. ಆದರೆ, ಪ್ರೇಕ್ಷಕ ದೇವರು ಕೈಬಿಟ್ಟಿದ್ದರಿಂದ ಸಾಲದ ಸುಳಿಯಲ್ಲಿ ಅವರು ಸಿಲುಕಬೇಕಾಯಿತು.

ಶಿವರಾಜ್ ಕುಮಾರ್ ಮತ್ತು ಉಪೇಂದ್ರ ನಟಿಸಿದ್ದ ಲವ-ಕುಶ ಚಿತ್ರವನ್ನೂ ಅವರು ನಿರ್ಮಿಸಿದ್ದರು. ಆದರೆ, ದೇವರು ಕೊಟ್ಟ ತಂಗಿ ಅವರನ್ನು ಪೂರ್ತಿ ಜರ್ಜರಿತರನ್ನಾಗಿ ಮಾಡಿತು. ಆತ್ಮಹತ್ಯೆ ಮಾಡಿಕೊಳ್ಳುವ ಕುರಿತಂತೆ ಕೆಲ ಸ್ನೇಹಿತರಿಗೆ ಅವರು ಎಸ್ಎಮ್ಎಸ್ ಕೂಡ ಕಳುಹಿಸಿದ್ದರೆಂದು ತಿಳಿದುಬಂದಿದೆ.

ತವರಿಗೆ ಬಾ ತಂಗಿ ಭಾರೀ ಯಶಸ್ಸು ತಂದುಕೊಟ್ಟ ನಂತರ ಅಣ್ಣ-ತಂಗಿ ಸೆಂಟಿಮೆಂಟಿಗೆ ಅವರು ಜೋತು ಬಿದ್ದಿದ್ದರು. ಅಣ್ಣ ತಂಗಿ, ಹೆತ್ತವರ ಕನಸು, ಹೆತ್ತರೆ ಹೆಣ್ಣನ್ನೇ ಹೆರಬೇಕು ಮುಂತಾದ ಚಿತ್ರಗಳನ್ನು ನೀಡಿ ಕಣ್ಣೀರಿನ ಹೊಳೆಹರಿಸಿದ್ದರು. ಚಿತ್ರರಂಗದಲ್ಲಿ ಯಶಸ್ಸು ಎನ್ನುವುದು ನೀರಿನ ಮೇಲಿನ ಗುಳ್ಳೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಚಿತ್ರ ನಿರ್ಮಿಸಿ ಮನೆಮಠ ಕಳೆದುಕೊಂಡವರು ಇಂದು ಬೀದಿಗೆ ಬಿದ್ದಿದ್ದಾರೆ. ಸುಮಾರು 80 ಕೌಟುಂಬಿಕ ಚಿತ್ರಗಳನ್ನು ನಿರ್ದೇಶಿಸಿರುವ ಸಾಯಿಪ್ರಕಾಶ್ ಅವರಿಗೆ ದೇವರು ಕೊಟ್ಟ ತಂಗಿ ಭಾರೀ ಪ್ರಮಾಣದಲ್ಲಿ ಕೈಕೊಟ್ಟಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada