»   »  ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?

ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?

Subscribe to Filmibeat Kannada

*ಜಯಂತಿ

Why Kapali theatre is running empty?
ಇದು ಕಪಾಲಿ ಚಿತ್ರಮಂದಿರಕ್ಕೆ ಅನ್ವಯಿಸುವ ಮಾತು. 'ಜೋಗಿ' ನಂತರ ಈ ಚಿತ್ರಮಂದಿರದಲ್ಲಿ ಸಿನಿಮಾಗಳು ಕಚ್ಚಿಕೊಂಡ ಉದಾಹರಣೆ ಅಪರೂಪ. 'ಚೆಲುವಿನ ಚಿತ್ತಾರ' ಹಾಗೂ 'ನಂದ ನಂದಿತಾ' ಒಂದಿಷ್ಟು ಹಣ ಮಾಡಿದ್ದನ್ನು ಬಿಟ್ಟರೆ ಇದು ಗಾಂಧಿನಗರದ ಪಾಲಿಗೆ ಅಷ್ಟೇನೂ ಒಳ್ಳೆ ಚಿತ್ರಮಂದಿರ ಅನ್ನಿಸಿಕೊಂಡಿಲ್ಲ. ಅದಕ್ಕೆ ಚಿತ್ರಮಂದಿರ ಹೊಣೆಯಲ್ಲ. ಹಾಗಿದ್ದೂ ಗಾಂಧಿನಗರದಲ್ಲಿ ಜ್ಯೋತಿಷಿಗಳ ಮಾತು ನಂಬುವವರು ತಲೆಗೊಂದರಂತೆ ಅಭಿಪ್ರಾಯ ಮಂಡಿಸುತ್ತಿದ್ದಾರೆ.

ಚಿತ್ರಮಂದಿರದ ಎದುರಲ್ಲೇ ಒಂದು ತೆಂಗಿನಮರವಿದೆ. ಆ ಕಾರಣಕ್ಕೇ ಸಿನಿಮಾಗಳಿಗೆ ಲತ್ತೆ ಹೊಡೆಯುತ್ತಿದೆ ಅಂತ ಕೆಲವು ಜ್ಯೋತಿಷಿಗಳು ಹೇಳಿದ್ದಾರಂತೆ. ಚಿತ್ರಮಂದಿರದಲ್ಲಿ ಪಾರ್ಕಿಂಗ್ ಶುಲ್ಕ ವಸೂಲು ಮಾಡುವವರು ಈ ವಿಷಯ ಮಾತಾಡುತ್ತಾ, ತಮಾಷೆ ಮಾಡುವುದುಂಟು.

ಕಪಾಲಿಯಲ್ಲಿ ತೆರೆಕಂಡ 'ಗುಲಾಮ' ಎರಡನೇ ವಾರಕ್ಕೇ ಬಾಡಿಗೆ ಹುಟ್ಟಿಸಿಕೊಳ್ಳಲು ಹೆಣಗಾಡಿತ್ತು. ಆಮೇಲೆ ವಿಧಿಯಿಲ್ಲದೆ ಪುನೀತ್ ರಾಜ್‌ಕುಮಾರ್ ಅಭಿನಯದ 'ಬಿಂದಾಸ್' ಚಿತ್ರವನ್ನು ಹಾಕಲಾಯಿತು. ಈಗ 'ಮೇಘವೇ ಮೇಘವೇ' ಮಕಾಡೆಯಾಗಿದೆ. ಎರಡನೇ ದಿನದಿಂದಲೇ ಬಾಡಿಗೆ ಹುಟ್ಟಿಸಿಕೊಳ್ಳಲು ಈ ಸಿನಿಮಾ ಹೆಣಗಾಡಿದೆ. ಮೂರು ದಿನಗಳ ಮಟ್ಟಿಗೆ 'ಮಿಲನ' ಸಿನಿಮಾ ಅಲ್ಲಿ ಓಡುತ್ತಿದೆ.

ಕೆಲವು ತಿಂಗಳ ಹಿಂದೆ 'ಓಂ' ಚಿತ್ರ ಹಾಕುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಪ್ರಮುಖ ಚಿತ್ರಗಳ ನಿರ್ಮಾಪಕರು ಆದಷ್ಟು ಆ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇರಲು ಯೋಚಿಸುತ್ತಿರುವ ಸುದ್ದಿಯಿದೆ. ಅದು ಲಭ್ಯ ಇರುವಾಗಲೂ ಗಣೇಶ, ದರ್ಶನ್, ಪುನೀತ್ ಮೊದಲಾದ ಸ್ಟಾರ್‌ಗಳ ಸಿನಿಮಾಗಳು ತೆರೆಕಾಣದೇ ಇರುವುದು ಇದಕ್ಕೆ ಸಣ್ಣ ಉದಾಹರಣೆ ಅಷ್ಟೆ. ಒಂದು ಕಾಲದಲ್ಲಿ ಪ್ರತಿಷ್ಠಿತ ಚಿತ್ರಮಂದಿರ ಎನ್ನಿಸಿಕೊಂಡಿದ್ದ ಕಪಾಲಿಗೆ ಕವಿದಿರುವ ಈ ಗ್ರಹಣ ಬಿಡುವುದು ಯಾವಾಗಲೋ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada