»   »  ಬೆಂಗಳೂರು ಮಕ್ಕಳ ಮನಸು ಗೆದ್ದ ಗಣೇಶ್, ರಮ್ಯಾ!

ಬೆಂಗಳೂರು ಮಕ್ಕಳ ಮನಸು ಗೆದ್ದ ಗಣೇಶ್, ರಮ್ಯಾ!

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬೆಂಗಳೂರಿನ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ! ಬೆಂಗಳೂರಿನ ಮಕ್ಕಳು ರಮ್ಯಾ ಮತ್ತು ಗಣೇಶ್ ಅವರನ್ನು ಇಷ್ಟಪಟ್ಟಿದ್ದಾರೆ. ಆದರೆ ಬೆಂಗಳೂರಿನ ಯುವಕರು ಮಾತ್ರ ಬಾಲಿವುಡ್ ತಾರೆಗಳಿಗೆ ಹೃದಯ ಕೊಟ್ಟಿದ್ದಾರೆ ಎಂದು ಸಮೀಕ್ಷೆಯೊಂದರಿಂದ ದೃಢಪಟ್ಟಿದೆ!

ಜನಪ್ರಿಯ ಮಕ್ಕಳ ವಾಹಿನಿ ಟರ್ನಲ್ ಇಂಟರ್ ನ್ಯಾಷನಲ್ ಏಷ್ಯಾ ಫೆಸಿಫಿಕ್ ಲಿಮಿಟೆಡ್ ರಾಷ್ಟ್ರೀಯ ಜೀವನಶೈಲಿ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಈ ವಿವರಗಳು ಬಹಿರಂಗವಾಗಿವೆ. ಒಟ್ಟಾರೆಯಾಗಿ ಸಮೀಕ್ಷೆಯಲ್ಲಿ ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್ ಮತ್ತು ಶಾರುಖ್ ಖಾನ್ ಬಹಳಷ್ಟು ಮಂದಿಗೆ ಅಚ್ಚುಮೆಚ್ಚು ಎಂಬುದು ದೃಢಪಟ್ಟಿದೆ. ಆಶ್ಚರ್ಯವೆಂದರೆ ಬೆಂಗಳೂರಿನ ಮಕ್ಕಳು ಗಣೇಶ್ ಮತ್ತು ರಮ್ಯಾರನ್ನು ಇಷ್ಟಪಟ್ಟಿದ್ದಾರೆ!

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ನಾನು ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಬೆರೆಯುತ್ತೇನೆ. ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಸಹ ತೆಗೆದುಕೊಳ್ಳುತ್ತೇನೆ. ಈ ಕಾರಣಕ್ಕೆ ಇರಬೇಕು ಮಕ್ಕಳಿಗೆ ತಾನು ಇಷ್ಟವಾಗಿರುವುದು ಎನ್ನುತ್ತಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಗೋಲ್ಡನ್ ಸ್ಟಾರ್ ಗಣೇಶ್ ಮಾತಿಗೆ ಸಿಕ್ಕಿಲ್ಲ.

ಬೆಂಗಳೂರು ಸೇರಿದಂತೆ ದೇಶದ 15 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಹೈದರಾಬಾದ್, ಲೂಧಿಯಾನ, ಜೈಪುರ, ಲಕ್ನೊ, ಗುವಾಹಟಿ, ನಾಸಿಕ್, ಇಂದೋರ್, ಕೊಚ್ಚಿ ಮತ್ತು ಮಧುರೈ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಸಮೀಕ್ಷೆಯಲ್ಲಿ ಒಟ್ಟು 7,874 ಮಂದಿ ಭಾಗವಹಿಸಿದ್ದರು. ಏಳರಿಂದ ಹದಿನಾಲ್ಕು ವರ್ಷದೊಳಗಿನ 3,431 ಮಕ್ಕಳು ಒಬ್ಬೊಬ್ಬ ಪೋಷಕರೊಂದಿಗೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. 1,012 ಪೋಷಕರು ನಾಲ್ಕರಿಂದ ಆರು ವರ್ಷದೊಳಗಿನ ತಮ್ಮ ಮಕ್ಕಳೊಂದಿಗೆ ಭಾಗಿಯಾಗಿದ್ದರು.

ಕ್ರೀಡಾಪಟುಗಳಲ್ಲಿ ಮಕ್ಕಳಿಗೆ ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ, ಯುವರಾಜ್ ಸಿಂಗ್, ಸಾನಿಯಾ ಮಿರ್ಜಾ ಇಷ್ಟವಾಗಿದ್ದಾರೆ. ಮತ್ತೊಂದು ಆಶ್ಚರ್ಯಕರವಾದ ಸಂಗತಿಯೆಂದರೆ ಶೇ.30ರಷ್ಟು ಮಕ್ಕಳು ಸೋನಿಯಾಗಾಂಧಿ ಅವರು ಪ್ರಧಾನ ಮಂತ್ರಿಯಾಗಬೇಕೆಂದು ಆಶಿಸಿದ್ದಾರೆ. ಶೇ.19ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಇಚ್ಛಿಸಿದ್ದಾರೆ. ನಂತರದ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಮತ್ತು ಪ್ರಿಯಾಂಕಾ ಗಾಂಧಿ ಇದ್ದಾರೆ.

ದೇಶದಾದ್ಯಂತ ಮಕ್ಕಳು ಪಾಕೆಟ್ ಮನಿಗಾಗಿ 2009ರಲ್ಲಿ ರು.664ಕೋಟಿ ಖರ್ಚು ಮಾಡಿದ್ದಾರೆ ಎಂಬ ಸ್ವಾರಸ್ಯಕರ ಸಂಗತಿ ಸಮೀಕ್ಷೆಯಲ್ಲಿ ಬೆಳಕು ಕಂಡಿದೆ. ವಿರಾಮದ ವೇಳೆ ಏಳರಿಂದ ಹದಿನಾಲ್ಕು ವಯೋಮಾನದೊಳಗಿನ ಮಕ್ಕಳು ಆನ್ ಲೈನ್ ಗೇಮ್ಸ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಬೆಂಗಳೂರಿನ ಶೇ.25ರಷ್ಟು ಮಕ್ಕಳಿಗೆ ತಾಂತ್ರಿಕತೆಯ ಅರಿವಿದ್ದು ಕಂಪ್ಯೂಟರನ್ನು ಲೀಲಾಜಾಲವಾಗಿ ಬಳಸುವವರಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada